2022ರ ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಭಾರತದ ಆತಿಥ್ಯ?

Update: 2019-12-26 06:21 GMT

ಹೊಸದಿಲ್ಲಿ, ಡಿ.25: ಬರ್ಮಿಂಗ್‌ಹ್ಯಾಮ್ ಗೇಮ್ಸ್‌ನಿಂದ ಹೊರಗಿಟ್ಟಿರುವುದಕ್ಕೆ ಪರಿಹಾರವಾಗಿ ಭಾರತಕ್ಕೆ 2022ರ ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನ ಆತಿಥ್ಯವಹಿಸಿಕೊಳ್ಳುವ ಅವಕಾಶ ಲಭಿಸುವ ಸಾಧ್ಯತೆ ಉಜ್ವಲವಾಗಿದೆ. ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್ ಈ ಕುರಿತು ಅಧಿಕೃತ ಪ್ರಸ್ತಾವ ಸಲ್ಲಿಸುವಂತೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಗೆ(ಐಒಎ)ತಿಳಿಸಿದೆ. ಕಾಮನ್‌ವೆಲ್ತ್ ಗೇಮ್ಸ್ ಫೆಡರೇಶನ್‌ನ ಕ್ರೀಡಾ ಸಮಿತಿಗೆ ಜನವರಿಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬೇಕಾಗಿದ್ದು, ಇದಕ್ಕೆ ಕಾರ್ಯಕಾರಿ ಸಮಿತಿಯ ಮಾನ್ಯತೆ ಲಭಿಸುವ ಮೊದಲು ಬಿಡ್‌ನ್ನು ಸಲ್ಲಿಸಬೇಕಾಗಿದೆ. ಡಿ.5ರಂದು ಮ್ಯೂನಿಚ್‌ನಲ್ಲಿ ಸಿಜಿಎಫ್ ಹಾಗೂ ಅಂತರ್‌ರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್(ಐಎಸ್‌ಎಸ್‌ಎಫ್) ಮಧ್ಯೆ ಸಭೆ ನಡೆದ ವಾರಗಳ ಬಳಿಕ ಈ ಪ್ರತಿಕ್ರಿಯೆ ಲಭಿಸಿದೆ. ಸಭೆಯಲ್ಲಿ ಭಾರತದ ರೈಫಲ್ ಸಂಸ್ಥೆಯ ಅಧ್ಯಕ್ಷ ರಣಿಂದರ್ ಸಿಂಗ್ ಹಾಜರಾಗಿದ್ದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಯಾವಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಜಯಿಸುತ್ತಾ ಬಂದಿದೆ. ಕಳೆದ ವರ್ಷ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ 7 ಚಿನ್ನ ಸಹಿತ ಒಟ್ಟು 16 ಪದಕಗಳನ್ನು ಜಯಿಸಿತ್ತು. 1974ರ ಬಳಿಕ ಇದೇ ಮೊದಲ ಬಾರಿ 2022ರ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಶೂಟಿಂಗ್ ಕ್ರೀಡೆಯನ್ನು ಹೊರಗಿಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News