ರಣಜಿ: ಕರ್ನಾಟಕ 166 ರನ್‌ಗೆ ಆಲೌಟ್
ಮೈಸೂರು,ಡಿ.25: ನಾಯಕ ಕರುಣ್ ನಾಯರ್ ಅರ್ಧಶತಕದ ಕೊಡುಗೆಯ(81)ಹೊರತಾಗಿಯೂ ವೇಗಿಗಳಾದ ಅಭಿನಯ್(5-37)ಹಾಗೂ ರಿಷಿ ಧವನ್(3-27)ವೇಗಕ್ಕೆ ತತ್ತರಿಸಿದ ಆತಿಥೇಯ ಕರ್ನಾಟಕ ತಂಡ ಬುಧವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಮೂರನೇ ಸುತ್ತಿನ ‘ಬಿ’ ಗುಂಪಿನ ಪಂದ್ಯದಲ್ಲಿ ಹಿಮಾಚಲಪ್ರದೇಶ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಕೇವಲ 166 ರನ್ ಗಳಿಸಿ ಆಲೌಟಾಗಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕರ್ನಾಟಕವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಲು ಯಶಸ್ವಿಯಾದ ಹಿಮಾಚಲಪ್ರದೇಶ ದಿನದಾಟದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 17 ಓವರ್‌ಗಳಲ್ಲಿ 29 ರನ್‌ಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.
ತವರು ಮೈದಾನದಲ್ಲಿ ದೊಡ್ಡ ಮೊತ್ತ ಗಳಿಸುವ ಗುರಿಯೊಂದಿಗೆ ಮೊದಲು ಬ್ಯಾಟಿಂಗ್‌ಗೆ ಇಳಿದಿದ್ದ ಕರ್ನಾಟಕ ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್(0) ಹಾಗೂ ವನ್‌ಡೌನ್ ದಾಂಡಿಗ ದೇವದತ್ತ ಪಡಿಕ್ಕಲ್(0) ವಿಕೆಟನ್ನು ಶೂನ್ಯಕ್ಕೆ ಕಳೆದುಕೊಂಡಿತು. ರವಿ ಸಮರ್ಥ್(4) ಹಾಗೂ ದೇಗಾ ನಿಶ್ಚಲ್(16)ಕೂಡ ವಿಕೆಟ್ ಕೈಚೆಲ್ಲಿದಾಗ ಕರ್ನಾಟಕದ ಸ್ಕೋರ್ 30ಕ್ಕೆ 4.
ಆಗ ಜೊತೆಯಾದ ನಾಯಕ ಕರುಣ್ ನಾಯರ್(81, 185 ಎಸೆತ, 8 ಬೌಂಡರಿ)ಹಾಗೂ ಶ್ರೇಯಸ್ ಗೋಪಾಲ್(27, 52 ಎಸೆತ)5ನೇ ವಿಕೆಟ್ ಜೊತೆಯಾಟದಲ್ಲಿ 56 ರನ್ ಸೇರಿಸಿದರು.
ಈ ಜೋಡಿಯನ್ನು ಅರೋರ (2-41) ಬೇರ್ಪಡಿಸಿದರು.
ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಬಿ.ಆರ್. ಶರತ್(2)ಜೆ. ಸುಚಿತ್(10), ಅಭಿಮನ್ಯು ಮಿಥುನ್(21) ಬೇಗನೆ ವಿಕೆಟ್ ಒಪ್ಪಿಸಿದರು. ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದ ಕರುಣ್ ನಾಯರ್ ಔಟಾಗುವುದರೊಂದಿಗೆ ಕರ್ನಾಟಕದ ಮೊದಲ ಇನಿಂಗ್ಸ್ ಹೋರಾಟಕ್ಕೆ ತೆರೆ ಬಿತ್ತು. ಪ್ರತೀಕ್ ಜೈನ್ ವಿಕೆಟ್ ಉರುಳುವುದರೊಂದಿಗೆ ಕರ್ನಾಟಕ 67.2 ಓವರ್‌ಗಳಲ್ಲಿ 166 ರನ್‌ಗೆ ಆಲೌಟಾಯಿತು.
ಮೊದಲ ಇನಿಂಗ್ಸ್ ಆರಂಭಿಸಿರುವ ಹಿಮಾಚಲ ಪ್ರದೇಶ 17 ಓವರ್‌ಗಳಲ್ಲಿ 29 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಪ್ರಶಾಂತ್ ಚೋಪ್ರಾ(5), ಸುಮೀತ್ ವರ್ಮಾ(7) ಹಾಗೂ ಅಂಕಿತ್ ಕಾಲ್ಸಿ(0)ಪೆವಿಲಿಯನ್‌ಗೆ ಪರೇಡ್ ನಡೆಸಿದರು. ಕರ್ನಾಟಕದ ಪರ ಪ್ರತೀಕ್ ಜೈನ್ ಎರಡು ವಿಕೆಟ್(2-11) ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
► ಕರ್ನಾಟಕ ಮೊದಲ ಇನಿಂಗ್ಸ್: 166/10
(ಕರುಣ್ ನಾಯರ್ 81, ಎಸ್.ಗೋಪಾಲ್ 27, ಮಿಥುನ್ 21, ಅಭಿನಯ್ 5-37, ರಿಷಿ ಧವನ್ 3-27, ಅರೋರ 2-41)
► ಹಿಮಾಚಲ ಪ್ರದೇಶ ಮೊದಲ ಇನಿಂಗ್ಸ್: 17 ಓವರ್‌ಗಳಲ್ಲಿ 29/3
(ಖಂಡೂರಿ 14,ಪ್ರತೀಕ್ ಜೈನ್ 2-11)