ಪೌರತ್ವ ಪ್ರತಿರೋಧ: ಬ್ಯಾರಿ ಪಠ್ಯಪುಸ್ತಕ ಸಮಿತಿಗೆ ಇಸ್ಮತ್ ಪಜೀರ್ ರಾಜೀನಾಮೆ

Update: 2019-12-26 07:14 GMT

ಮಂಗಳೂರು, ಡಿ.26: ಪೌರತ್ವ ಹಕ್ಕಿನ ಹೋರಾಟದಲ್ಲಿ ಪಾಲ್ಗೊಂಡವರ ಕಗ್ಗೊಲೆ ಮತ್ತು ಪ್ರತಿಭಟನಾಕಾರರ ಮೇಲೆ ನಡೆಸಲಾದ ಕ್ರೌರ್ಯವನ್ನು ವಿರೋಧಿಸಿ ಬ್ಯಾರಿ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಲೇಖಕ ಇಸ್ಮತ್ ಪಜೀರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

''ರಹೀಂ ಉಚ್ಚಿಲ್ ನೇತೃತ್ವದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಭಾಷಾ ತಜ್ಞನೆಂಬ ನೆಲೆಯಲ್ಲಿ ನವೆಂಬರ್ ತಿಂಗಳಲ್ಲಿ ನನ್ನನ್ನು‌ ಬ್ಯಾರಿ ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯನನ್ನಾಗಿ ಆಯ್ಕೆ ಮಾಡಿತ್ತು.  ಮೊದಲಿಂದಲೂ ಬಲ ಪಂಥೀಯ ರಾಜಕೀಯದ ಕಟ್ಟಾ ವಿರೋಧಿಯಾಗಿದ್ದ ನಾನು ನನ್ನ ಹಲವು ಗೆಳೆಯರ ಮತ್ತು ಹಿತೈಷಿಗಳ ಒತ್ತಡದ ಮೇರೆಗೆ ಆ ಹುದ್ದೆಯನ್ನು ಒಪ್ಪಿಕೊಂಡಿದ್ದೆ. ಪಠ್ಯ ಪುಸ್ತಕ ರಚನಾ ಸಮಿತಿಯೆಂದರೆ ಅದೊಂದು ಶೈಕ್ಷಣಿಕವಾದ ಹುದ್ದೆಯೇ ಹೊರತು ರಾಜಕೀಯ ಅಲ್ಲವಾದುದರಿಂದಲೇ ಆ ಹುದ್ದೆಯನ್ನು ಒಪ್ಪಿದ್ದೆ. ಮತ್ತು ಈಗಾಗಲೇ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರೊಂದಿಗೆ ನಡೆದ ಸಭೆಯನ್ನೂ ಸೇರಿದಂತೆ ಎರಡು ಸಭೆಗಳಲ್ಲಿ ಭಾಗವಹಿಸಿದ್ದೆ.''

''ನಾವು ಯಾವ ಭಾಷೆಯ ಪಠ್ಯ ರಚಿಸಬೇಕೋ ಆ ಜನಾಂಗದ ಜನತೆ ತಮ್ಮ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಕೇಡುಗಾಲದಲ್ಲಿ ನಾನು ಆ ಹುದ್ದೆಯಲ್ಲಿ ಮುಂದುವರಿಯುವುದು ನನಗೆ ನಾನೇ ಮಾಡುವ ಆತ್ಮದ್ರೋಹವಾಗುತ್ತದೆ. ಹೋರಾಟಗಾರರ ಕಗ್ಗೊಲೆ ಮತ್ತು ಅವರ ಮೇಲೆ ಎಸಗಲಾದ ಕ್ರೌರ್ಯವನ್ನು ಕಂಡೂ ಮೂಲತಃ ಪ್ರಗತಿಪರ ಚಳವಳಿಗಾರನಾಗಿರುವ ನನಗೆ ನನ್ನ ಪ್ರತಿರೋಧ ತೋರದಿರಲು ಸಾಧ್ಯವಿಲ್ಲ. ಲೇಖಕನೊಬ್ಬ ತನ್ನ ಕಾಲದ ಸಾಮಾಜಿಕ, ರಾಜಕೀಯ ಆಗು ಹೋಗುಗಳಿಗೆ ಧ್ವನಿಯಾಗದಿದ್ದರೆ ಬದುಕಿದ್ದೂ ಸತ್ತಂತೆ'' ಎಂದು ಇಸ್ಮತ್ ಪಜೀರ್ ತನ್ನ ರಾಜೀನಾಮೆಗೆ ಕಾರಣ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News