ಉತ್ತಮ ಆಡಳಿತದಲ್ಲಿ ತಮಿಳುನಾಡು ನಂ.1; ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತೆ?

Update: 2019-12-26 18:26 GMT
 ತಮಿಳುನಾಡು ಮುಖ್ಯಮಂತ್ರಿ, ಎಡಪ್ಪಾಡಿ ಕೆ. ಪಳನಿಸ್ವಾಮಿ, 

ಹೊಸದಿಲ್ಲಿ,ಡಿ.26: ಉತ್ತಮ ಆಡಳಿತ ಸೂಚ್ಯಂಕ (ಜಿಜಿಐ)ಕ್ಕಾಗಿ ಕೇಂದ್ರ ಸರಕಾರವು ಸಿದ್ಧಪಡಿಸಿರುವ ಕಂಪೋಸಿಟ್ ರ್ಯಾಂಕಿಂಗ್ ಪಟ್ಟಿಯಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದು,ಮಹಾರಾಷ್ಟ್ರ ಮತ್ತು ಕರ್ನಾಟಕ ಅನುಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿವೆ.

ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಹಾಗೂ ಸೆಂಟರ್ ಫಾರ್ ಗುಡ್ ಗವರ್ನನ್ಸ್ ಬುಧವಾರ ಬಿಡುಗಡೆಗೊಳಿಸಿರುವ ವರದಿಯಂತೆ ದೊಡ್ಡ ರಾಜ್ಯಗಳ ವರ್ಗದಲ್ಲಿ ಛತ್ತೀಸಗಡ 4ನೇ ಸ್ಥಾನದಲ್ಲಿದ್ದರೆ ಆಂಧ್ರಪ್ರದೇಶ, ಗುಜರಾತ್, ಹರ್ಯಾಣ, ಕೇರಳ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ರಾಜಸ್ಥಾನ,ಪಂಜಾಬ, ಒಡಿಶಾ, ಬಿಹಾರ ಮತ್ತು ಗೋವಾಗಳಿವೆ. ಈ ವಿಭಾಗದಲ್ಲಿ ಅತ್ಯಂತ ಕಳಪೆ ಸಾಧನೆ ಮಾಡಿರುವ ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಅನುಕ್ರಮವಾಗಿ 17 ಮತ್ತು 18ನೇ ಸ್ಥಾನಗಳಲ್ಲಿವೆ. ಉತ್ತಮ ಆಡಳಿತವನ್ನು ಗುರುತಿಸಲು ಕುಡಿಯುವ ನೀರಿನ ಸೌಲಭ್ಯ,ಬಯಲುಶೌಚ ಮುಕ್ತ ಪಟ್ಟಣಗಳು,ಗ್ರಾಮೀಣ ವಸತಿ ಪ್ರದೇಶಗಳಿಗೆ ಸಂಪರ್ಕ ಸೌಲಭ್ಯ,ಶುದ್ಧ ಅಡಿಗೆ ಇಂಧನ ಲಭ್ಯತೆ,24x7 ವಿದ್ಯುತ್ ಪೂರೈಕೆ ಇತ್ಯಾದಿ ಸೂಚಕಗಳಲ್ಲಿ ಅಳೆಯಲಾಗುವ ಸಾರ್ವಜನಿಕ ಮೂಲಸೌಕರ್ಯದಂತಹ ಕ್ಷೇತ್ರಗಳಲ್ಲಿಯ ಸಾಧನೆಗಳು ಮಾನದಂಡಗಳಾಗಿವೆ.

ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳ ವರ್ಗದಲ್ಲಿ ಹಿಮಾಚಲ ಪ್ರದೇಶ ಮೊದಲ ಸ್ಥಾನದಲ್ಲಿದ್ದರೆ,ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಕೊನೆಯ ಸ್ಥಾನಗಳಲ್ಲಿವೆ. ಕೇಂದ್ರಾಡಳಿತ ಪ್ರದೇಶಗಳ ವರ್ಗದಲ್ಲಿ ಪುದುಚೇರಿ ಮೊದಲ ಸ್ಥಾನದಲ್ಲಿದ್ದರೆ ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ.

 ದೊಡ್ಡ ರಾಜ್ಯಗಳ ಪೈಕಿ ಕೃಷಿ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಮಧ್ಯಪ್ರದೇಶ,ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಜಾರ್ಖಂಡ್,ಮಾನವ ಸಂಪನ್ಮೂಲ ಅಭಿವೃದ್ಧಿ ಕ್ಷೇತ್ರದಲ್ಲಿ ಗೋವಾ ಮೊದಲ ಸ್ಥಾನಗಳಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News