×
Ad

ನಗರಸಭೆ ಬಜೆಟ್ ಪೂರ್ವಭಾವಿ ಸಬೆ: ಸಾರ್ವಜನಿಕರಿಂದ ಸಲಹೆ ಪಡೆದ ಜಿಲ್ಲಾಧಿಕಾರಿ ಜಿ. ಜಗದೀಶ್

Update: 2019-12-27 22:10 IST

ಉಡುಪಿ, ಡಿ.27: ಉಡುಪಿ ನಗರಕ್ಕೆ ಅಗತ್ಯವಾಗಿರುವ ಯೋಜನೆಗಳ ಬಗ್ಗೆ ಸಾರ್ವಜನಿಕರಿಂದ ಸಲಹೆ-ಸೂಚನೆಗಳನ್ನು ಆಲಿಸಿ, ಅದಕ್ಕೆ ಪೂರಕವಾಗಿ ನಗರಸಭೆ ಬಜೆಟ್ ಸಿದ್ಧಪಡಿಸುವ ಕುರಿತಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಉಡುಪಿ ನಗರಸಭೆಯ ಬಜೆಟ್ ಪೂರ್ವಭಾವಿ ಸಭೆ ನಡೆಯಿತು.

ನಗರಸಭೆ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಇಂದ್ರಾಣಿ ನದಿ ಕಲುಷಿತವಾಗುತ್ತಿರುವ ಬಗ್ಗೆ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿ, ಕಲ್ಸಂಕದಿಂದ ಮಲ್ಪೆ ಬೀಚ್‌ವರೆಗೆ ಇಂದ್ರಾಣಿ ನದಿಯ ಸ್ವಚ್ಚತೆಗೆ ಟೆಂಡರ್ ಕರೆಯಲಾಗಿದೆ. ಹಾಗೂ ಉಡುಪಿ ಯುಜಿಡಿಯನ್ನು ಸರ್ವೇ ಮಾಡಿಸಿ ನದಿಗೆ ಕಲುಷಿತ ನೀರನ್ನು ಬಿಡುವುದನ್ನು ತಡೆಯಲು ಸೂಚಿಸಲಾಗಿದೆ. ನೇರವಾಗಿ ನದಿಗಳಿಗೆ ಕಲುಷಿತ ನೀರನ್ನು ಬಿಡುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನಗರದ ಬಸ್ ನಿಲ್ದಾಣಗಳ ನಿರ್ವಹಣೆ ವಿಚಾರದಲ್ಲಿ ಸಂಬಂಧಪಟ್ಟವರಿಗೆ ನಗರಸಭೆಯಿಂದ ನೋಟೀಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಎಷ್ಟು ಬಸ್ ನಿಲ್ದಾಣಗಳು ನಗರ ಸಭೆಯಿಂದ ನಿರ್ಮಾಣವಾಗಿದೆ ಮತ್ತು ಎಷ್ಟು ಬಸ್ ನಿಲ್ದಾಣಗಳು ಖಾಸಗಿಯಾಗಿ ನಿರ್ಮಿಸಲಾಗಿದೆ ಎಂಬುದರ ದಾಖಲೆಗಳನ್ನು ನೀಡುವಂತೆ ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಗಿದ್ದು, ಅದಕ್ಕನುಗುಣವಾಗಿ ಶೌಚಾಲಯ ಗಳ ನಿರ್ಮಾಣವಾಗಬೇಕಾಗಿದೆ. ನಗರದಲ್ಲಿ ಡ್ರೈನೇಜ್ ನೀರನ್ನು ರಸ್ತೆಗೆ ಬಿಡುತ್ತಿರುವ ವಿಚಾರದಲ್ಲಿ ಮಾತನಾಡಿ, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಬಜೆ ಡ್ಯಾಮ್‌ನಿಂದ ನಿರಂತರವಾಗಿ ನೀರನ್ನು ಉಡುಪಿಗೆ ಬಿಡುವಂತಾಗ ಬೇಕು. ಇದಕ್ಕೆ ವಿದ್ಯುತ್ ವ್ಯತ್ಯಯವಾಗಬಾರದು ಎಂಬ ವಿಚಾರದಲ್ಲಿ ಪ್ರತಿಕ್ರಿಯಿಸಿ, ಈ ಬಗ್ಗೆ ಮೆಸ್ಕಾಂನೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಬೀದಿ ದೀಪಗಳ ಸಮಸ್ಯೆ ಗಳನ್ನು ಶೀಘ್ರಲ್ಲಿ ಬಗೆಹರಿಸಲಾಗುವುದು ಎಂದರು

ಪ್ಲಾಸ್ಟಿಕ್ ಬ್ಯಾನ್ ಆದ ಬಳಿಕವೂ ಪ್ಲಾಸ್ಟಿಕ್ ಬಳಕೆ ಕಂಡುಬಂದಲ್ಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಸ ವಿಲೇವಾರಿ ವಿಚಾರದಲ್ಲಿನ ಲೋಪದೋಷಗಳನ್ನು ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು. ಉಡುಪಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸುದಾರಿಸಲು, ಮಲ್ಟಿಲೇನ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News