×
Ad

ಪೇಜಾವರಶ್ರೀ: ಪ್ರಜ್ಞಾ ಸ್ಥಿತಿಯಲ್ಲಿ ಕಾಣದ ಸುಧಾರಣೆ

Update: 2019-12-26 20:02 IST

ಉಡುಪಿ, ಡಿ. 26: ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಗಾಗಿ ಕಳೆದ ಡಿ.20ರಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಆರೋಗ್ಯ ಸ್ಥಿತಿಯಲ್ಲಿ ಗಣನೀಯವಾದ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಗುರುವಾರ ಸಂಜೆ ಬಿಡುಗಡೆಗೊಳಿಸಿದ ವೈದ್ಯಕೀಯ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.

ಪೇಜಾವರಶ್ರೀಗಳ ಆರೋಗ್ಯ ಗಂಭೀರವಾಗಿಯೇ ಇದ್ದು, ನಿನ್ನೆಯಿಂದ ಅವರ ಪ್ರಜ್ಞಾ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿಲ್ಲ. ಅವರು ಇನ್ನು ಕೂಡಾ ಜೀವರಕ್ಷಕ ಸಾಧನಗಳ ಅಳವಡಿಕೆಯಲ್ಲಿ ಇದ್ದಾರೆ. ಅವರಿಗೆ ಈಗಲೂ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಬುಲೆಟಿನ್ ತಿಳಿಸಿದೆ.

ಸುತ್ತೂರು ಶ್ರೀಗಳ ಭೇಟಿ: ಗುರುವಾರ ಪೇಜಾವರಶ್ರೀಗಳ ಆರೋಗ್ಯ ಸ್ಥಿತಿ- ಗತಿ ವಿಚಾರಿಸಲು ಮೈಸೂರು ಸುತ್ತೂರು ಶಿವರಾತ್ರೀಶ್ವರ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಆಸ್ಪತ್ರೆಗೆ ಭೇಟಿ ನೀಡಿದರು. ನಾಗಾಲ್ಯಾಡಿನ ಮಾಜಿ ರಾಜ್ಯಪಾಲ, ಉಡುಪಿಯವರಾದ ಪಿ.ಬಿ.ಆಚಾರ್ಯ ಅವರು ದೂರವಾಣಿ ಕರೆ ಮಾಡಿ ಶ್ರೀಗಳ ಚೇತರಿಕೆಗಾಗಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ತಮ್ಮ ಶಿಷ್ಯರೊಂದಿಗೆ ಶ್ರೀಕೃಷ್ಣ ಮಠದ ಮಧ್ವ ಸರೋವರದಲ್ಲಿ ಸ್ನಾನ ಮಾಡಿ, ಗ್ರಹಣ ಮುಗಿಯುವವರೆಗೆ ಅಲ್ಲೇ ಗುರುಗಳ ಶ್ರೇಯಸ್ಸಿಗಾಗಿ ಜಪಾನುಷ್ಠಾನ ನಡೆಸಿದರು. ಗ್ರಹಣ ಮುಗಿದ ಬಳಿಕ ಸ್ನಾನಾದಿ ಮುಗಿಸಿ ಮತ್ತೆ ಮಣಿಪಾಲ ಆಸ್ಪತ್ರೆಗೆ ತೆರಳಿದರು. ಕಳೆದ ನಾಲ್ಕು ದಿನಗಳಿಂದ ಉಡುಪಿಯಲ್ಲೇ ಮೊಕ್ಕಾಂ ಹೂಡಿರುವ ಮಾಜಿ ಕೇಂದ್ರ ಸಚಿವೆ ಹಾಗೂ ಪೇಜಾವರಶ್ರೀಗಳ ಶಿಷ್ಯೆ ಉಮಾಭಾರತಿ ಇಂದು ಗ್ರಹಣ ಕಾಲದುದ್ದಕ್ಕೂ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಜಪ ನಡೆಸಿದರು.

ಟಿಟಿಡಿ ದಾಸ ಪ್ರಾಜೆಕ್ಟ್‌ನ ಮುಖ್ಯಸ್ಥ ಆನಂದತೀರ್ಥಾಚಾರ್ ಪಗಡಾಲ ಅವರು ಇಂದು ಶ್ರೀಗಳನ್ನು ಭೇಟಿ ಮಾಡಿ ತಿರುಪತಿ ತಿಮ್ಮಪ್ಪನ ವಿಶೇಷ ಪ್ರಸಾದ ಒಪ್ಪಿಸಿದರು.

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ, ಮೈಸೂರಿನ ಕೃಷ್ಣಧಾಮ, ಚೆನ್ನೈ ಶ್ರೀನಗರದ ಕೃಷ್ಣಮಂದಿರ, ಬಾಗಲಕೋಟೆ, ರಾಮೇಶ್ವರ, ತಿರುಮಲ ತಿರುಪತಿ, ಹುಬ್ಬಳ್ಳಿ, ಹಾಸನ, ಹರಿದ್ವಾರ, ದೆಹಲಿ ಸೇರಿದಂತೆ ದೇಶದಲ್ಲಿರುವ ಪೇಜಾವರ ಮಠದ ಎಲ್ಲಾ ಶಾಖೆಗಳಲ್ಲಿ ಇಂದು ಪೇಜಾವರಶ್ರೀಗಳ ದುರಿತ ನಿವಾರಣೆಗೆ ಹಾಗೂ ದೀರ್ಘಾಯುಷ್ಯ ಕೋರಿ ವಿಶೇಷ ಪ್ರಾರ್ಥನೆ, ಜಪ ಪಾರಾಯಣ, ಹೋಮಹವನಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News