ಪೊಲೀಸ್ ದೌರ್ಜನ್ಯ ಖಂಡಿಸಿ ದ.ಕ. ಜಿಲ್ಲೆಯ ಮಸೀದಿಗಳ ಮುಂದೆ ಭಿತ್ತಿಪತ್ರ ಪ್ರದರ್ಶನ
ಮಂಗಳೂರು, ಡಿ.27: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಲು ಮುಂದಾದವರ ಮೇಲೆ ಲಾಠಿ-ಗುಂಡೇಟು ಹಾಕಿ ದೌರ್ಜನ್ಯ ಎಸಗಿದ್ದಲ್ಲದೆ ಇಬ್ಬರು ಅಮಾಯಕರ ಕೊಲೆ ಕೃತ್ಯವನ್ನು ಖಂಡಿಸಿ ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ರಾಜ್ಯ ಘಟಕ ನೀಡಿದ ಕರೆಯಂತೆ ಶುಕ್ರವಾರ ಜುಮಾ ನಮಾಝ್‌ನ ಬಳಿಕ ಜಿಲ್ಲೆಯ ಬಹುತೇಕ ಮಸೀದಿಗಳ ಮುಂದೆ ಭಿತ್ತಿಪತ್ರ ಪ್ರದರ್ಶಿಸಲಾಯಿತು.
ಶುಕ್ರವಾರದ ಜುಮಾ ನಮಾಝ್ ಬಳಿಕ ಮಸೀದಿಯ ಮುಂದೆ ಸೇರಿದವರು ರಾಷ್ಟ್ರಧ್ವಜ ಎತ್ತಿಹಿಡಿದರಲ್ಲದೆ, ಸಿಎಎ ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಮಂಗಳೂರು ಪೊಲೀಸರ ಅಟ್ಟಹಾಸವನ್ನು ಖಂಡಿಸಿದ ಭಿತ್ತಿಪತ್ರವನ್ನು ಪ್ರದರ್ಶಿಸಿದರು. ಅಲ್ಲದೆ ಕೆಲವು ಮಾಧ್ಯಮಗಳೂ ಕೂಡ ಸುಳ್ಳು ಸುದ್ದಿ ಹಬ್ಬಿ ಸಮಾಜದ ಅಶಾಂತಿ ಸೃಷ್ಟಿಸುತ್ತಿದೆ ಎಂದು ಆಪಾದಿಸಿದರು.
ಮುಕ್ಕ, ಈಶ್ವರಮಂಗಲ, ನೆಚ್ಚಬೆಟ್ಟು, ಉಜಿರೆ, ಬಾಳೆಪುಣಿ, ಕಾಟಿಪಳ್ಳ, ಕೃಷ್ಣಾಪುರ, ಸರಳಿಕಟ್ಟೆ, ಹಿದಾಯತ್‌ನಗರ, ದೇರಳಕಟ್ಟೆ, ಕುತ್ತಾರ್ ಸುಭಾಷ್‌ನಗರ, ಕಲ್ಮಿಂಜ, ತೌಡುಗೋಳಿ, ಕೊಳಕೆ, ಆಲಡ್ಕ, ಕೆಸಿ ರೋಡ್, ನೆಕ್ಕಿಲ ಪಂಜ, ಮುಡಿಪು, ಅಳೇಕಲ, ಪಡುಬಿದ್ರೆ ಸಹಿತ ಜಿಲ್ಲೆಯ ಅನೇಕ ಮಸೀದಿಗಳ ಮುಂದೆ ಭಿತ್ತಿಪತ್ರ ಪ್ರದರ್ಶಿಸಿದರು.