ಬೆಳ್ಮಣ್ ಮಹಿಳೆಯ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಸೆರೆ

Update: 2019-12-27 16:49 GMT

ಕಾರ್ಕಳ, ಡಿ.27: ಬೆಳ್ಮಣ್ ಗ್ರಾಮದ ಬೃಂದಾವನ ಮನೆ ನಿವಾಸಿ ಭರತ ಲಕ್ಷ್ಮೀ ಉಡುಪ(68) ಕೊಲೆ ಪ್ರಕರಣಕ್ಕೆ ಒಳಸಂಚು ನಡೆಸಿದ ಆರೋಪಿಯನ್ನು ಕಾರ್ಕಳ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಬೆಳ್ಮಣ್ ಮಡ್ಕುಕೆರೆಯ ನಿವಾಸಿ ರೋಹಿತ್ ಮಥಾಯಿಸ್(28) ಬಂಧಿತ ಆರೋಪಿ. ಈ ಹಿಂದೆ ಡಿ.23ರಂದು ಈ ಪ್ರಕರಣದಲ್ಲಿ ಸಾಂತೂರು ಕೊಪ್ಪಳದ ರೋನಾಲ್ಡ್ ಬರ್ಬೋಜಾ(45) ಹಾಗೂ ಶಿರ್ವದ ಸ್ಟೀವನ್ ಡಯಾಸ್(22) ಎಂಬವರನ್ನು ಪೊಲೀಸರು ಬಂಧಿಸಿದ್ದರು.

ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್ ಅವರಿಗೆ ದೊರೆತ ಮಾಹಿತಿ ಯಂತೆ ಡಿಸಿಐಬಿ ಸಿಬ್ಬಂದಿಗಳಾದ ಸುರೇಶ್, ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ತಂಡದ ಪ್ರಶಾಂತ್, ಘನಶ್ಯಾಮ್, ರೋಹಿತ್ ಮಥಾಯಿಸ್‌ನನ್ನು ಕೇರಳದ ಮಟ್ಟೂರು ಎಂಬಲ್ಲಿ ವಶಕ್ಕೆ ಪಡೆದು ಕಾರ್ಕಳಕ್ಕೆ ಕರೆ ತರಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈ ಮೂವರು ಭರತ ಲಕ್ಷ್ಮೀ ಉಡುಪರನ್ನು ಡಿ.20ರಂದು ಕೊಲೆ ಮಾಡಿ ಫ್ಲಾಸ್ಟಿಕ್ ಟರ್ಪಲ್‌ನಲ್ಲಿ ಕಟ್ಟಿ ಮೃತದೇಹವನ್ನು ಕಲ್ಯಾ ಗ್ರಾಮದ ಮೂಡುಮನೆ ಶಕುಂತಲಾ ಎಂಬವರ ಬಾವಿಗೆ ಎಸೆದು ಹೋಗಿದ್ದರು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಲಿಗೆ ಆರೋಪಿಗಳ ಸೆರೆ: ಈ ಕೊಲೆ ಪ್ರಕರಣದ ತನಿಖೆಯ ಸಂದರ್ಭ ಆರೋಪಿ ರೊನಾಲ್ಡ್ ಬರ್ಬೋಜಾ ನೀಡಿದ ಮಾಹಿತಿ ಯಂತೆ ಇವರು ಹಾಗೂ ಇತರರು ನ.23ರಂದು ಬೆಳ್ಮಣ್ ಗ್ರಾಮದ ಮಡ್ಕಕೆರೆ ಎಂಬಲ್ಲಿ ಐರಿನ್ ಮಥಾಯಸ್(51) ಎಂಬವರ ಮನೆಗೆ ನುಗ್ಗಿ ಐರಿನ್ ಅವರ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನು ಸುಲಿಗೆ ಮಾಡಿದ್ದರು.

ಈ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೋನಾಲ್ಡ್ ಅವರ ಮಗಳು, ಸಾಂತೂರು ಕೊಪ್ಪಳದ ರೆನಿಟಾ ಪ್ರಿಯಾ ಬರ್ಬೋಜಾ, ಶಿರ್ವದ ಮುಹಮ್ಮದ್ ಸಾಹೇಬ್, ಮುಹಮ್ಮದ್ ಫಯಾಝ್ ಎಂಬವರನ್ನು ಪೊಲೀಸರು ಬಂಧಿಸಿ, ಅವರಿಂದ ಎಲ್‌ಫೀಲ್ಡ್ ಬುಲೆಟ್, 14.230 ಗ್ರಾಂ ತೂಕದ 40ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಗ್ರಾಮಾಂತರ ಎಸ್ಸೈ ನಾಸೀರ್ ಹುಸೇನ್, ಸಿಬ್ಬಂದಿಗಳಾದ ಸತೀಶ್ ಬಟ್ವಾಡಿ, ಸತೀಶ್ ನಾಯ್ಕಾ, ಡಿಸಿಐಬಿ ಸಿಬ್ಬಂದಿಗಳಾದ ಸುರೇಶ್, ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ಸಿಬ್ಬಂದಿಗಳಾದ ಪ್ರಶಾಂತ್, ಗಣೇಶ್, ಘನಶ್ಯಾಮ್ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News