ರಸ್ತೆ ದುರಸ್ತಿಗೆ ಆಗ್ರಹಿಸಿ ತೆಂಕನಿಡಿಯೂರು ಗ್ರಾಪಂಗೆ ಮುತ್ತಿಗೆ

Update: 2019-12-27 14:34 GMT

ಮಲ್ಪೆ, ಡಿ.27: ಮುಖ್ಯ ರಸ್ತೆ ದುರಸ್ತಿಗೆ ಆಗ್ರಹಿಸಿ ಹಾಗೂ ಗ್ರಾಪಂ ನಿರ್ಲಕ್ಷ ವಿರುದ್ಧ ಕೆಳಾರ್ಕಳಬೆಟ್ಟು ವೀರ ಮಾರುತಿ ವ್ಯಾಯಾಮ ಶಾಲೆಯ ನೇತೃತ್ವದಲ್ಲಿ ಗ್ರಾಮಸ್ಥರು ಶುಕ್ರವಾರ ತೆಂಕನಿಡಿಯೂರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

 ಈ ಸಂದರ್ಭದಲ್ಲಿ ಮಾತನಾಡಿದ ವ್ಯಾಯಾಮ ಶಾಲೆಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಳೆದ ಹಲವು ವರ್ಷಗಳಿಂದ ಕೆಳಾರ್ಕಳಬೆಟ್ಟು ಮುಖ್ಯರಸ್ತೆ ಹದಗೆಟ್ಟಿದ್ದು, ಈ ಬಗ್ಗೆ ಸ್ಥಳೀಯಾಡಳಿತ ನಿರ್ಲಕ್ಷ ತೋರುತ್ತಿದೆ. ಗ್ರಾಪಂ ಉದ್ದೇಶ ಪೂರ್ವಕವಾಗಿ ವ್ಯಾಯಾಮ ಶಾಲೆಯ ರಸ್ತೆಗೆ ಬಿಡುಗಡೆಯಾದ ಅನುದಾನ ವನ್ನು ಸಮರ್ಪಕ ರೀತಿಯಲ್ಲಿ ಉಪಯೋಗಿಸದೆ ತನ್ನ ಬೇಜವಾಬ್ದಾರಿತನದಿಂದ ಅನುದಾನ ಹಿಂದೆ ಹೋಗುವಂತೆ ಮಾಡಿದೆ ಎಂದು ಆರೋಪಿಸಿದರು.

ಸಮೀಪದ ಮತ್ತೊಂದು ವಾರ್ಡಿನ ಉತ್ತಮ ರಸ್ತೆಯನ್ನು ಕಾಂಕ್ರೀಟಿಕರಣ ಗೊಳಿಸಿ ಹಣವನ್ನು ಪೋಲು ಮಾಡಲಾಗಿದೆ. ಅದೇ ರೀತಿ ಇಲ್ಲಿನ ಸ್ಮಶಾನವನ್ನು ಅಭಿವೃದ್ಧಿಪಡಿಸುವ ನೆಪದಿಂದ ಸ್ಮಶಾನ ಸಮಿತಿಯನ್ನು ರಚಿಸಿ, ಸ್ಮಶಾನದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಈ ದುರಾವಸ್ಥೆಗೆ ಗ್ರಾಮ ಪಂಚಾಯತ್ ನೇರ ಹೊಣೆಯಾಗಿದೆ ಎಂದು ಅವರು ದೂರಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷ ಕೃಷ್ಣ ಶೆಟ್ಟಿ, ವ್ಯಾಯಾಮ ಶಾಲೆಯ ಬಳಿಯ ರಸ್ತೆ ಕಾಮಗಾರಿಗೆ 2019ರ ಮಾರ್ಚ್‌ನಲ್ಲಿ 15ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಸರಕಾರದ ಬದಲಾವಣೆಯ ಸಂದರ್ಭ ತಾಂತ್ರಿಕ ಕಾರಣದಿಂದಾಗಿ ಅನುದಾನಕ್ಕೆ ತಡೆಯಾಗಿತ್ತು. ಇದೀಗ ಮತ್ತೆ ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವ್ಯಾಯಾಮ ಶಾಲೆಯ ಉಪಾಧ್ಯಕ್ಷ ಅನಿಲ್ ಪಾಲನ್, ವ್ಯಾಯಾಮ ಶಾಲೆ ಪದಾಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News