ಸೂರ್ಯಗ್ರಹಣ: ದೇಶದ ಗಮನಸೆಳೆದ ಚೆರ್ವತ್ತೂರು
ಕಾಸರಗೋಡು, ಡಿ.26: ಈ ದಶಕದ ಕೊನೆಯ ಕಂಕಣ ಸೂರ್ಯಗ್ರಹಣಕ್ಕೆ ಕಾಸರಗೋಡು ಜಿಲ್ಲೆ ಸಾಕ್ಷಿಯಾಯಿತು. ಜಿಲ್ಲೆಯ ಎರಡು ಸ್ಥಳಗಳಲ್ಲಿ ಸಾರ್ವಜನಿಕರಿಗೆ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ 8.04ರಿಂದ 11.04ರ ತನಕ ಸೂರ್ಯಗ್ರಹಣ ಗೋಚರಿಸಿತು,
ಬೆಳಗ್ಗೆ 9:24ರಿಂದ ಸುಮಾರು 2.40 ನಿಮಿಷಗಳ ತನಕ ಪೂರ್ಣ ಸೂರ್ಯಗ್ರಹಣ ಗೋಚರಿಸಿತು. ಚೆರ್ವತ್ತೂರು, ಕಾಡಂಗೋಡು ಮತ್ತು ನೀಲೇಶ್ವರದಲ್ಲಿ ಸೂರ್ಯಗ್ರಹಣ ವಿಕ್ಷಣೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.
ಭಾರತದಲ್ಲೇ ಕಾಸರಗೋಡಿನ ಚೆರ್ವತ್ತೂರಿನಲ್ಲಿ ಮೊದಲು ಸೂರ್ಯಗ್ರಹಣ ಗೋಚರವಾಗಿದ್ದು, ಇದರಿಂದ ಚೆರ್ವತ್ತೂರು ದೇಶದ ಗಮನ ಸೆಳೆದಿತ್ತು.
ಈ ಪ್ರದೇಶದ ಭೌಗೋಳಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂದು ತಾಂತ್ರಿಕ ಸೌಲಭ್ಯಗಳೊಂದಿಗೆ ವೀಕ್ಷಣೆಗೆ ಸ್ಪೇಸ್ ಇಂಡಿಯಾ ಸಂಸ್ಥೆಯ ವ್ಯವಸ್ಥೆ ಮಾಡಿತ್ತು. ವಿಜ್ಞಾನಿಗಳು, ವಿದೇಶಿಯರು ಸೇರಿದಂತೆ ಸಾವಿರಾರು ಮಂದಿ ಚೆರ್ವತ್ತೂರಿಗೆ ತಲಪಿದ್ದರು.
ವಿಶೇಷ ಕನ್ನಡಕಗಳ ಮೂಲಕ ಕೆಲವರು ವೀಕ್ಷಿದರೆ, ಬೃಹತ್ ಪರದೆಯ ಮೂಲಕವೂ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಗ್ರಹಣದ ಹಿನ್ನೆಲೆಯಲ್ಲಿ ಪೇಟೆಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಕೆಲವು ರೂಟ್ ಗಳಲ್ಲೂ 11 ಗಂಟೆ ತನಕ ಬಸ್ಸು ಸಂಚಾರ ಮೊಟಕುಗೊಳಿಸಲಾಗಿತ್ತು.