ಲಿಂಗಾನುಪಾತದಿಂದ ಸಮಾಜದಲ್ಲಿ ಅಸಮಾನತೆ: ದಿನಕರ ಬಾಬು
ಉಡುಪಿ ಡಿ.27: ಹೆಣ್ಣು ಮತ್ತು ಗಂಡು ಮಕ್ಕಳ ಲಿಂಗಾನುಪಾತದಲ್ಲಿ ಹೆಚ್ಚುತ್ತಿರುವ ಅಸಮಾನತೆ ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ್ ಬಾಬು ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಕ್ಷಮ ಪ್ರಾಧಿಕಾರ ಪಿಸಿ ಮತ್ತು ಪಿಎನ್‌ಡಿಟಿ ವತಿಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ಜಿಲ್ಲೆಯಲ್ಲಿಯೂ ಭ್ರೂಣಲಿಂಗ ಪತ್ತೆ ಪ್ರಕರಣ ನಡೆದಿರುವುದು ಆಘಾತಕಾರಿ. ಇದು ಹೀಗೆ ಮುಂದುವರಿದರೆ ಸಮಾಜದ ಸಮತೋಲನ ತಪ್ಪುವುದರಲ್ಲಿ ಸಂದೇಹವಿಲ್ಲ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಈ ಕುರಿತು ಜನಸಾಮಾನ್ಯರಿಗೆ ಮಾಹಿತಿ ತಲುಪಿಸಿ ಜಾಗೃತಿ ಮೂಡಿುವ ಕಾರ್ಯ ಮಾಡಬೇಕು ಎಂದರು.
ಜಿಪಂ ಉಪಾಧ್ಯಕ್ಷೆ ಶೀಲಾ.ಕೆ.ಶೆಟ್ಟಿ ಮಾತನಾಡಿ, ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆಯ ಬಗ್ಗೆ ಇಂದಿನ ಜನಾಂಗದ ಯುವಕ ಯುವತಿಯರು ತಿಳಿದು ಕೊಳ್ಳವುದು ಅಗತ್ಯವಾಗಿದೆ. ಹಿಂದೆ ಭ್ರೂಣಲಿಂಗ ಪತ್ತೆ ಮಾಡುವ ತಂತ್ರಜ್ಞಾನ ಇರಲಿಲ್ಲ. ಆದರೆ ಈಗ ವಿಜ್ಞಾನ ಮುಂದುವರಿದಿದೆ ಮತ್ತು ಗರ್ಭದಲ್ಲಿರು ವಾಗಲೇ ಭ್ರೂಣಲಿಂಗ ಮತ್ತು ನ್ಯೂನ್ಯತೆಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ, ಇದರಲ್ಲಿ ಒಳಿತು ಮತ್ತು ಕೆಡುಕುಗಳು ಎರಡೂ ಇವೆ. ಹೆಣ್ಣೆಂದರೆ ಗಂಡಿಗಿಂತ ಕಡಿಮೆ ಎನ್ನುವ ತಾತ್ಸಾರ ಭಾವನೆಯಿಂದ ಕಾಣುವ ಮನಸ್ಥಿತಿ ಬದಲಾಗಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಸುಮಾ.ಎಸ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮ ಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸುಧೀರ್ ಚಂದ್ರ ಸೂಡ, ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ.ರಾವ್, ಡಾ.ರಾಜಲಕ್ಷ್ಮೀ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಶೇರಿಗಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
1000-977 ಮಕ್ಕಳ ಲಿಂಗಾನುಪಾತ
100 ಗಂಡು ಮಕ್ಕಳಿಗೆ 104 ಹೆಣ್ಣುಮಕ್ಕಳು ಇರಬೇಕು ಎಂಬುದು ಪ್ರಕೃತಿ ನಿಯಮ. ನವಜಾತ ಗಂಡು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಐದು ವರ್ಷದೊಳಗೆ ಮರಣ ಸಂಭವಿಸುವ ಕಾರಣ, ಐದು ವರ್ಷಗಳ ನಂತರ 100ಕ್ಕೆ 100 ಅನುಪಾತ ಇರಲಿದೆ. ತಂತ್ರಜ್ಞಾನದ ಪರಿಣಾಮ ಲಿಂಗಾನುಪಾತ ದಲ್ಲಿ ವ್ಯತ್ಯಾಸ ಕಂಡುಬರುತ್ತಿದ್ದು, ಜಿಲ್ಲೆಯಲ್ಲಿ ಪಸ್ತುತ ಲಿಂಗಾನುಪಾತ 1000 ಗಂಡು ಮಕ್ಕಳಿಗೆ 977 ಹೆಣ್ಣು ಮಕ್ಕಳಿದ್ದಾರೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮ ರಾವ್ ತಿಳಿಸಿದರು.
ಲಿಂಗಾನುಪಾತ ವ್ಯತ್ಯಾಸದಿಂದ ಮುಂದಿನ ಪೀಳಿಗೆಗೆ ಸಮಸ್ಯೆಯಾಗಲಿದೆ. ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ಉಡುಪಿಯಲ್ಲಿಯೂ ಭ್ರೂಣಲಿಂಗ ಪತ್ತೆ ಮಾಡುತ್ತಿರುವ ಪ್ರಕರಣ ಸಮೀಕ್ಷೆಯಲ್ಲಿ ಕಂಡು ಬಂದಿದೆ. ಕೆಲಮ ವೈದ್ಯರು ಹಣದ ಆಸೆಗೆ ಭ್ರೂಣಲಿಂಗ ಪತ್ತೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ಕಚೇರಿಗೆ ಗೌಪ್ಯವಾಗಿ ಮಾಹಿತಿ ನೀಡಬಹುದು ಎಂದು ಅವರು ಹೇಳಿದರು.