×
Ad

ಸಿಎಎ ನೆಪದಲ್ಲಿ ಸರಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಸಂಚು: ಸಚಿವ ಸಿ.ಟಿ.ರವಿ ಆರೋಪ

Update: 2019-12-26 12:19 IST

ಮಂಗಳೂರು, ಡಿ.26: ಸಿಎಎ ನೆಪದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಸಚಿವ ಸಿ.ಟಿ.ರವಿ ಆರೋಪಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತ್ರಿವಳಿ ತಲಾಖ್, 370ನೆ ವಿಧಿ ರದ್ದು, ಬಾಬರಿ ಮಸ್ಜಿದ್ ತೀರ್ಪು ಇತ್ಯಾದಿ ಸಂದರ್ಭ ದೇಶಾದ್ಯಂತ ಗಲಭೆಯಾಗಬಹುದು ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ಆದರೆ, ಎಲ್ಲೂ ಏನೂ ಆಗಿಲ್ಲ. ಈ ಮಧ್ಯೆ ಸಿಎಎ ಅನುಷ್ಠಾನಕ್ಕೆ ಸಿದ್ಧತೆ ನಡೆಯತೊಡಗಿದಾಗ ಕಾಂಗ್ರೆಸ್ ಗಲಭೆಗೆ ಸಂಚು ಹೂಡಿತು. ಅದಕ್ಕೆ ಕೆಲವು ವಿಚಾರವಾದಿಗಳು, ಅರಾಜಕ ಶಕ್ತಿಗಳನ್ನೂ ಕೂಡ ಬಳಸಿಕೊಂಡಿತು. ಒಟ್ಟಿನಲ್ಲಿ ಸಿಎಎ ನೆಪದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿದೆ ಎಂದರು.

ಕಾಂಗ್ರೆಸ್, ಎಸ್‌ಡಿಪಿಐ, ಪಿಎಫ್‌ಐ ಒಳ ಒಪ್ಪಂದ ಮಾಡಿಕೊಂಡಿವೆ. ಅದರ ಪರಿಣಾಮವಾಗಿಯೇ ಎಲ್ಲೆಡೆ ಹಿಂಸಾಚಾರ ನಡೆಯುತ್ತಿದೆ. ಮಂಗಳೂರಿನ ಗಲಭೆಯಲ್ಲಿ ಅದು ಸಾಬೀತಾಗಿದೆ. ಮಾಜಿ ಸಚಿವ ಯು.ಟಿ.ಖಾದರ್‌ರ ‘ಬೆಂಕಿ’ಯ ಮಾತು ಕೂಡ ಅದಕ್ಕೆ ಸಾಕ್ಷಿಯಾಗಿದೆ. ಖಾದರ್ ಹೀಗೆ ಹೇಳಿದರೂ ಕಾಂಗ್ರೆಸ್ ಯಾಕೆ ವೌನ ವಹಿಸಿವೆ ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಬಲಿಯಾದವರು ಹಿಂಸಾಚಾರದಲ್ಲಿ ಭಾಗಿಯಾದರೆ ಅವರಿಗೆ ಪರಿಹಾರ ಕೊಡಲು ಸಾಧ್ಯವಿಲ್ಲ. ತನಿಖೆಯಿಂದ ಅವರು ಆರೋಪಿಗಳೋ, ಅಮಾಯಕರೋ ಎಂದು ತಿಳಿಯುತ್ತದೆ. ಅಮಾಯಕರಾದರೆ ಪರಿಹಾರ ಕೊಡಲಾಗುವುದು ಎಂದು ಸಿ.ಟಿ.ರವಿ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಬ್ರಿಜೇಶ್ ಚೌಟ, ನಿತಿನ್ ಕುಮಾರ್, ಸಂಜಯ್ ಪ್ರಭು, ಜಿತೇಂದ್ರ ಕೊಟ್ಟಾರಿ, ರಣದೀಪ್ ಕಾಂಚನ್, ನಂದನ್ ಮಲ್ಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News