ಗಾಝಾಪಟ್ಟಿಯ ಮೇಲೆ ಇಸ್ರೇಲ್ ವಾಯು ದಾಳಿ

Update: 2019-12-26 17:59 GMT

ಜೆರುಸಲೇಮ್, ಡಿ. 26: ಹಮಾಸ್ ನಿಯಂತ್ರಿತ ಫೆಲೆಸ್ತೀನ್ ಪ್ರದೇಶದಿಂದ ರಾಕೆಟೊಂದು ಹಾರಿ ಬಂದ ಬಳಿಕ, ಬುಧವಾರ ರಾತ್ರಿ ಇಸ್ರೇಲ್ ಗಾಝಾ ಪಟ್ಟಿಯ ಮೇಲೆ ವಾಯು ದಾಳಿ ನಡೆಸಿದೆ ಎಂದು ಇಸ್ರೇಲ್ ಸೇನೆ ಗುರುವಾರ ತಿಳಿಸಿದೆ.

ಗಾಝಾ ಪಟ್ಟಿಯಿಂದ ಸಣ್ಣ ರಾಕೆಟೊಂದನ್ನು ಇಸ್ರೇಲ್ ಭೂಭಾಗದತ್ತ ಹಾರಿಸಲಾಯಿತು ಹಾಗೂ ಅದನ್ನು ಅಯರ್ನ್ ಡೋಮ್ ರಕ್ಷಣಾ ವ್ಯವಸ್ಥೆಯ ಮೂಲಕ ತಡೆಯಲಾಯಿತು ಎಂದು ಸೇನೆ ಹೇಳಿದೆ.

‘‘ಅದಕ್ಕೆ ಪ್ರತಿಯಾಗಿ, ಗಾಝಾ ಪಟ್ಟಿಯಲ್ಲಿನ ಹಮಾಸ್ ಗುರಿಗಳ ಮೇಲೆ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಹಲವು ಸುತ್ತು ಬಾಂಬ್‌ಗಳನ್ನು ಸುರಿಸಿದವು. ಈ ಸಂದರ್ಭದಲ್ಲಿ ಹಮಾಸ್ ಸೇನಾ ನೆಲೆಗಳನ್ನೂ ಗುರಿಯಿರಿಸಲಾಯಿತು’’ ಎಂದಿದೆ.

ಬಂಕರ್‌ನಲ್ಲಿ ಆಶ್ರಯ ಪಡೆದ ನೆತನ್ಯಾಹು

ಬುಧವಾರ ಗಾಝಾ ಪಟ್ಟಿಯಿಂದ ರಾಕೆಟ್ ಹಾರಿ ಬಂದಾಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ನಡೆಯಲಿದ್ದ ತನ್ನ ಲಿಕುಡ್ ಪಕ್ಷದ ನಾಯಕತ್ವಕ್ಕೆ ಪ್ರಾಥಮಿಕ ಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದರು ಎಂದು ಸರಕಾರಿ ಟೆಲಿವಿಶನ್ ವರದಿ ಮಾಡಿದೆ.

ಎಚ್ಚರಿಕೆ ಗಂಟೆಗಳು ಮೊಳಗುತ್ತಿದ್ದಂತೆಯೇ ಅವರು ತನ್ನ ಭಾಷಣವನ್ನು ಅರ್ಧಕ್ಕೇ ಮುಕ್ತಾಯಗೊಳಿಸಿದರು. ಭದ್ರತಾ ಸಿಬ್ಬಂದಿ ಅವರನ್ನು ತಕ್ಷಣ ಭೂಗತ ಬಂಕರೊಂದಕ್ಕೆ ಕರೆದೊಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News