ಪೌರತ್ವ ತಿದ್ದುಪಡಿ ಕಾಯ್ದೆ ಬಹುಸಂಖ್ಯಾತರಿಗೂ ಅಪಾಯ: ಸಸಿಕಾಂತ್ ಸೆಂಥಿಲ್
ಬಂಟ್ವಾಳ : ಭಾರತೀಯ ಹಾಗೂ ಬ್ರಾಹ್ಮಣಿಯಂ ನಡುವಿನ ಹೋರಾಟ ಇದಾಗಿದ್ದು, ತ್ರಿವರ್ಣ ಧ್ವಜವನ್ನು ಹಿಡಿದು ಗಾಂಧೀಜಿಯವರ ಅಹಿಸಾಂತ್ಮಕ ಮಾರ್ಗದಲ್ಲಿ ತಾಳ್ಮೆ, ಧೈರ್ಯದಿಂದ ಇನ್ನೊಂದು ಸ್ವಾತಂತ್ರ್ಯ ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದ್ದಾರೆ.
ಅವರು ಎನ್‌ಆರ್‌ಸಿ ತಿದ್ದುಪಡಿ ಕಾಯ್ದೆ ಮತ್ತು ಸಿಎಎ ವಿರುದ್ಧ ವಿಟ್ಲ ಮುಸ್ಲಿಂ ಒಕ್ಕೂಟದ ವತಿಯಿಂದ ಶುಕ್ರವಾರ ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ "ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸಂವಿಧಾನ ಉಳಿಸಿ" ಎಂಬ ಧ್ಯೇಯದಡಿಯಲ್ಲಿ ಬೃಹತ್ "ಸಂರಕ್ಷಣಾ ಸಮಾವೇಶ" ದಲ್ಲಿ ಮುಖ್ಯ ಭಾಷಣ ಮಾಡಿ, ಮೋದಿ, ಅಮಿತ್ ಫ್ಯಾಶಿಸಂನ ಚೌಕಟ್ಟಿನಡಿ ತಮ್ಮ ಅಜೆಂಡಾವನ್ನು ಕಾರ್ಯಗತಗೊಳಿಸಿತ್ತಿದ್ದು, ಇದೀಗ ನಮ್ಮ ಭಾರತೀಯಕ್ಕೆ, ಭಾರತೀಯರ ಪೌರತ್ವಕ್ಕರೆ ಕೈಹಾಕಿದೆ. ಆದರೆ, ಇದಕ್ಕೆ ಎಲ್ಲರೂ ಒಂದಾಗಿ ದೇಶದ್ಯಾಂತ ಪ್ರತಿಭಟನೆಯ ಮೂಲಕ ವಿರೋಧ ವ್ಯಕ್ತಪಡಿಸಿದಾಗ ಮೋದಿ, ಅಮಿತ್ ಶಾನ ಲೆಕ್ಕಾಚಾರ ಉಲ್ಟಾ ಆಗಿದ್ದು, ಇತ್ತೀಚೆಗೆ ರಾಮಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಭಯದಿಂದ ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ ಎಂದರು.
ಫ್ಯಾಶಿಸಂ ಮತ್ತು ಬ್ಯಾಹ್ಮಣೀಯಂ ಎರಡು ಒಟ್ಟಾಗಿ ಸೇರಿಕೊಂಡು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ಇದರಿಂದ ಮುಸ್ಲಿಮರು, ದಲಿತರಿಗೆ ಸಮಸ್ಯೆಯಾಗಿಲ್ಲ. ಬದಲಾಗಿ ನನ್ನ ಹಿಂದೂ ಸಹೋದರರನ್ನು ಕೂಡಾ ಮೂರ್ಖರನ್ನಾಗಿ ಮಾಡುತ್ತಿದೆ. ಹಿಂದೂ ರಾಷ್ಟ್ರ ಏನೆಂಬುದನ್ನು ಮೊದಲು ಹಿಂದೂಗಳು ಅರ್ಥೈಸಿಕೊಳ್ಳಬೇಕಾಗಿದೆ. ಇದೊಂದು ಜಾತಿ, ಮನುರಾಷ್ಟ್ರದ ಕಲ್ಪನೆಯಾಗಿದ್ದು, ಬ್ರಾಹ್ಮಣರು ಮೇಲೆ ಉಳಿದ ಹಿಂದೂಗಳೆಲ್ಲರೂ ತಳಮಟ್ಟದಲ್ಲಿ ಜೀವಿಸುವ ಒಂದು ವ್ಯವಸ್ಥೆ ಎಂದರು.
ಧರ್ಮದ ಆಧಾರದಲ್ಲಿ ಸರಕಾರವನ್ನು ಪ್ರತಿಯೊಬ್ಬರು ಪ್ರಶ್ನೆಸುವುದರ ಜೊತೆಗೆ ನೀತಿಯನ್ನು ದಿಕ್ಕರಿಸಬೇಕಾಗಿದೆ. ಎನ್‌ಆರ್‌ಸಿ ಮಾಡುವ ಬದಲು ರಾಷ್ಟ್ರೀಯ ನಿರುದ್ಯೋಗಿಗಳ ಬಗ್ಗೆ ಸಮೀಕ್ಷೆ ನಡೆಸಬೇಕಾಗಿದೆ ಎಂದು ಹೇಳಿದರು.
ಈ ಹೋರಾಟ ನಿರಂತರವಾಗಲಿ. ತ್ರಿವರ್ಣ ಧ್ವಜವನ್ನು ಗಟ್ಟಿಯಾಗಿ ಹಿಡಿದುಕೊಳ್ಳೋಣ. ಯಾರು ನಮ್ಮ ಹಕ್ಕನ್ನು ಕಿತ್ತುಕೊಳ್ಳುತ್ತಾರೆಂದು ನೋಡೋಣ. ದಿಗ್ಬಂದನ ಸೆಲ್ ಕಟ್ಟಲಿ ಅದಕ್ಕೂ ಹೋಗಿ ಬರೋಣ. ಮನೆಗೆ ಅಧಿಕಾರಿಗಳು ಬಂದಾಗ ಸ್ಪಷ್ಟವಾಗಿ ಮಾಹಿತಿ ಕೇಳಬೇಕು. ಎನ್‌ಪಿಆರ್ ಎನ್‌ಆರ್‌ಸಿಗೆ ಮಾಹಿತಿ ಸಂಗ್ರಹಿಸುವ ಇನ್ನೊಂದು ವ್ಯವಸ್ಥೆಯಾಗಿದ್ದು, ಯಾವುದೇ ಕಾರಣಕ್ಕೂ ಎನ್‌ಪಿಆರ್‌ಗೆ ಮಾಹಿತಿ ನೀಡದಿರಿ. ಮನೆಗೆ ಬಂದರೆ ಅವರಿಗೆ ಚಾ, ಜ್ಯೂಸ್ ಕೊಟ್ಟು ಹಿಂದೆ ಕಳುಹಿಸಿ. ಜನಗಣತಿಯ ಬಗ್ಗೆ ಮಾಹಿತಿ ಕೇಳಿದರೆ ನೀಡಿ ಎಂದು ಸ್ಪಷ್ಟ ಮಾಹಿತಿ ನೀಡಿದರು.
ಮೇರ ದೇಶ್ ಎಂದು ಹೇಳುತ್ತಿದ್ದವರು ಇದೇ ಮೊದಲನೇ ಬಾರಿಗೆ ದೇಶ ನೋಡುವಂತಾಗಿದೆ. ಮಾಧ್ಯಮಗಳು ಫ್ಯಾಶಿಸಂನ ಹಿಡಿತದಲ್ಲಿದ್ದು, ಅಸಂವಿಧಾನಿಕ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ಮೂಲಕ ವಿರೋಧ ವ್ಯಕ್ತಪಡಿಸಿದಾಗ, ಸರಕಾರ ವಿದ್ಯಾರ್ಥಿಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದಾಗ ಸ್ಪಲ್ಪವೂ ತಿರುಗಿ ನೋಡದ ಸರಕಾರಗಳಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯ ಎಂದರು.ಈ ದೇಶದ ಅಲ್ಪಸಂಖ್ಯಾತರಿಗೆ ಮಾತ್ರವಲ್ಲ. ಬಹುಸಂಖ್ಯಾತರಿಗೂ ಅಪಾಯವಿದೆ. ನಮ್ಮ ಹೋರಾಟವನ್ನು ದೇಶದ ಹೆಸರಿನಲ್ಲಿ ಕಟ್ಟಿಹಾಕಲಾಗುತ್ತಿದೆ ಎಂದ ಅವರು, ಷಢ್ಯಂತರ ವಿರುದ್ಧ ಹೋರಾಟ ಮಾಡಬೇಕಾಗಿದ್ದು, ತಾಳ್ಮೆ, ಧೈರ್ಯ, ಒಂದಾಣಿಕೆಯ ಹೋರಾಟ ಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು.
ಭಾಷಣಕಾರ ನಿಕೇತ್ ರಾಜ್ ಮೌರ್ಯ ಮಾತನಾಡಿ, ದೇಶದ ಆರ್ಥಿಕತೆ ನೆಲಕಚ್ಚಿದೆ. ಧರ್ಮದಿಂದ ದೇಶ ಆಗಲ್ಲ. ಹೃದಯದಿಂದ ದೇಶ ಕಟ್ಟುವ ಕೆಲಸವಾಗಬೇಕಾಗಿದೆ. ಸಾರೇ ಜಹಾಂಸೆ ಅಚ್ಚ ಹಿಂದುಸ್ತಾನ್ ಹಮಾರ ಎಂದು ಹೇಳುವ ಅಸಲಿ ದೇಶ ಭಕ್ತರು ನಾವು ಎಂದು ಅವರು ಹೇಳಿದರು.
ವಿಟ್ಲ ಮುಸ್ಲಿಂ ಒಕ್ಕೂಟದ ಗೌರವಾಧ್ಯಕ್ಷ, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್ ಉದ್ಘಾಟನಾ ಭಾಷಣ ಮಾಡಿ, ಮೂಲ ನಿವಾಸಿಗಳಾದ ನಾವು ಈ ದೇಶಬಿಟ್ಟು ಕದಲುವುದಿಲ್ಲ. ಇದನ್ನು ಕೋಮುವಾದಿ ಶಕ್ತಿಗಳು ಅರ್ಥ ಮಾಡಬೇಕಾಗಿದೆ. ಭಾರತೀಯ ಸಂಸ್ಕೃತಿ, ಸಂವಿಧಾನವನ್ನು ಆಶಯವನ್ನು ನೂರಕ್ಕೆ ನೂರು ಒಪ್ಪಿಕೊಂಡವರು ಮುಸ್ಲಿಮರು ಎಂದು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಸಿರಾಜುದ್ದೀನ್ ಸಖಾಫಿ, ಹನೀಫ್ ಖಾನ್ ಕೊಡಾಜೆ ಮಾತನಾಡಿದರು. ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಎ.ಕೆ.ಅಶ್ರಫ್ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯ್ದೆ ಜಾತ್ಯತೀತ ಮೌಲ್ಯದ ವಿರೋಧಿಯಾಗಿದೆ ಎಂದರು.
ಎಂ.ಎಸ್ ಮಹಮ್ಮದ್ ಉದ್ಘಾಟನಾ ಭಾಷಣ ಮಾಡಿದರು. ವಿಕೆಎಂ ಅಶ್ರಫ್, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ವಿ.ಎಚ್ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಘಟಕ ಖಲಂದರ್ ಪರ್ತಿಪ್ಪಾಡಿ ಪ್ರಸ್ತಾವಿಸಿ ಮಾತನಾಡಿದರು.
ವೇದಿಕೆಯಲ್ಲಿ ಖತೀಬ್ ಮುಹಮ್ಮದಾಲಿ ಇರ್ಫಾನಿ ಫೈಝಿ, ರಮಾನಾಥ ವಿಟ್ಲ, ಮುರಳೀಧರ ರೈ ಮಠಂತಬೆಟ್ಟು, ರಶೀದ್ ವಿಟ್ಲ, ಅಬ್ಬಾಸ್ ಅಲಿ, ಮಹಮ್ಮದ್ ಕುಂಞಿ ವಿಟ್ಲ, ವಿ.ಎಂ ಇಬ್ರಾಹಿಂ, ಅಥಾವುಲ್ಲ ಜೋಕಟ್ಟೆ, ಜಾಫರ್ ಫೈಝಿ, ಝಕಾರಿಯ ಗೋಳ್ತಮಜಲು, ಸಂತೋಷ್ ಭಂಡಾರಿ, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಕಲಂದರ್ ಪರ್ತಿಪ್ಪಾಡಿ, ಹನೀಫ್ ಹಾಜಿ ಗೋಲ್ತಮಜಲು ಉಪಸ್ಥಿತರಿದ್ದರು. ವಿ.ಎಚ್ ಅಶ್ರಫ್ ಸ್ವಾಗತಿಸಿದರು. ನೌಫಲ್ ವಂದಿಸಿ ನಿರೂಪಿಸಿದರು.
ಎನ್ ಆರ್ ಸಿ, ಸಿಎಎ ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ಪೋಸ್ಟ್ ಕಾರ್ಡ್ ಚಳವಳಿಗೆ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಸಹಿ ಹಾಕುವ ಮೂಲಕ ಚಾಲನೆ ನೀಡಿದರು. ವಿಟ್ಲ ಪರಿಸರದಿಂದ ಸುಮಾರು 25 ಸಾವಿರ ಕಾರ್ಡ್ ಪೋಸ್ಟ್ ಮಾಡುವುದಾಗಿ ರಶೀದ್ ವಿಟ್ಲ ಸಭೆಗೆ ತಿಳಿಸಿದರು.
''ನಾನು ಸೇವೆ ಮಾಡಿದ ಜಿಲ್ಲೆಯಲ್ಲಿ ಚಳುವಳಿಗೆ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತೋಷದ ವಿಚಾರ. ಸಂವಿಧಾನದ ಉಳಿವಿಗಾಗಿ ಒಂದು ಸಲ ಅಲ್ಲ. ಹತ್ತು ಬಾರಿ ರಾಜೀನಾಮೆ ನೀಡಿ, ಹೋರಾಟದಲ್ಲಿ ಭಾಗವಹಿಸುವೆ''.
-ಸಸಿಕಾಂತ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿ