ತಾರತಮ್ಯ ಆರೋಪ: ಇಸ್ಲಾಂಗೆ ಮತಾಂತರಗೊಳ್ಳಲಿರುವ ಸಾವಿರಾರು ದಲಿತರು

Update: 2019-12-26 07:07 GMT

ಹೊಸದಿಲ್ಲಿ: ಹಿಂದು ಬಾಹುಳ್ಯ ಪ್ರದೇಶದಲ್ಲಿ ತಮ್ಮ ಬಗ್ಗೆ ತಾರತಮ್ಯಕಾರಿ ನಿಲುವು ತಳೆಯಲಾಗಿದೆ ಎಂದು ಆರೋಪಿಸಿರುವ ತಮಿಳುನಾಡಿಮ ಕೊಯಂಬತ್ತೂರು ಜಿಲ್ಲೆಯ ಮೆಟ್ಟುಪಾಳಯಂ ಮುನಿಸಿಪಾಲಿಟಿ ವ್ಯಾಪ್ತಿಯ ಸಾವಿರಾರು ದಲಿತರು ತಾವು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಹೇಳಿದ್ದಾರೆ.

'ತಮಿಳ್ ಪುಳಿಗಳ್' ಎಂಬ ಸಂಘಟನೆ ಇತ್ತೀಚೆಗೆ ನಡೆದ ತನ್ನ ರಾಜ್ಯ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಡಿಸೆಂಬರ್ 2ರಂದು ಗೋಡೆ ಕುಸಿತ ಘಟನೆಯಲ್ಲಿ 17 ಮಂದಿ ಮೃತಪಟ್ಟ ನಡೂರ್ ಎಂಬಲ್ಲಿನ ದಲಿತರಿಗೆ ಮಾಡಲಾಗಿರುವ ಅನ್ಯಾಯದಿಂದ ನೊಂದು ಅವರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಸುಮಾರು 3,000 ದಲಿತರು ಇಸ್ಲಾಂ ಧರ್ಮಕ್ಕೆ ಜನವರಿ 5ರಂದು ಮತಾಂತರಗೊಳ್ಳಲಿದ್ದಾರೆಂದು ತಿಳಿದು ಬಂದಿದೆ.

ಡಿಸೆಂಬರ್ 2ರ ಮುಂಜಾನೆ ನಡೂರು ಗ್ರಾಮದಲ್ಲಿ 15 ಅಡಿ ಎತ್ತರದ ಕಂಪೌಂಡ್ ಗೋಡೆ ಹತ್ತಿರದ ನಾಲ್ಕು ಹೆಂಚಿನ ಮನೆಗಳ ಮೇಲೆ ಉರುಳಿ 10 ಮಹಿಳೆಯರು ಹಾಗೂ ಇಬ್ಬರು ಮಕ್ಕಳೂ ಸೇರಿದಂತೆ 17 ದಲಿತರು ಬಲಿಯಾಗಿದ್ದರು.  ಈ ಕಂಪೌಂಡ್ ಗೋಡೆ ನಿರ್ಮಿಸಿದ್ದ ಕಟ್ಟಡದ ಮಾಲಕನನ್ನು ಪೊಲೀಸರು ಬಂಧಿಸಿದ್ದರೂ ಆತನನ್ನು ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ದಲಿತರನ್ನು ಆಕ್ರೋಶಕ್ಕೀಡು ಮಾಡಿತ್ತು. ಆರೋಪಿ ಶಿವಸುಬ್ರಹ್ಮಣ್ಯನ್ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯಂತೆ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದಾರೆಂದು ದಲಿತರು ದೂರಿದ್ದಾರೆ.

ಘಟನೆಗೆ ಕಾರಣರಾದವರನ್ನು 20 ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾದರೆ, ನ್ಯಾಯ ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಂಘಟನೆಯ ಅಧ್ಯಕ್ಷ ನಾಗೈ ತಿರುವಲ್ಲುವನ್ ಅವರನ್ನು ಕೊಯಂಬತ್ತೂರಿನಲ್ಲಿ ಬಂಧಿಸಲಾಗಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಇಲವೆನಿಲ್ ಆರೋಪಿಸಿದ್ದಾರೆ.

ದಲಿತರನ್ನು ಮೇಲ್ಜಾತಿಯವರಿಂದ ಪ್ರತ್ಯೇಕಿಸಲು ಈ ಕಂಪೌಂಡ್ ಗೋಡೆ ನಿರ್ಮಿಸಲಾಗಿತ್ತೆಂದು ದಲಿತರು ಹೇಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News