ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಕ್ಕ ಜಮಾಅತ್‌ನಿಂದ ಪ್ರತಿಭಟನೆ

Update: 2019-12-27 17:17 GMT

ಮುಕ್ಕ, ಡಿ. 27:  ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಮಂಗಳೂರು ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕೆಂದು ಆಗ್ರಹಿಸಿ ಮುಕ್ಕ ಜುಮಾ ಮಸೀದಿಯ ಜಮಾಅತ್‌ನ ನಾಗರೀಕರು ಶುಕ್ರವಾರ ಜುಮಾ ನಮಾಝಿನ ಬಳಿಕ ಜುಮಾ ಮಸೀದಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಮಾತನಾಡಿದ, ಮುಕ್ಕ ಜುಮಾ ಮಸೀದಿಯ ಖತೀಬ್ ಮನ್ಸೂರ್ ಮದನಿ ವೊಳವೂರು, ಮುಸ್ಲಿಮರು ಸಹಿತ ಭಾರತದ ಇನ್ನಿತರ ಹಿಂದುಳಿದ ವರ್ಗಗಳು ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೂ ಕೇಂದ್ರ ಸರಕಾರ ಜಾರಿಗೊಳಿಸಿರುವ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಲಾಠಿ ಬೀಸುವ ಮೂಲಕ ಪ್ರತಿಭಟನಾಕಾರರನ್ನು ಉದ್ರೇಕ ಗೊಳಿಸಿ ಬಳಿಕ ಇಬ್ಬರು ಅಮಾಯಕರನ್ನು ಕೊಂದು ಹಾಕಿದ್ದಾರೆ. ಅಲ್ಲದೆ, ಪರಿಹಾರ ನೀಡಬೇಕಿದ್ದ ರಾಜ್ಯ ಸರಕಾರ ಯಾರದೋ ಮಾತಿಗೆ ಮಣಿದು ನೀಡಿದ್ದ ಪರಿಹಾರವನ್ನೂ ಹಿಂಪಡೆದಿದೆ ಎಂದು ಹೇಳಿದರು.

ರಾಜ್ಯ ಹಾಗೂ ದೇಶಕ್ಕೆ ಮಾರಕವಾದ ಮತ್ತು ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ತಕ್ಷಣ ಹಿಂಪಡೆಯಬೇಕು. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವ ಜೊತೆಗೆ ಮೃತ ಅಮಾಯಕರ ಕುಟುಂಬಗಳಿಗೆ ರಾಜ್ಯ ಸರಕಾರ ಘೋಶಿಸಿದ್ದ ಪರಿಹಾರವನ್ನು ವಿತರಿಸಬೇಕೆರಂದು ಒತ್ತಾಯಿಸಿದರು.

ಈ ಸಂದರ್ಭ ಮಸೀದಿ ಆಡಳಿತ ಕಮಿಟಿಯ ಅಧ್ಯಕ್ಷ ಅಬ್ದುಲ್ ರಝಾಕ್, ಕಾರ್ಯದರ್ಶಿ ಎಂ.ಸಿ. ಫಾರೂಕ್, ನುಸ್ರತುಲ್ ಮಸಾಕೀನ್ ಅಧ್ಯಕ್ಷ ಅಬ್ದುಲ್ ರಹ್ಮಾನ್, ಎಸ್‌ಎಸ್‌ಸಿಸಿ ಅಧ್ಯಕ್ಷ ಮುಝಮ್ಮಿಲ್, ಅಕ್ಬರ್ ಅಲಿ, ಉಸ್ಮಾನ್, ಝಕರಿಯಾ ಸೇರಿದಂತೆ ಜಮಾತಿಗರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News