ಮುಹಮ್ಮದ್ ಶಮಿ ಅತ್ಯಂತ ಯಶಸ್ವಿ ಏಕದಿನ ಬೌಲರ್

Update: 2019-12-26 07:28 GMT

ಹೊಸದಿಲ್ಲಿ , ಡಿ. 25: ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 21 ಪಂದ್ಯಗಳಲ್ಲಿ 42 ವಿಕೆಟ್ ಪಡೆಯವ ಮೂಲಕ 2019ನೇ ವರ್ಷದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.

ಶಮಿ ಅವರೊಂದಿಗೆ ಭುವನೇಶ್ವರ ಕುಮಾರ್ ಉತ್ತಮ ಸಾಧನೆ ಮಾಡಿದ್ದಾರೆ. ಸ್ಪಿನ್ನರ್‌ಗಳ ಪೈಕಿ ಕುಲದೀಪ್ ಯಾದವ್ 32 ವಿಕೆಟ್ ಮತ್ತು ಯಜುವೇಂದ್ರ ಚಹಾಲ್ 29 ವಿಕೆಟ್‌ಗಳನ್ನು ಪಡೆದಿದ್ದಾರೆ.

 ನ್ಯೂಝಿಲ್ಯಾಂಡ್‌ನ ಟ್ರೆಂಟ್ ಬೌಲ್ಟ್ ಮತ್ತು ಲ್ಯುಕ್ ಫರ್ಗ್ಯುಸನ್ ಮತ್ತು ಬಾಂಗ್ಲಾದೇಶದ ವೇಗಿ ಮುಸ್ತಫಿಝುರ್ರಹ್ಮಾನ್ ಗರಿಷ್ಠ ವಿಕೆಟ್ ಗಳಿಸಿರುವ ಐವರು ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶಮಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. 2014ರಲ್ಲಿ 38 ವಿಕೆಟ್ ಪಡೆದಿದ್ದರು. ಶಮಿ 2014ರಲ್ಲಿ ವರ್ಷವಿಡೀ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೂರು ಪಂದ್ಯಗಳಲ್ಲಿ ಮಾತ್ರ ವಿಕೆಟ್ ಇಲ್ಲದೆ ಬರಿಗೈಯಲ್ಲಿ ವಾಪಸಾಗಿದ್ದರು. ಈ ವರ್ಷ ವಿಶ್ವಕಪ್‌ನಲ್ಲೂ ಯಶಸ್ವಿಯಾಗಿದ್ದರು. ಅವರಿಗೆ ಅವಕಾಶ ಸಿಕ್ಕಿದ್ದು ಕಡಿಮೆ. ಕೇವಲ 4 ಪಂದ್ಯಗಳಲ್ಲಿ ಅವರು 14 ವಿಕೆಟ್ ಕಬಳಿಸಿದ್ದರು. ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ಗಳಿಸಿದ್ದರು. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ 69ಕ್ಕೆ 5 ವಿಕೆಟ್ ಉಡಾಯಿಸಿದ್ದರು.

► ಟ್ರೆಂಟ್ ಬೌಲ್ಟ್(ನ್ಯೂಝಿಲ್ಯಾಂಡ್): ನ್ಯೂಝಿಲ್ಯಾಂಡ್‌ನ ವೇಗಿ ಟ್ರೆಂಟ್ ಬೌಲ್ಟ್ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ 2ನೇ ಸ್ಥಾನ ಗಳಿಸಿದ್ದಾರೆ. ಅವರು 20 ಪಂದ್ಯಗಳಲ್ಲಿ 38 ವಿಕೆಟ್ ಗಳಿಸಿದ್ದಾರೆ.

ನ್ಯೂಝಿಲ್ಯಾಂಡ್ ವಿಶ್ವಕಪ್‌ನಲ್ಲಿ ಎರಡನೇ ಸ್ಥಾನ ಗಳಿಸಿತ್ತು. ಬೌಲ್ಟ್ ಎರಡು ಬಾರಿ 4 ವಿಕೆಟ್ ಗಿಟ್ಟಿಸಿಕೊಂಡಿದ್ದರು. ವಿಂಡೀಸ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ 51ಕ್ಕೆ 4 ಮತ್ತು ಆಸ್ಟ್ರೇಲಿಯ ವಿರುದ್ಧ ಲಾರ್ಡ್ಸ್‌ನಲ್ಲಿ 51ಕ್ಕೆ 4 ವಿಕೆಟ್ ಪಡೆದಿದ್ದರು. ಈ ವರ್ಷದ ಜನವರಿ 31ರಂದು ಭಾರತದ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ 21ಕ್ಕೆ 5 ವಿಕೆಟ್‌ಗಳನ್ನು ಪಡೆದಿದ್ದರು. ಅವರ ಪ್ರದರ್ಶನ 10-4-21-5. ಭಾರತವನ್ನು 30.5 ಓವರ್‌ಗಳಲ್ಲಿ 92ಕ್ಕೆ ಆಲೌಟ್ ಮಾಡಿದ್ದ ನ್ಯೂಝಿಲ್ಯಾಂಡ್ 212 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್‌ಗಳ ಜಯ ಗಳಿಸಿತ್ತು.

► ಲ್ಯುಕ್ ಫರ್ಗ್ಯುಸನ್: ನ್ಯೂಝಿಲ್ಯಾಂಡ್‌ನ ಲ್ಯುಕ್ ಫರ್ಗ್ಯುಸನ್ 17 ಏಕದಿನ ಪಂದ್ಯ ಗಳಲ್ಲಿ 35 ವಿಕೆಟ್ ಕಬಳಿಸಿದ್ದಾರೆ. ಈ ವರ್ಷ 3ನೇ ಯಶಸ್ವಿ ಬೌಲರ್ ಆಗಿದ್ದಾರೆ. ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಫರ್ಗ್ಯುಸನ್ ಎರಡನೇ ಸ್ಥಾನ ಗಳಿಸಿದ್ದಾರೆ. ಅವರು 21ಕ್ಕೆ 9 ವಿಕೆಟ್ ಪಡೆದಿದ್ದರು. ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಅಗ್ರಸ್ಥಾನ ಪಡೆದ ಆಸ್ಟ್ರೇಲಿಯದ ಬೌಲರ್ 10 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದರು. ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್‌ನಲ್ಲಿ 37ಕ್ಕೆ 4 ವಿಕೆಟ್ ಗಳಿಸಿದ್ದರು.

► ಮುಸ್ತಫಿಝುರ್ರಹ್ಮಾನ್: ಬಾಂಗ್ಲಾದೇಶ ತಂಡದ ಮುಸ್ತಫಿಝುರ್ರಹ್ಮಾನ್ 16 ಏಕದಿನ ಪಂದ್ಯಗಳಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ 8 ಪಂದ್ಯಗಳಲ್ಲಿ 20 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಎರಡು ಬಾರಿ 5 ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಭಾರತದ ವಿರುದ್ಧ 59ಕ್ಕೆ 5 ಮತ್ತು ಲಾರ್ಡ್ಸ್‌ನಲ್ಲಿ ಪಾಕಿಸ್ತಾನ ವಿರುದ್ಧ 75ಕ್ಕೆ 5 ವಿಕೆಟ್ ಪಡೆದರು. ವಿಶ್ವಕಪ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಜೊತೆ ಮೂರನೇ ಸ್ಥಾನ ಪಡೆದರು.

►  ಭುವನೇಶ್ವರ ಕುಮಾರ್: ಭಾರತದ ವೇಗಿ ಭುವನೇಶ್ವರ ಕುಮಾರ್ 19 ಪಂದ್ಯಗಳಲ್ಲಿ 33 ವಿಕೆಟ್ ಜಮೆ ಮಾಡಿದ್ದಾರೆ. ಅವರು ಈ ವರ್ಷ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪೈಕಿ 5ನೇ ಸ್ಥಾನ ಗಳಿಸಿದ್ದಾರೆ. ಭುವನೇಶ್ವರ ಕುಮಾರ್ ವಿಶ್ವಕಪ್‌ನಲ್ಲಿ 6 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ವರ್ಷ ಅವರ ಅತ್ಯುತ್ತಮ ಪ್ರದರ್ಶನ ವೆಸ್ಟ್ ಇಂಡೀಸ್ ವಿರುದ್ಧ ಪೋರ್ಟ್ ಆಫ್ ಸ್ಪೇನ್‌ನಲ್ಲಿ 31ಕ್ಕೆ 4 ವಿಕೆಟ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News