×
Ad

‘ಪೊಲೀಸ್ ಅಧಿಕಾರಿಗಳಿಗೆ ಬಹುಮಾನ’ ಎಂಬ ಸುದ್ದಿ ಸುಳ್ಳು

Update: 2019-12-26 12:03 IST
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಪತ್ರ 

ಮಂಗಳೂರು, ಡಿ.26: ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆಯ ವೇಳೆ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಪರಿಸ್ಥಿತಿ ನಿಯಂತ್ರಣ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ನಗದು ಬಹುಮಾನ ಘೋಷಿಸಿದ್ದಾರೆ ಎಂಬ ಸುಳ್ಳು ಮಾಹಿತಿಯೊಂದು ಗುರುವಾರ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಇದನ್ನು ನಿಜವೆಂದು ನಂಬಿದ ಕೆಲವರು ಪೊಲೀಸ್ ಆಯುಕ್ತರ ಕ್ರಮಕ್ಕೆ ಶ್ಲಾಘನೆ ಕೂಡಾ ವ್ಯಕ್ತಪಡಿಸಿದರು. ಅಲ್ಲದೆ ದೃಶ್ಯ ಮಾಧ್ಯಮವೊಂದು ಇದನ್ನು ‘ಬ್ರೇಕಿಂಗ್ ನ್ಯೂಸ್’ ಆಗಿ ಬಿತ್ತರಿಸಿತ್ತು. ಈ ‘ಬಹುಮಾನ’ ಸುದ್ದಿ ಕೆಲಕಾಲ ಚರ್ಚೆಗೂ ಗ್ರಾಸವಾಗಿತ್ತು. ಆದರೆ ಈ ಮಾಹಿತಿ ಅಥವಾ ಸುದ್ದಿ ‘ಸುಳ್ಳು’ ಎಂದು ಸ್ವತಃ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಡಿಸಿಪಿ ಅರುಣಾಂಶುಗಿರಿ, ಇನ್‌ಸ್ಪೆಕ್ಟರ್‌ಗಳಾದ ಶಾಂತರಾಮ, ಶರೀಫ್ ಸಹಿತ 148 ಪೊಲೀಸ್ ಅಧಿಕಾರಿ/ಸಿಬ್ಬಂದಿಗೆ 10 ಲಕ್ಷ ರೂ. ಮೊತ್ತದ ನಗದು ಬಹುಮಾನವನ್ನು ನೀಡಲಾಗಿದೆ ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಇದರಲ್ಲಿ ಪೊಲೀಸ್ ಅಧಿಕಾರಿ-ಸಿಬ್ಬಂದಿಯ ಹೆಸರು, ಅವರಿಗೆ ನೀಡಲಾದ ಮೊತ್ತವನ್ನೂ ಉಲ್ಲೇಖಿಸಲಾಗಿತ್ತು. ಮಾಧ್ಯಮ ಸಹಿತ ಎಲ್ಲರೂ ‘ಇದು ನಿಜ’ ಎಂದೇ ಭಾವಿಸಿದ್ದರು. ಆದರೆ, ಇದರಲ್ಲಿ ಆಯುಕ್ತರ ಸಹಿ ಕಾಣದಾದಾಗ ಸಂಶಯ ವ್ಯಕ್ತವಾಗತೊಡಗಿತು. ತಕ್ಷಣ ಕೆಲವು ಮಾಧ್ಯಮ ಮಿತ್ರರು ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಲು ಮುಂದಾದಾಗಲೇ ಇದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಸ್ವತಃ ಖಚಿತಪಡಿಸಿದ್ದರೂ ಸಂದೇಶ ಹರಿದಾಡುತ್ತಲೇ ಇದೆ.

ಪೊಲೀಸ್ ಆಯುಕ್ತರಿಂದ ಡಿ.25ರಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಹುಮಾನದ ಪಟ್ಟಿಯನ್ನು ಕಳುಹಿಸಲಾಗಿದೆ ಎಂದು ಇದರಲ್ಲಿ ಬಿಂಬಿಸಲಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಡಿ.19ರಂದು ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ತೀವ್ರ ಭಂಗ ಉಂಟಾಗಿತ್ತು. ಈ ವೇಳೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿ/ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿದ್ದರು. ಪರಿಸ್ಥಿತಿ ನಿಯಂತ್ರಣಕ್ಕೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಹಗಲು ರಾತ್ರಿ ಅವಿರತವಾಗಿ ಶ್ರಮಿಸಿದ 148 ಪೊಲೀಸ್ ಅಧಿಕಾರಿ/ಸಿಬ್ಬಂದಿಯ ಶ್ಲಾಘನೀಯ ಸೇವೆಯನ್ನು ಗುರುತಿಸಿ ಅವರಿಗೆ ನಗದು ಬಹುಮಾನ ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News