ಪೌರತ್ವ ಪ್ರತಿಭಟನೆಗಳನ್ನು ಟೀಕಿಸಿದ ಸೇನಾ ಮುಖ್ಯಸ್ಥರಿಗೆ ವಿಪಕ್ಷಗಳ ತಿರುಗೇಟು

Update: 2019-12-26 09:01 GMT

ಹೊಸದಿಲ್ಲಿ: "ದೊಡ್ಡ ಗುಂಪುಗಳನ್ನು ಹಿಂಸೆ ನಡೆಸಲು ಪ್ರೇರೇಪಿಸುವುದು ನಾಯಕತ್ವದ ಲಕ್ಷಣವಲ್ಲ,'' ಎಂದು ದೇಶದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟವನ್ನು ಟೀಕಿಸಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ನೀಡಿರುವ ಹೇಳಿಕೆ ವಿವಾದಕ್ಕೀಡಾಗಿದೆ.

"ಜನರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವವರು ನಾಯಕರು. ಈಗ ದೊಡ್ಡ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯ ಹಾಗೂ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ನೋಡುತ್ತಿದ್ದೇವೆ,  ನಮ್ಮ ನಗರಗಳು ಹಾಗೂ ಪಟ್ಟಣಗಳಲ್ಲಿ ಹಿಂಸೆ ಹಾಗೂ ಲೂಟಿ ನಡೆಸಲು ಕೆಲವರು ಜನರನ್ನು ಪ್ರೇರೇಪಿಸುತ್ತಿದ್ದಾರೆ, ಇದು ನಾಯಕತ್ವವಲ್ಲ.'' ಎಂದು ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಹೇಳಿದರು.

ಡಿಸೆಂಬರ್ 31ರಂದು ನಿವೃತ್ತರಾಗಲಿರುವ ಜನರಲ್ ರಾವತ್ ಇದೇ ಮೊದಲ ಬಾರಿ ಪೌರತ್ವ ಕಾಯಿದೆ ವಿರೋಧಿ ಪ್ರತಿಭಟನೆಗಳ ಕುರಿತು ಈ ಹೇಳಿಕೆ ನೀಡಿದ್ದಾರೆ. ಆದರೆ ಅವರ ಹೇಳಿಕೆ ಕಾಂಗ್ರೆಸ್ ಸಹಿತ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.

"ಸೇನಾ ಮುಖ್ಯಸ್ಥರು ಪ್ರತಿಭಟನೆಗಳ ವಿರುದ್ಧ ಮಾತನಾಡುತ್ತಿರುವುದು ಸಂವಿಧಾನಿಕ ಪ್ರಜಾಪ್ರಭುತ್ವದ ವಿರುದ್ಧವಾಗಿದೆ. ಸೇನೆಯ ಮುಖ್ಯಸ್ಥರಿಗೆ ಇಂದು ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಲು ಅನುಮತಿಸಿದರೆ ನಾಳೆ ಅವರಿಗೆ ಸೇನೆಯನ್ನು ವಶಕ್ಕೆ ಪಡೆದುಕೊಳ್ಳುವ ಯತ್ನಕ್ಕೂ ಅನುಮತಿ ದೊರೆಯಬಹುದು,'' ಎಂದು ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ ಟ್ವೀಟ್ ಮಾಡಿದ್ದಾರೆ.

ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ನಾಯಕ ಅಸಾಸುದ್ದೀನ್ ಓವೈಸಿ ಕೂಡ ಟ್ವೀಟ್ ಮಾಡಿ "ನಾಯಕತ್ವ ಎಂದರೆ ಒಬ್ಬರ ಅಧಿಕಾರದ  ಮಿತಿಯನ್ನು ಕೂಡ ತಿಳಿದಿರುವುದು. ನೀವು ನೇತೃತ್ವ ವಹಿಸಿರುವ ಸಂಸ್ಥೆಯ ಸರ್ವಭೌಮತ್ವವನ್ನು ಕಾಪಾಡುವುದು ನಾಯಕತ್ವ,'' ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News