×
Ad

ಉಡುಪಿ ಜಿಲ್ಲೆಯಲ್ಲಿ 180 ಕೋಟಿ ರೂ. ವೆಚ್ಚದ ಕಾಮಗಾರಿ: ಸಚಿವ ಮಾಧುಸ್ವಾಮಿ

Update: 2019-12-27 21:59 IST

ಉಡುಪಿ, ಡಿ.27: ಉಡುಪಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 180 ಕೋಟಿ ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಉಡುಪಿಯ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರಾವಳಿ ಭಾಗದಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಪಶ್ವಿಮವಾಹಿನಿ ಯೋಜನೆಯಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ 180 ಕೋಟಿ ರೂ. ಮೊತ್ತದ ಕಾಮಗಾರಿ ಈಗ ಪ್ರಗತಿಯಲ್ಲಿವೆ ಎಂದು ಸಚಿವರು ತಿಳಿಸಿದರು.

ಕಿಂಡಿ ಅಣೆಕಟ್ಟುಗಳ ನಿರ್ಮಾಣ ಕುರಿತು ಟೆಂಡರ್ ಪಡೆದ ಗುತ್ತಿಗೆದಾರರು, ಕಾಮಗಾರಿಗಳನ್ನು ಪೂರ್ಣಗೊಳಿಸದ ಕುರಿತು ದೂರುಗಳು ಬಂದಿದ್ದು, ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಸಿದ ಅವರು, ಒಬ್ಬ ಗುತ್ತಿಗೆದಾರನಿಗೆ ಗರಿಷ್ಟ 5 ಗುತ್ತಿಗೆ ಮಾತ್ರ ಪಡೆಯಲು ಅವಕಾಶವಿದ್ದು, ಇಲಾಖೆಯಲ್ಲಿ ಗುತ್ತಿಗೆ ಪಡೆಯಲು ಗುತ್ತಿಗೆದಾರ ನೀಡುವ ಪ್ರಮಾಣಪತ್ರದಲ್ಲಿ, ವಾರ್ಷಿಕ ವಿವಿಧ ಇಲಾಖೆಯಿಂದ ಎಷ್ಟು ಕಾಮಗಾರಿ ಪಡೆದಿದ್ದಾರೆ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ನ್ಯಾಯಾಂಗ ಇಲಾಖೆಯಲ್ಲಿ ನ್ಯಾಯಾಧೀಶರ ಕೊರತೆ ಇಲ್ಲ. 7 ಮಂದಿ ಹೊಸ ನ್ಯಾಯಾಧೀಶರ ನೇಮಕಾತಿ ಆಗಿದೆ. ಜಿಲ್ಲಾ ಮಟ್ಟದಲ್ಲಿ ನ್ಯಾಯಾಲಯ ಗಳಿಗೆ ಅಗತ್ಯವಿರುವ ಎಲ್ಲಾ ಸೌಲ್ಯಗಳನ್ನು ಒದಗಿಸಲಾಗುವುದು. ಅಗತ್ಯವಿರುವ ತಾಲೂಕು ಕೇಂದ್ರ ದಲ್ಲಿ ಸಹ ನ್ಯಾಯಾಲಯಗಳ ನಿರ್ಮಾಣ ಮಾಡಲಾಗುವುದು. ನ್ಯಾಯಾಂಗ ಇಲಾಖೆಯು ಕೋರುವ ಎಲ್ಲಾ ಸೌಲ್ಯ ಗಳನ್ನು ಒದಗಿಸಲು ಬದ್ದವಾಗಿದ್ದು, ಬಾಕಿ ಇರುವ ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೊರತೆಯಿರುವ ಸರಕಾರಿ ಅಭಿಯೋಜಕರು ಮತ್ತು ಸಹಾಯಕ ಸರಕಾರಿ ಅಭಿಯೋಜಕರ ನೇಮಕಾತಿ ಕುರಿತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಸಚಿವರು, ಅಗತ್ಯ ಬಿದ್ದಲ್ಲಿ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವ ವಕೀಲರನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಿವಿಲ್ ನ್ಯಾಯಾಲಯಗಳಲ್ಲಿ 16 ಲಕ್ಷಕ್ಕೂ ಮಿಕ್ಕಿ ಪ್ರಕರಣಗಳು ಬಾಕಿ ಇದ್ದು, ಅಧಿಕಾರ ವಿಕೇಂದ್ರೀಕರಣದಡಿ ಜಿಲ್ಲಾಧಿಕಾರಿಗಳು, ಎಸಿಗಳು ಮತ್ತು ತಹಶೀಲ್ದಾರ್ ಹಂತದಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣ ಬಗೆಹರಿಸಲು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಸುರೇಶ್ ನಾಯಕ್ ಕುಯಿಲಾಡಿ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ದಂಡ ಮತ್ತು ಶಿಕ್ಷೆಗೆ ಅವಕಾಶವಿದೆ

ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡುವವರಿಗೆ ದಂಡ ಹಾಗೂ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವುಂಟು. ಅದನ್ನು ಜಾರಿಗೊಳಿಸಲು ಉತ್ತರ ಪ್ರದೇಶ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನಾವು ಈವರೆಗೆ ಇದನ್ನು ಜಾರಿ ಮಾಡಿಲ್ಲ. ಅಗತ್ಯಬಿದ್ದರೆ ಈ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಸಾರ್ವಜನಿಕ ಹಾಗೂ ಸರಕಾರಿ ಆಸ್ತಿಪಾಸ್ತಿಗಳಿಗೆ ಹಾನಿಯುಂಟು ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲೂ ಅವಕಾಶ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News