ಹಿಮಾಚಲ ಪ್ರದೇಶಕ್ಕೆ ಕರ್ನಾಟಕ ತಿರುಗೇಟು

Update: 2019-12-28 07:11 GMT

ಮೈಸೂರು, ಡಿ.27: ಹಿಮಾಚಲ ಪ್ರದೇಶ ವಿರುದ್ಧ ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ಕರ್ನಾಟಕ ತನ್ನ 2ನೇ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿ ತಿರುಗೇಟು ನೀಡುವ ಹಾದಿಯಲ್ಲಿದೆ.

ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮೂರನೇ ದಿನವಾದ ಶನಿವಾರ 7 ವಿಕೆಟ್‌ಗಳ ನಷ್ಟಕ್ಕೆ 235 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಹಿಮಾಚಲ ಪ್ರದೇಶ 107.4 ಓವರ್‌ಗಳಲ್ಲಿ 280 ರನ್ ಗಳಿಸಿ ಆಲೌಟಾಯಿತು. ಮೊದಲ ಇನಿಂಗ್ಸ್ ನಲ್ಲಿ 114 ರನ್ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.

72 ರನ್ನಿಂದ ಬ್ಯಾಟಿಂಗ್ ಆರಂಭಿಸಿದ ರಿಷಿ ಧವನ್ 93 ರನ್(141 ಎಸೆತ, 10 ಬೌಂಡರಿ,3 ಸಿಕ್ಸರ್)ಗಳಿಸಿ ಕೇವಲ 7 ರನ್‌ನಿಂದ ಶತಕ ವಂಚಿತರಾದರು. 18 ರನ್ ಗಳಿಸಿದ್ದ ವಶಿಷ್ಟ(34,69 ಎಸೆತ)ಅವರೊಂದಿಗೆ 8ನೇ ವಿಕೆಟ್‌ಗೆ 65 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸಿದರು.ಈ ಜೋಡಿ ಬೇರ್ಪಟ್ಟ ಬಳಿಕ ಹಿಮಾಚಲಪ್ರದೇಶ ತನ್ನ ಹಿಡಿತ ಕಳೆದುಕೊಂಡಿತು. 280 ರನ್‌ಗಳಿಗೆ ಆಲೌಟಾಯಿತು.

ಕರ್ನಾಟಕದ ಬೌಲಿಂಗ್ ವಿಭಾಗದಲ್ಲಿ ವಿ.ಕೌಶಿಕ್(4-59), ಪ್ರತೀಕ್ ಜೈನ್(3-54) ಹಾಗೂ ಎ.ಮಿಥುನ್(2-47)9 ವಿಕೆಟ್ ಹಂಚಿಕೊಂಡರು.

ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 55 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆಗ ಜೊತೆಯಾದ ದೇವದತ್ತ ಪಡಿಕ್ಕಲ್(ಔಟಾಗದೆ 69, 153 ಎಸೆತ, 4 ಬೌಂಡರಿ)ಹಾಗೂ ನಾಯಕ ಕರುಣ್ ನಾಯರ್(ಔಟಾಗದೆ 62, 150 ಎಸೆತ,4 ಬೌಂಡರಿ)4ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 136 ರನ್ ಸೇರಿಸಿ ತಂಡವನ್ನು ಆಧರಿಸಿದರು.

 ಮಾಯಾಂಕ್ ಅಗರ್ವಾಲ್(34, 58 ಎಸೆತ)ಹಾಗೂ ದೇಗಾ ನಿಶ್ಚಲ್(9)ಮೊದಲ ವಿಕೆಟ್‌ಗೆ 34 ರನ್ ಸೇರಿಸಿ ಸಾಧಾರಣ ಆರಂಭ ನೀಡಿದರು. ಅಗರ್ವಾಲ್ ಹಾಗೂ ಆರ್.ಸಮರ್ಥ್ (0)ಬೆನ್ನುಬೆನ್ನಿಗೆ ಔಟಾದಾಗ ಕರ್ನಾಟಕದ ಸ್ಕೋರ್ 55ಕ್ಕೆ3.

ಹಿಮಾಚಲದ ಪರವಾಗಿ ರಿಷಿ ಧವನ್ 56 ರನ್‌ಗೆ 3 ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್

► ಕರ್ನಾಟಕ ಮೊದಲ ಇನಿಂಗ್ಸ್:166

ಹಿಮಾಚಲಪ್ರದೇಶ ಮೊದಲ ಇನಿಂಗ್ಸ್: 280 ರನ್‌ಗೆ ಆಲೌಟ್

(ರಿಷಿ ಧವನ್ 93, ಪ್ರಿಯಾಂಶು ಖಂಡೂರಿ 69, ನಿಖಿಲ್ ಗಂಗ್ಟಾ 46, ವಶಿಷ್ಟ 34, ವಿ.ಕೌಶಿಕ್ 4-59, ಪ್ರತೀಕ್ ಜೈನ್ 3-54)

► ಕರ್ನಾಟಕ ಎರಡನೇ ಇನಿಂಗ್ಸ್: 67 ಓವರ್‌ಗಳಲ್ಲಿ 191/3

(ದೇವದತ್ತ ಪಡಿಕ್ಕಲ್ ಔಟಾಗದೆ 69, ಕರುಣ್ ನಾಯರ್ ಔಟಾಗದೆ 62, ಅಗರ್ವಾಲ್ 34, ರಿಷಿ ಧವನ್ 3-56)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News