×
Ad

ಸಿಎಎ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾರ್ವೆ ದೇಶದ ಪ್ರಜೆಗೆ ತಕ್ಷಣ ದೇಶ ಬಿಟ್ಟು ತೆರಳುವಂತೆ ಸೂಚನೆ

Update: 2019-12-27 11:43 IST
Photo: Facebook(Janne-Mette Johansson)

ಕೊಚ್ಚಿ: ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾರ್ವೆ ದೇಶದ ಪ್ರಜೆ, 71 ವರ್ಷದ ಜೇನ್ನ್-ಮೆಟ್ಟೆ ಜೊಹಾನ್ಸನ್ ಎಂಬಾಕೆಯನ್ನು ತಕ್ಷಣ ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ. ದೇಶದಲ್ಲಿ ವಾಸಿಸುತ್ತಿರುವ ವಿದೇಶಿ ಪ್ರಜೆಗಳ ನೋಂದಣಿ ಹಾಗೂ ಚಲನವಲನಗಳ ಮೇಲೆ ನಿಗಾ ಇಡುವ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‍.ಆರ್.ಆರ್.ಒ) ಮೇಲಿನ ಸುದ್ದಿಯನ್ನು ದೃಢೀಕರಿಸಿದೆ.

ಜೊಹಾನ್ಸನ್ ಅವರನ್ನು ದೇಶ ಬಿಟ್ಟು ತೆರಳಲು ಸೂಚಿಸಲಾಗಿದೆ ಎಂದು ಕೊಚ್ಚಿಯ ಎಫ್‍.ಆರ್.ಆರ್.ಒ ಅಧಿಕಾರಿ ಅನೂಪ್ ಕೃಷ್ಣನ್ ಅವರು ಹೇಳಿದ್ದಾರೆ."ಇದು ಗಡೀಪಾರು ಅಲ್ಲ. ಆಕೆ ಪ್ರತಿಭಟನೆಯಲ್ಲಿ ಭಾಗವಹಿಸಿ ವೀಸಾ ನಿಯಮಗಳನ್ನು ಉಲ್ಲಂಘಿಸಿರುವುದರಿಂದ ಆದಷ್ಟು ಬೇಗ ಇಲ್ಲಿಂದ ತೆರಳುವಂತೆ ಆಕೆಗೆ ಸೂಚಿಸಿದ್ದೇವೆ. ಆಕೆಯೇ ಸ್ವತಃ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಫೋಟೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕಿದ್ದರು,'' ಎಂದು ಕೃಷ್ಣನ್ ಹೇಳಿದ್ದಾರೆ. ಸದ್ಯ ಆಕೆಯ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸಲಾಗಿಲ್ಲ ಎಂದೂ ಅವರು ತಿಳಿಸಿದರು.

ದೇಶ ಬಿಟ್ಟು ತೆರಳುವಂತೆ ನೀಡಲಾಗಿರುವ ಸೂಚನೆ ಜೊಹಾನ್ಸನ್ ಅವರಿಗೆ ಅಸಮಾಧಾನ ತಂದಿದೆ. "ಶುಕ್ರವಾರ ಸಂಜೆ 6 ಗಂಟೆಯೊಳಗಾಗಿ ದೇಶ ಬಿಟ್ಟು ತೆರಳದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ. ಲಿಖಿತ ಆದೇಶ ನೀಡುವಂತೆ ಅವರನ್ನು ಕೇಳಿದರೂ ಅವರು ನೀಡಿಲ್ಲ. ಇದು ಬ್ಲ್ಯಾಕ್ಮೇಲ್ ಅಲ್ಲದೆ ಮತ್ತಿನ್ನೇನಲ್ಲ,'' ಎಂದು ಅವರು ಹೇಳಿದರು.

ಕೊಚ್ಚಿಯಿಂದ ದುಬೈಗೆ ತೆರಳಿ ಅಲ್ಲಿಂದ ಸ್ವೀಡನ್‍ಗೆ ಹೋಗುವುದಾಗಿ ಆಕೆ ಹೇಳಿದ್ದಾರೆ. ಆಕೆಯ ಟೂರಿಸ್ಟ್ ವೀಸಾ ಮಾರ್ಚ್ 2020ರಲ್ಲಿ ಕೊನೆಗೊಳ್ಳಲಿದೆ. ಜೊಹಾನ್ಸನ್ ಭಾರತಕ್ಕೆ ಅಕ್ಟೋಬರ್ ತಿಂಗಳಲ್ಲಿ ಆಗಮಿಸಿದ್ದು ಮುಂಬೈ, ಲಕ್ನೋಗೆ ಭೇಟಿ ನೀಡಿದ ನಂತರ ಒಂದು ವಾರದ ಹಿಂದೆ ಕೇರಳಕ್ಕೆ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News