×
Ad

ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮುಖೇನ ತನಿಖೆ ನಡೆಸಬೇಕು : ಬಿಎಸ್ಪಿ

Update: 2019-12-26 20:38 IST

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಗರದಲ್ಲಿ ಡಿ.19ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪ್ರಕರಣದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಾಧೀಶರ ಮುಖೇನ ಸಮಗ್ರ ತನಿಖೆ ನಡೆಸುವಂತೆ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಜಿಲ್ಲಾ ಘಟಕ ಸರಕಾರವನ್ನು ಆಗ್ರಹಿಸಿದೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ವಿಭಾಗೀಯ ರಾಜ್ಯ ಕಾರ್ಯದರ್ಶಿ ವೇಲಾಯುಧನ್ ಮಾತನಾಡಿ, ಹಿಂಸಾಚಾರದಿಂದ ಅಬ್ದುಲ್ ಜಲೀಲ್ ಮತ್ತು ನೌಶೀನ್ ಎಂಬವರು ಮೃತಪಟ್ಟಿದ್ದು, ಈ ಘಟನೆ ಖಂಡನೀಯ ಹಾಗೂ ಪ್ರತಿಭಟನೆ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಅಸಮರ್ಥರಾಗಿದ್ದು ಕೂಡಲೇ ಅವರನ್ನು ಸೇವೆಯಿಂದ ಅನಾತುಗೊಳಿಸಿ, ಕಾನೂನು ಕ್ರಮಕೈಗೊಳ್ಳಬೇಕು. ಖಾಸಗಿ ಆಸ್ಪತ್ರೆ ಒಳಗೆ ನುಗ್ಗಿದ ಪೊಲೀಸರು ಕಾರ್ಯಾಚರಣೆ ನೆಪದಲ್ಲಿ ಆಶ್ರುವಾಯು ಸಿಡಿಸಿದ್ದು, ಆಸ್ಪತ್ರೆಯ ಸಿಬ್ಬಂದಿಗೆ ಭಯಭೀತಿ ಹುಟ್ಟಿಸಿದ್ದಾರೆ. ಈ ಅಮಾನವೀಯ ಕೃತ್ಯ ಮಾನವ ಹಕ್ಕು ಉಲ್ಲಂಘಟನೆಯಾಗಿದೆ. ಪೊಲೀಸ್ ಗೋಲಿಬಾರ್‌ನಿಂದ ಮೃತರಾದ ಕುಟುಂಬ ಮಕ್ಕಳ ಭವಿಷ್ಯಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಜನರಿಗೆ ಜಾಗೃತಿ ನೀಡಲಿ: ಕೇಂದ್ರ ಸರಕಾರವು ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯ ಬಗ್ಗೆ ಜನರಲ್ಲಿ ಸಮರ್ಪಕ ಮಾಹಿತಿಯಿಲ್ಲದ ಕಾರಣ ದೇಶಾದ್ಯಂತ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿದೆ. ಕೂಡಲೇ ಈ ಬಗ್ಗೆ ಜಾಗೃತಿಯವನ್ನು ಮೂಡಿಸುವ ಕೆಲಸ ಮಾಡಬೇಕು. ಒಂದು ವೇಳೆ ಇದು ಸಂವಿಧಾನ ವಿರೋಧಿ ನಿಲುವು ಆಗಿದ್ದರೆ ಕೂಡಲೇ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಹುಜನ ಸಮಾಜ ಪಕ್ಷ ಜಿಲ್ಲಾಧ್ಯಕ್ಷ ದಾಸಪ್ಪ ಎಡಪದವು, ಬಹುಜನ ಸಮಾಜ ಪಕ್ಷ ದ.ಕ. ಜಿಲ್ಲಾ ಉಸ್ತುವಾರಿ ಗೋಪಾಲ ಮುತ್ತೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News