×
Ad

ಸಾವಿನ ಮನೆಯಲ್ಲೂ ರಾಜಕೀಯ ಸರಿಯಲ್ಲ: ಯು.ಟಿ.ಖಾದರ್

Update: 2019-12-26 20:41 IST

ಮಂಗಳೂರು, ಡಿ.26: ಮಂಗಳೂರು ಗಲಭೆಯಲ್ಲಿ ಸಾವನ್ನಪ್ಪಿದ ಕುಟುಂಬಕ್ಕೆ ಪರಿಹಾರ ನೀಡಿ ಮತ್ತೆ ಯಾರದೋ ಮಾತು ಕೇಳಿ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿರುವುದು ಜಿಲ್ಲೆಯ ಜನರಿಗೆ ನೋವು ತಂದಿದೆ. ಸಾವಿನ ಮನೆಯಲ್ಲಿ ರಾಜಕೀಯ ಸರಿಯಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಘೋಷಣೆ ಮಾಡಿದ ಪರಿಹಾರ ಹಿಂದೆ ಪಡೆದಿರುವುದು ಯಾಕೆ ಎಂಬುದನ್ನು ಮುಖ್ಯಮಂತ್ರಿ ಜನತೆಗೆ ತಿಳಿಸಬೇಕು. ಇದು ಕೇವಲ ಪರಿಹಾರದ ವಿಷಯವಲ್ಲ. ನೊಂದವರಿಗೆ ನ್ಯಾಯ ದೊರೆಯಬೇಕಿದೆ ಎಂದರು.

ಸರಕಾರ ಪರಿಹಾರ ನೀಡದಿದ್ದರೆ, ಸಾರ್ವಜನಿಕರು ಸೇರಿ ಇದಕ್ಕಿಂತ ಹೆಚ್ಚಿನ ಪರಿಹಾರವನ್ನು ಸಂಗ್ರಹಿಸಿ ನೀಡಬಲ್ಲೆವು. ನೀವೆಷ್ಟೇ ಸಮಾಜವನ್ನು ವಿಭಜಿಸಿದರೂ ಸರ್ವ ಧರ್ಮದ ಸಹೋದರತೆ ಬಲಿಷ್ಠವಾಗಿದೆ. ಆದರೆ ನೊಂದಿರುವ ಕುಟುಂಬಕ್ಕೆ ಸಮಾಧಾನ ಪಡಿಸುವ ಬದಲು ಅವಮಾನ ಮಾಡುವ ಪ್ರವೃತ್ತಿ ಸರಕಾರದಿಂದ ಆಗಬಾರದು ಎಂದರು.

ಹಿಂದೆ ಮುಲ್ಕಿಯಲ್ಲಿ ಗೋಲಿಬಾರ್ ಆದಾಗ ಪರಿಹಾರ ನೀಡಲಾಗಿತ್ತು. ಆದರೆ ಈ ಮಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿ ತಮಗೆ ಬೇಕಾದಂತೆ ವಿಡಿಯೋ ಪುಟೇಜ್ ಬಿಡುಗಡೆ ಮಾಡಲಾಗುತ್ತಿದೆ. ಗಲಭೆ ವಿಚಾರದಲ್ಲಿ ಸರಕಾರ ಗೊಂದಲ ಉಂಟು ಮಾಡುತ್ತಿದ್ದು, ಇದರ ಉದ್ದೇಶವೇನು ಎಂದು ಅವರು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನು ಸಭೆ ಕರೆದು ಧೈರ್ಯ ತುಂಬುವ ಕೆಲಸ ಮಾಡಬೇಕು. ಈ ಘಟನೆ ವಿಭಿನ್ನ ಧರ್ಮಗಳ ಜನರ ನಡುವೆ ಆಗಿದ್ದಲ್ಲ. ಹಾಗಿದ್ದರೂ ಸರಕಾರ ಕಣ್ಣುಮುಚ್ಚಾಲೆ ಯಾಕೆ ಮಾಡುತ್ತಿದೆ. ಅಂದು ಘಟನೆ ನಡೆದು ಹೋಗಿದೆ. ಅದರ ಬಗ್ಗೆ ನೋವಿದೆ, ಖೇದವಿದೆ, ತಪ್ಪಿತಸ್ಥರು ಯಾರೇ ಆಗಿರಲಿ. ನ್ಯಾಯಾಂಗ ತನಿಖೆ ಆಗಲಿ. ಘಟನೆ ಆರಂಭದಿಂದ ಕೊನೆಯವರೆಗಿನ ಎಲ್ಲಾ ಘಟನೆಗಳ ಸಮಗ್ರ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು.

ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನ ಇರುವವರೆಗೆ ಎನ್‌ಆರ್‌ಸಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಸರಕಾರ ನಡೆಸುವವರಿಗೆ ಸ್ಪಷ್ಟತೆ ಬೇಕು. ದಿನಕ್ಕೊಂದು ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಕೆಲಸ ಆಗಬಾರದು. ಪರಿಹಾರ ನೀಡುವುದಾಗಿ ಹೇಳಿ ಇದೀಗ ಪರಿಶೀಲಿಸುವ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಕ್ಷಮೆಯಾಚಿಸಬೇಕು ಎಂದು ಯು.ಟಿ.ಖಾದರ್ ಹೇಳಿದರು.

ಗೋಷ್ಠಿಯಲ್ಲಿ ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಮುಹಮ್ಮದ್ ಮೋನು, ಸಂತೋಷ್ ಕುಮಾರ್ ಶೆಟ್ಟಿ, ಈಶ್ವರ್ ಉಳ್ಳಾಲ್, ಎನ್.ಎಸ್. ಕರೀಂ, ಜಬ್ಬಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News