×
Ad

ಮಿಂಚಿದ ಪ್ರದೀಪ್: ಮುಂಬೈ 114ಕ್ಕೆ ಆಲೌಟ್

Update: 2019-12-26 12:09 IST

ಮುಂಬೈ, ಡಿ.25: ರೈಲ್ವೇಸ್‌ವಿರುದ್ಧ ರಣಜಿ ಟ್ರೋಫಿ ಪಂದ್ಯದ ಮೊದಲ ದಿನ ಮುಂಬೈ ತಂಡ ತಿಪ್ಪೇಸ್ವಾಮಿ ಪ್ರದೀಪ್ ದಾಳಿಗೆ ಸಿಲುಕಿ ಮೊದಲ ಇನಿಂಗ್ಸ್‌ನಲ್ಲಿ 28.3 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟಾಗಿದೆ.

ವಾಂಖೆಡೆ ಸ್ಟೇಡಿಯಂನಲ್ಲಿ ಆರಂಭಗೊಂಡ ಪಂದ್ಯದಲ್ಲಿ ಮುಂಬೈಯನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ರೈಲ್ವೇಸ್ ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳ ನಷ್ಟದಲ್ಲಿ 116 ರನ್ ಗಳಿಸಿದೆ. ಟಾಸ್ ಜಯಿಸಿದ ರೈಲ್ವೇಸ್ ಫೀಲ್ಡಿಂಗ್ ಆಯ್ದುಕೊಂಡಿತ್ತು. ರೈಲ್ವೇಸ್ ತಂಡದ ಪ್ರದೀಪ್ 10.3 ಓವರ್‌ಗಳಲ್ಲಿ 37ಕ್ಕೆ 6 ವಿಕೆಟ್ ಉಡಾಯಿಸಿ ಮುಂಬೈ ತಂಡಕ್ಕೆ ಆಘಾತ ನೀಡಿದರು.

ಪ್ರದೀಪ್ ರೈಲ್ವೇಸ್ ತಂಡದ ಪರ ಮೂರನೇ ರಣಜಿ ಪಂದ್ಯವನ್ನಾಡುತ್ತಿದ್ದಾರೆ. ಈ ಹಿಂದೆ ಕರ್ನಾಟಕದ ಪರ ಸಯ್ಯದ್ ಮುಷ್ತಾಕ್ ಅಲಿ ಅಂತರ್‌ರಾಜ್ಯ ಟ್ವೆಂಟಿ-20 ಟೂರ್ನಮೆಂಟ್ ಮತ್ತು ವಿಜಯ್ ಹಝಾರೆ ಟ್ರೋಫಿ ಪಂದ್ಯಗಳನ್ನಾಡಿದ್ದರು. 25ರ ಹರೆಯದ ಪ್ರದೀಪ್ ಉತ್ತರ ಪ್ರದೇಶ ಮತ್ತು ಸೌರಾಷ್ಟ್ರ ವಿರುದ್ಧ ಒಟ್ಟು 4 ವಿಕೆಟ್ ಪಡೆದಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಅವರು ಅಪೂರ್ವ ಯಶಸ್ಸು ಸಾಧಿಸಿದ್ದಾರೆ. ಮುಂಬೈ ತಂಡದ ಆಟಗಾರರು ಪ್ರದೀಪ್ ಪ್ರಹಾರಕ್ಕೆ ಬೆದರಿ ಮೊದಲ ಇನಿಂಗ್ಸ್‌ನ್ನು ಬೇಗನೆ ಮುಗಿಸಿದರು. ಮುಂಬೈ ತಂಡದ ಪರ ನಾಯಕ ಸೂರ್ಯಕುಮಾರ್ ಯಾದವ್ ಗಳಿಸಿರುವ 39 ರನ್ ತಂಡದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಜಯ ಗೋಕುಲ್ ಬಿಸ್ತಾ 21 ರನ್, ಆರಂಭಿಕ ದಾಂಡಿಗ ಪೃಥ್ವಿ ಶಾ 12 ರನ್ ಮತ್ತು ಸಿದ್ದೇಶ್ ಲಾಡ್ 14 ರನ್ ಗಳಿಸಿದರು. ಅಮಿತ್ ಮಿಶ್ರಾ 41ಕ್ಕೆ 3 ಮತ್ತು ಹಿಮಾಂಶು ಸಾಂಗ್ವಾನ್ 33ಕ್ಕೆ 1 ವಿಕೆಟ್ ಪಡೆದರು.

 ರೈಲ್ವೇಸ್ ತಂಡ ಮೊದಲ ಇನಿಂಗ್ಸ್ ಆರಂಭಿಸಿ 2 ರನ್‌ಗಳ ಮುನ್ನಡೆ ಗಳಿಸಿದೆ. ಅರಿಂದಮ್ ಘೋಷ್ ಔಟಾಗದೆ 52 ರನ್ ಮತ್ತು ನಾಯಕ ಕರಣ್ ಶರ್ಮಾ ಔಟಾಗದೆ 24 ರನ್ ಗಳಿಸಿ ಬ್ಯಾಟಿಂಗ್‌ನ್ನು ಎರಡನೇ ದಿನಕ್ಕೆ ಕಾಯ್ದಿರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News