×
Ad

ತುಳುವಿಗೆ ಸ್ಥಾನಮಾನ ದೊರೆತರೆ ಭಾಷೆ ಅಭಿವೃದ್ಧಿ: ಶೇಷಶಯನ

Update: 2019-12-27 20:07 IST

ಉಡುಪಿ, ಡಿ.27: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಗೆ ರಾಜ್ಯದ ಸ್ಥಾನಮಾನ ದೊರೆತರೆ ಭಾಷೆಯ ಅಭಿವೃದ್ಧಿ ಹಾಗೂ ಸಾಹಿತ್ಯ, ಕಲೆ, ಪರಂಪರೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದ್ದಾರೆ.

ಉಡುಪಿ ತುಳುಕೂಟ ಹಾಗೂ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾದ ಉಡುಪಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ತುಳು ಸಂಭ್ರಮ ‘ಜೋಕ್ಲೆಗಾದ್ ತುಳು ನಡಕೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ತುಳುಕೂಟದ ಗೌರವಾಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಶಾಲಾ ಕಾಲೇಜು ಗಳಲ್ಲಿ ತೃತೀಯ ಭಾಷೆ ಆಗಿ ತುಳು ಕಲಿಯಲು ಅವಕಾಶ ಇದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಆ ಮೂಲಕ ತುಳುವಿನ ಬೆಳವಣಿಗೆಗೆ ಪ್ರೋತ್ಸಾಹ ನೀಡ ಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ಮಾತನಾಡಿ, ಪ್ರತಿ ಯೊಬ್ಬರಿಗೆ ತಮ್ಮ ಸಂಸ್ಕೃತಿ, ಭಾಷೆ ಹಾಗೂ ಇತಿಹಾಸದ ಅರಿವು ಇರಬೇಕು. ಇಲ್ಲದಿದ್ದರೆ ಅವರು ನೆಲೆ ಇಲ್ಲದಂತಹವರಾಗಿರುತ್ತಾರೆ. ಆದುದರಿಂದ ಮಕ್ಕಳಿಗೆ ತುಳು ಸಂಸ್ಕೃತಿ, ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಮಾಜ ಸೇವಕಿ ಪದ್ಮ ಕಿಣಿ, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಉಪಾಧ್ಯಕ್ಷ ಮಹಮ್ಮದ್ ಮೌಲ, ಕಾಲೇಜಿನ ಶೈಕ್ಷಣಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶೇಖರ ಕೋಟ್ಯಾನ್, ಶಾಲಾ ಅಭಿವೃದ್ಧಿ ಸಮಿತಿಯ ತಾರಾ ದೇವಿ, ವಿದ್ಯಾರ್ಥಿ ನಾಯಕಿ ವೈಷ್ಣವಿ ಉಪಸ್ಥಿತರಿದ್ದರು.

ತೀರ್ಪುಗಾರರಾಗಿ ತಾರಾ ಆಚಾರ್ಯ, ಸರೋಜ ಯಶವಂತ, ಯಶೋದ ಕೇಶವ್, ವಿದ್ಯಾ ರಮೇಶ, ಚಂದ್ರಶೇಖರ್ ಎರ್ಮಾಳ್, ವಿವೇಕಾನಂದ ಹಾಗೂ ರಮೇಶ್ ಕಲ್ಮಾಡಿ ಸಹಕರಿಸಿದರು. ಕಾರ್ಯಕ್ರಮ ಸಂಚಾಲಕ ಯಾದವ ಕರ್ಕೇರ ಸ್ವಾಗತಿಸಿದರು. ಉಪನ್ಯಾಸಕಿ ಸುಚಿತ್ರಾ ವಂದಿಸಿದರು. ದಯಾನಂದ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News