ತನ್ನ ಎದೆ ಹಾಲು ನೀಡಿ ಐದು ಅವಧಿಪೂರ್ವ ಶಿಶುಗಳ ಪ್ರಾಣ ಉಳಿಸಿದ ಮಹಿಳೆ

Update: 2019-12-28 14:31 GMT

ಅಹ್ಮದಾಬಾದ್ : ಮೂರು ತಿಂಗಳ ಶಿಶುವಿನ ತಾಯಿಯಾಗಿರುವ 29 ವರ್ಷದ ರುಶೀನಾ ಡಾಕ್ಟರ್ ಮರ್ಫಟಿಯಾ ಅವರು ಸೂಪರ್ ತಾಯಿಯಾಗಿ ಬಿಟ್ಟಿದ್ದಾರೆ.

ಗುಜರಾತ್‍ ನಿವಾಸಿ ರುಶೀನಾ ಈಗಾಗಲೇ 12 ಲೀಟರ್ ನಷ್ಟು ತಮ್ಮ ಎದೆ ಹಾಲನ್ನು ದಾನವಾಗಿ ನೀಡಿ ಐದು ಅವಧಿಪೂರ್ವ ಶಿಶುಗಳ ಪ್ರಾಣವುಳಿಸಲು ನೆರವಾಗಿದ್ದಾರೆ. ಈ ಐದು ಶಿಶುಗಳೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ದಲ್ಲಿದ್ದಾಗ ಆಪತ್ಬಾಂಧವರಾಗಿ ಬಂದವರು ರುಶೀನಾ.

ಈ ಹಿಂದೆ ಈವೆಂಟ್  ಮ್ಯಾನೇಜರ್ ಆಗಿದ್ದ ಹಾಗೂ ಈಗ ಖಾಸಗಿ ಕಾಲೇಜಿನಲ್ಲಿ ಶಿಕ್ಷಕಿಯಾಗಿರುವ ರುಶೀನಾ ಸೆಪ್ಟೆಂಬರ್ 20ರಂದು ಪುತ್ರ ವಿಯಾನ್‍ಗೆ ಜನ್ಮ ನೀಡಿದ್ದರು. ತಾಯಿಯ ಹಾಲಿನ ಅಗತ್ಯವಿರುವ ಇತರ  ಶಿಶುಗಳಿಗೂ ತನ್ನ ಎದೆ ಹಾಲು ನೀಡುವ ಇಂಗಿತವನ್ನು ಆಕೆ ವ್ಯಕ್ತಪಡಿಸಿದ ನಂತರ  ಅವರ ತಂದೆ ಅರ್ಪಣ್ ನ್ಯೂಬಾರ್ನ್ ಕೇರ್ ಸೆಂಟರ್ ಗುರುತಿಸಿದ್ದರು. ಡಾ ಆಶಿಷ್ ಮೆಹ್ತಾ ಅವರು ನಡೆಸುವ  ಈ ಕೇಂದ್ರ ಇತ್ತೀಚೆಗೆ ಪ್ರಾಯೋಗಿಕ ನೆಲೆಯಲ್ಲಿ ''ಮದರ್ಸ್ ಓನ್ ಮಿಲ್ಕ್ ಬ್ಯಾಂಕ್'' ಆರಂಭಿಸಿತ್ತು. ಅವರ ಕ್ಲಿನಿಕ್‍ನಲ್ಲಿದ್ದ ಆರು ಅವಧಿಪೂರ್ವ ಶಿಶುಗಳ ದೇಹತೂಕ 600 ಗ್ರಾಂನಿಂದ ಹಿಡಿದು 1.5 ಕಿ.ಗ್ರಾಂ ತನಕ ಮಾತ್ರವಿತ್ತು. ಈ ಶಿಶುಗಳ ತಾಯಂದಿರು  ಒಂದೋ ಶಾರೀರಿಕವಾಗಿ ದುರ್ಬಲರಾಗಿದ್ದರು ಅಥವಾ ಆರೋಗ್ಯ ಕಾರಣಗಳಿಗಾಗಿ ಶಿಶುಗಳಿಗೆ ಎದೆ ಹಾಲು ನೀಡಲು ಅಸಮರ್ಥರಾಗಿದ್ದರು. ಇಂತಹ ಒಂದು ಸಂದರ್ಭದಲ್ಲಿ ರುಶೀನಾ ಈ  ಶಿಶುಗಳ ಪ್ರಾಣ ಕಾಪಾಡಿದ್ದಾರೆ. ರುಶೀನಾ ಆವರಂತೆಯೇ ಅರ್ಪಣ್ ಎದೆ ಹಾಲು ಬ್ಯಾಂಕ್‍ಗೆ  250 ಇತರ ತಾಯಂದಿರೂ ತಮ್ಮ ಎದೆ ಹಾಲು ದಾನವಾಗಿ ನೀಡುತ್ತಿದ್ದಾರೆ. ಈ ಎದೆ ಹಾಲಿನ ಬ್ಯಾಂಕ್ ಇಲ್ಲಿಯ ತನಕ 90 ಲೀಟರ್ ಹಾಲು ಪಡೆದಿದ್ದು ಇದನ್ನು ತಲಾ 150 ಎಂಎಲ್‍ನಂತೆ 600 ಶಿಶುಗಳಿಗೆ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News