ಉ.ಪ್ರದೇಶ: ಸಂತ್ರಸ್ತ ಕುಟುಂಬಗಳ ಭೇಟಿ ಸಂದರ್ಭ ಮುಸ್ಲಿಮ್ ಕುಟುಂಬವನ್ನು ಕಡೆಗಣಿಸಿದ ಸಚಿವರು; ಆರೋಪ

Update: 2019-12-26 15:12 GMT

ಲಕ್ನೊ, ಡಿ.26: ಪೌರತ್ವ ಕಾಯ್ದೆ ವಿರೋಧಿಸಿ ಕಳೆದ ಶುಕ್ರವಾರ ನಡೆದ ಪ್ರತಿಭಟನೆ ಸಂದರ್ಭ ಹಿಂಸಾಚಾರದಲ್ಲಿ ಬಾಧಿತ ಕುಟುಂಬಗಳನ್ನು ಗುರುವಾರ ಭೇಟಿಮಾಡಿದ ಉತ್ತರಪ್ರದೇಶದ ಸಚಿವರು ಎರಡು ಮುಸ್ಲಿಮ್ ಕುಟುಂಬದವರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಉತ್ತರಪ್ರದೇಶದ ಸಚಿವ ಕಪಿಲ್‌ದೇವ್ ಅಗರ್‌ವಾಲ್ ಗುರುವಾರ ನೆಹತಾರ್ ಎಂಬ ಗ್ರಾಮಕ್ಕೆ ತೆರಳಿ, ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಓಂರಾಜ್ ಸೈನಿ ಎಂಬವನ ಮನೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ. ಆದರೆ ಹಿಂಸಾಚಾರಕ್ಕೆ ಬಲಿಯಾದ ಇಬ್ಬರು ಮುಸ್ಲಿಮ್ ಯುವಕರ ಮನೆ ಅದೇ ಗ್ರಾಮದಲ್ಲಿದ್ದರೂ ಅಲ್ಲಿಗೆ ಭೇಟಿ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಪತ್ರಿಕಾಗೋಷ್ಟಿಯಲ್ಲಿ ಈ ಕುರಿತು ಮಾಧ್ಯಮದವರು ಪ್ರಶ್ನಿಸಿದರು. ಸರಕಾರ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಎನ್ನುತ್ತಿದೆ. ಆದರೆ ನೀವು ನೆಹತಾರ್‌ನಲ್ಲಿ ಗಾಯಾಳು ಹಿಂದುವಿನ ಮನೆಗೆ ಹೋಗಿದ್ದೀರಿ. ಮೃತಪಟ್ಟ ಮುಸ್ಲಿಮ್ ವ್ಯಕ್ತಿಯ ಮನೆಗೆ ಯಾಕೆ ಹೋಗಿಲ್ಲ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಬ್ಬರ ಮನೆಗೂ ಭೇಟಿ ನೀಡಿರುವಾಗ ನೀವೇಕೆ ತಾರತಮ್ಯ ತೋರಿದ್ದೀರಿ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಾನು ತಾರತಮ್ಯ ತೋರಿಲ್ಲ. ಗಲಭೆಕೋರರ ಮನೆಗೆ ಯಾಕೆ ಹೋಗಬೇಕು. ದೊಂಬಿ ನಡೆಸಿ ಉದ್ವಿಗ್ನತೆಯ ಬೆಂಕಿಗೆ ತುಪ್ಪ ಎರೆಯುವವರು ಸಮಾಜದ ಭಾಗವಾಗಿರಲು ಸಾಧ್ಯವಿಲ್ಲ. ಇದರಲ್ಲಿ ಹಿಂದು-ಮುಸ್ಲಿಮ್ ಪ್ರಶ್ನೆ ಬರುವುದಿಲ್ಲ. ಗಲಭೆಕೋರರ ಮನೆಗೆ ತಾನೇಕೆ ಹೋಗಬೇಕು ಎಂದು ಮರುಪ್ರಶ್ನಿಸಿದ್ದಾಗಿ ವರದಿಯಾಗಿದೆ. ಹಿಂಸಾಚಾರ ಭುಗಿಲೆದ್ದ ಸಂದರ್ಭ ಹೊಲದಿಂದ ಮನೆಗೆ ಮರಳುತ್ತಿದ್ದ ಓಂರಾಜ್ ಸೈನಿಗೆ ಗಲಭೆಕೋರರಲ್ಲಿ ಒಬ್ಬ ಹಾರಿಸಿದ್ದ ಗುಂಡು ತಗುಲಿ ಗಾಯವಾಗಿದೆ ಎಂದು ಆತನ ಮನೆಯವರು ಹೇಳಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ಉತ್ತರಪ್ರದೇಶದಲ್ಲಿ ನಡೆದ ಪ್ರತಿಭಟನೆ ಸಂದರ್ಭ 21 ಮಂದಿ ಮೃತಪಟ್ಟಿದ್ದು ಇವರಲ್ಲಿ ಹೆಚ್ಚಿನವರು ಗುಂಡೇಟಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News