×
Ad

ಸಂವಿಧಾನದ 29-30ನೆ ಕಲಂಗೆ ತಿದ್ದುಪಡಿಗೆ ಚರ್ಚೆ : ಡಾ. ಸುರೇಂದ್ರ ಕುಮಾರ್ ಜೈನ್

Update: 2019-12-27 15:03 IST

ಮಂಗಳೂರು, ಡಿ.27: ಸಂವಿಧಾನದ 29 ಮತ್ತು 30ನೇ ಕಲಂಗೆ ತಿದ್ದುಪಡಿ ಮಾಡುವ ಮೂಲಕ ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ನೀಡಲಾದ ವಿಶೇಷ ಹಕ್ಕು ಹಾಗೂ ಸೌಲಭ್ಯಗಳನ್ನು ಎಲ್ಲಾ ಸಂಸ್ಥೆಗಳಿಗೂ ವಿಸ್ತರಿಸಬೇಕೆಂಬ ಬಗ್ಗೆ ಅಂತಾರಾಷ್ಟ್ರೀಯ ಬೈಠಕ್‌ನಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ವಿಎಚ್‌ಪಿಯ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಕುಮಾರ್ ಜೈನ್ ತಿಳಿಸಿದರು.

ಸಂಘನಿಕೇತನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ನಾವು ಎಲ್ಲಿಯೂ ಅಲ್ಪಸಂಖ್ಯಾತರ ಹಕ್ಕು ಮತ್ತು ಸೌಲಭ್ಯಗಳನ್ನು ಮೊಟಕುಗೊಳಿಸಿ ಎಂದು ಒತ್ತಾಯಿಸುವುದಿಲ್ಲ. ಆದರೆ, ಅದೇ ಸೌಲಭ್ಯಗಳನ್ನು ಬಹುಸಂಖ್ಯಾತರ ಸಂಸ್ಥೆಗಳಿಗೂ ನೀಡಿ ಎನ್ನುವುದು ನಮ್ಮ ಆಗ್ರಹ ಎಂದರು.

ಈ ಸೌಲಭ್ಯಗಳು ಧರ್ಮಾಧಾರಿತವಾಗಿರದೆ ಎಲ್ಲಾ ಧರ್ಮಗಳ ಸೇವಾ, ಶಿಕ್ಷಣ ಹಾಗೂ ಧಾರ್ಮಿಕ ಕೇಂದ್ರಗಳಿಗೂ ಅನ್ವಯಿಸಬೇಕು. ಸೌಲಭ್ಯಗಳು ಮತೀಯ ನೆಲೆಯಲ್ಲಿ ದೊರಕುವಂತಾಗಬಾರದು ಎಂದು ಅವರು ಹೇಳಿದರು.

ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಮೌಲ್ವಿ ಹಾಗೂ ಪಾದ್ರಿಗಳಿಗೆ ಅಧಿಕ ಗೌರವಧನವನ್ನು ನೀಡಲಾಗುತ್ತದೆ. ಆದರೆ ಪುರೋಹಿತರು ಹಾಗೂ ಪಂಡಿತರಿಗೆ ಈ ಸೌಲಭ್ಯ ಒದಗಿಸದೆ ಹಿಂದೂ ವಿರೋಧಿ ಹಾಗೂ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಲಾಗುತ್ತಿದೆ. ಇದು ಜಿಹಾದಿ ಹಾಗೂ ಮತಾಂತರಕ್ಕೆ ಪ್ರೇರಣೆಯಾಗುತ್ತಿದೆ. ಈ ಬಗ್ಗೆ ಬೈಠಕ್‌ನಲ್ಲಿ ಚರ್ಚೆ ನಡೆಯಲಿದೆ. ಅಗತ್ಯವಾದಲ್ಲಿ ಈ ಎರಡು ರಾಜ್ಯಗಳ ವಿರುದ್ಧ ಆಂದೋಲನ ರೂಪಿಸಲು ನಿರ್ಧಾರ ಕೈಗೊಳ್ಳಲಾಗುವುದು. ಇದೇ ವೇಳೆ ಮಹಿಳೆಯರ ಸುರಕ್ಷತೆ ಇಂದು ಅತೀ ಪ್ರಮುಖವಾಗಿದೆ. ಸ್ತ್ರೀ ಪುರುಷರ ಸಂಬಂಧ ವಿಕೃತಿಯಾಗಿ ಮಾರ್ಪಡುತ್ತಿದೆ. ಮಹಿಳೆಯರ ರಕ್ಷಣೆ ಸರಕಾರದ ಕೆಲಸ ಮಾತ್ರವಲ್ಲ. ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಗಳಿಗೆ ಮನವಿ ನೀಡುವ ಬಗ್ಗೆ ಕ್ರಿಯಾ ಯೋಜನೆಯನ್ನು ಬೈಠಕ್‌ನಲ್ಲಿ ರೂಪಿಸಲಾಗುವುದು ಎಂದು ಅವರು ಹೇಳಿದರು.

ಅಲ್ಪಸಂಖ್ಯಾತ ಸಂಸ್ಥೆಗಳಿಗೆ ನೀಡಿರುವ ಹಕ್ಕುಗಳನ್ನು ಹಿಂಪಡೆಯಬೇಕೆಂದು ನಾವು ಬಯಸುವುದಿಲ್ಲ. ಆದರೆ ಅವುಗಳಿಗೆ ನೀಡಲಾಗುವ ಸೌಲಭ್ಯಗಳು ಎಲ್ಲಾ ಧರ್ಮಗಳ ಸಂಸ್ಥೆಗಳಿಗೂ ಲಭಿಸಬೇಕೆಂಬುದು ನಮ್ಮ ನಿರ್ಧಾರ. ಕುರ್‌ಆನ್, ಬೈಬಲ್ ಧರ್ಮ ಗ್ರಂಥಗಳನ್ನು ಅಲ್ಪಸಂಖ್ಯಾತ ಶಾಲೆಗಳಲ್ಲಿ ಕಲಿಸಲಾಗುತ್ತದೆ. ಹಾಗೆಯೇ ಭಗವದ್ಗೀತೆ ಹಾಗೂ ವೇದಗಳನ್ನು ಕೂಡಾ ಕಲಿಸಬೇಕೆಂಬುದು ನಮ್ಮ ಒತ್ತಾಯವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಡಾ. ಸುರೇಂದ್ರ ಕುಮಾರ್ ಜೈನ್ ಪ್ರತಿಕ್ರಿಯಿಸಿದರು.

ವಿಹಿಂಪ 60 ವರ್ಷ ಪೂರೈಸುತ್ತಿದ್ದು, ಈ ತನಕದ ಕಾರ್ಯವೈಖರಿ ಹಾಗೂ ಮುಂದಿನ ರೂಪುರೇಷೆಗಳ ಬಗ್ಗೆ ಈ ಅಂತಾರಾಷ್ಟ್ರೀಯ ಬೈಠಕ್‌ನಲ್ಲಿ ಚರ್ಚೆಯಾಗಲಿದೆ. ಇತರ 18 ದೇಶಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 300 ಪ್ರತಿನಿಧಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು.

ಆದಿವಾಸಿಗಳ ಮನವೊಲಿಕೆ

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಂತೆ ಸಮಾಜದಲ್ಲಿ ತಪ್ಪು ಸಂದೇಶವನ್ನು ನೀಡಿ ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಈ ಬಗ್ಗೆಯೂ ಬೈಠಕ್‌ನಲ್ಲಿ ಚರ್ಚಿಸಲಾಗುವುದು. ಇದೇ ವೇಳೆ ಒಆರ್‌ಪಿ (ಇತರ ಧರ್ಮಗಳ ಮನವೊಲಿಕೆ- other religious persuasion) ಬಗ್ಗೆ ಚರ್ಚೆ ಆಗಲಿದೆ. ಆದಿವಾಸಿಗಳನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ಕಾರ್ಯವನ್ನು ಬ್ರಿಟಿಷರು ಆರಂಭಿಸಿದ್ದರು. ಆದಿವಾಸಿಗಳು ಎಂದಿಗೂ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದ್ದವರು. ಆದರ ವ್ಯವಸ್ಥಿತ ಷಡ್ಯಂತ್ರದಿಂದಾಗಿ ಅವರನ್ನು ಹಿಂದೂ ಧರ್ಮದಿಂದ ಪ್ರತ್ಯೇಕಿಸಲಾಗಿದೆ. ಇದೀಗ ಅವರನ್ನು ಮನವೊಲಿಸುವ ಕಾರ್ಯ ಆಗಬೇಕಾಗಿದೆ. ಇದೇ ವೇಳೆ ಮತಾಂತರದ ಬಗ್ಗೆ ಮಹತ್ವಪೂರ್ಣ ಚರ್ಚೆ ನಡೆಯಲಿದ್ದು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ದಿಟ್ಟ ಹೆಜ್ಜೆ ಕೈಗೊಳ್ಳಬೇಕಿದೆ ಎಂದು ಡಾ. ಸುರೇಂದ್ರ ಕುಮಾರ್ ಜೈನ್ ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News