ಕ್ರಿಸ್ಮಸ್ ದಿನದಂದು ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದ ಬಿರುಗಾಳಿ: ಕನಿಷ್ಠ 16 ಸಾವು
ಮನಿಲಾ (ಫಿಲಿಪ್ಪೀನ್ಸ್), ಡಿ. 26: ಕ್ರಿಸ್ಮಸ್ ದಿನದಂದು ಮಧ್ಯ ಫಿಲಿಪ್ಪೀನ್ಸ್‌ನ ದೂರದ ಹಳ್ಳಿಗಳು ಮತ್ತು ಪ್ರಸಿದ್ಧ ಪ್ರವಾಸಿ ತಾಣಗಳ ಮೂಲಕ ಬೀಸಿದ ಬಿರುಗಾಳಿಯು ಕನಿಷ್ಠ 16 ಜೀವಗಳನ್ನು ಬಲಿತೆಗೆದುಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.
ಬುಧವಾರ ಗಂಟೆಗೆ 195 ಕಿ.ಮೀ. ವೇಗದಲ್ಲಿ ಬೀಸಿದ ‘ಫನ್‌ಫೋನ್’ ಬಿರುಗಾಳಿಯು ಮನೆಗಳ ಮೇಲ್ಛಾವಣಿಗಳನ್ನು ಹಾರಿಸಿತು ಹಾಗೂ ವಿದ್ಯುತ್ ಕಂಬಗಳನ್ನು ಉರುಳಿಸಿತು.
ಬಿರುಗಾಳಿಯಿಂದಾಗಿ ಅತಿ ಹೆಚ್ಚಿನ ವಿನಾಶ ಅನುಭವಿಸಿದ ಪ್ರದೇಶಗಳಲ್ಲಿ ಇಂಟರ್‌ನೆಟ್ ಮತ್ತು ಮೊಬೈಲ್ ಪೋನ್ ಸಂಪರ್ಕಗಳು ಅಸ್ತವ್ಯಸ್ತಗೊಂಡಿದ್ದು, ಫನ್‌ಫೋನ್ ಬಿರುಗಾಳಿಯ ಪೂರ್ಣ ಪ್ರಮಾಣದ ನಾಶ ನಷ್ಟಗಳ ವಿವರ ಇನ್ನೂ ಲಭ್ಯವಾಗಿಲ್ಲ.
ಆದರೆ, ಫಿಲಿಪ್ಪೀನ್ಸ್ ಮಧ್ಯ ಭಾಗದ ವಿಸಾಯಸ್ ಪ್ರಾಂತದ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ.
ವಿದೇಶಿ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುವ ಬೊರಾಕೆ, ಕೊರೊನ್ ಮತ್ತು ಇತರ ಪ್ರವಾಸಿ ಸ್ಥಳಗಳಿಗೂ ಬಿರುಗಾಳಿ ಅಪ್ಪಳಿಸಿದೆ