ಜಾರ್ಖಂಡ್: ರಘುಬರ್‌ದಾಸ್ ವಿರುದ್ಧ ದೂರು ದಾಖಲಿಸಿದ ಹೇಮಂತ್ ಸೊರೇನ್

Update: 2019-12-26 17:48 GMT

ರಾಂಚಿ, ಡಿ.26: ಜಾರ್ಖಂಡ್ ಮುಕ್ತಿ ಮೋರ್ಛಾ(ಜೆಎಂಎಂ)ದ ಕಾರ್ಯಾಧ್ಯಕ್ಷ ಹೇಮಂತ್ ಸೊರೇನ್ ಬಗ್ಗೆ ಜಾತಿ ನಿಂದನೆ ಮಾಡಿರುವುದಾಗಿ ಜಾರ್ಖಂಡ್‌ನ ನಿರ್ಗಮಿತ ಮುಖ್ಯಮಂತ್ರಿ ರಘುಬರ್ ದಾಸ್ ವಿರುದ್ಧ ಪ್ರಕರಣ ದಾಖಲಾಗಿದೆ.

ತನ್ನ ಬಗ್ಗೆ ದಾಸ್ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಾಗಿ ಡಿಸೆಂಬರ್ 19ರಂದು ಸೊರೇನ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅರವಿಂದ ಉಪಾಧ್ಯಾಯ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಮಿಹಿಜಾಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಜಮ್‌ತಾರಾ ಪೊಲೀಸ್ ಅಧೀಕ್ಷಕ ಅನ್ಷುಮಾನ್ ಕುಮಾರ್ ಹೇಳಿದ್ದಾರೆ. ರಘುಬರ್ ದಾಸ್ ವಿರುದ್ಧ ಎಸ್ಸಿ/ಎಸ್ಟಿ ಕಾಯ್ದೆಯಡಿ ಬುಧವಾರ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಜಮ್‌ತಾರದಲ್ಲಿ ನಡೆದಿದ್ದ ಚುನಾವಣಾ ಸಭೆಯೊಂದರಲ್ಲಿ ಮಾತನಾಡಿದ್ದ ರಘುಬರ್ ದಾಸ್, ತನ್ನ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಸೊರೇನ್ ದೂರು ನೀಡಿದ್ದರು. ರಘುಬರ್ ದಾಸ್ ಅವರ ಹೇಳಿಕೆಯಿಂದ ತನಗೆ ನೋವಾಗಿದೆ. ಆದಿವಾಸಿ ಸಮುದಾಯದ್ಲಲ್ಲಿ ಹುಟ್ಟಿರುವುದು ತನ್ನ ತಪ್ಪೇ ಎಂದು ಸೊರೇನ್ ಪ್ರಶ್ನಿಸಿದ್ದಾರೆ. ಸೊರೇನ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ತಾನು ಈ ಹಿಂದೆ ನೀಡಿದ್ದ ಹೇಳಿಕೆಯಿಂದ ಮುಜುಗುರಕ್ಕೆ ಒಳಗಾಗಿರುವ ಸೊರೇನ್, ಈಗ ರಘುಬರ್‌ದಾಸ್ ವಿರುದ್ಧ ದೂರು ದಾಖಲಿಸಿ ತನ್ನ ತಪ್ಪನ್ನು ಮರೆಮಾಚುವ ತಂತ್ರ ನಡೆಸಿದ್ದಾರೆ ಎಂದು ಬಿಜೆಪಿ ಜಾರ್ಖಂಡ್ ಘಟಕದ ವಕ್ತಾರ ಪ್ರತುಲ್ ಶಹದೇವ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News