ಹದಗೆಟ್ಟ ಪೇಜಾವರಶ್ರೀ ಆರೋಗ್ಯ ಸ್ಥಿತಿ : ಮೆದುಳು ನಿಷ್ಕ್ರಿಯ
ಉಡುಪಿ, ಡಿ. 28: ಕಳೆದ ಹತ್ತು ದಿನಗಳಿಂದ ಮಣಿಪಾಲ ಕೆಎಂಸಿಯ ತೀವ್ರ ನಿಗಾ ವಿಭಾಗದಲ್ಲಿ ಕೃತಕ ಉಸಿರಾಟ ವ್ಯವಸ್ಥೆಯೊಂದಿಗೆ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ಆರೋಗ್ಯ ಸ್ಥಿತಿ ಇಂದು ತೀವ್ರವಾಗಿ ಹದಗೆಟ್ಟಿದ್ದು, ಅವರ ಮೆದುಳು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ನಿಷ್ಕ್ರಿಯವಾಗತೊಡಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.
ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಇಂದು ಸಂಜೆ ಬಿಡುಗಡೆಗೊಳಿಸಿದ ವೈದ್ಯಕೀಯ ಬುಲೆಟಿನ್‌ನಲ್ಲಿ ಇದನ್ನು ತಿಳಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗಿದ್ದು, ಇಂದು ಅದು ಇನ್ನಷ್ಟು ಹದಗೆಟ್ಟಿದೆ. ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಮುಂದುವರಿದಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಗಾಗಿ ಕಳೆದ ಡಿ. 20ರಿಂದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರಶ್ರೀ ಜೀವರಕ್ಷಕ ಸಾಧನಗಳ ಅಳವಡಿಕೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅವರ ಉಸಿರಾಟ ಹಾಗೂ ಪ್ರಜ್ಞಾ ಸ್ಥಿತಿಯಲ್ಲಿ ಯಾವುದೇ ಗಣನೀಯ ಸುಧಾರಣೆ ಕಂಡುಬಂದಿಲ್ಲ ಎಂದು ಬುಲೆಟಿನ್ ತಿಳಿಸಿದೆ.
ಶುಕ್ರವಾರ ತಡರಾತ್ರಿ ಶ್ರೀಗಳಿಗೆ ಎಂಆರ್‌ಐ ಸ್ಕಾನಿಂಗ್ ಮಾಡಲಾಗಿದೆ. ಅವರಿಗೆ ನಡೆಸಿದ ಪರೀಕ್ಷೆಗಳ ಪ್ರಕಾರ ಮೆದುಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವರದಿ ಹೇಳಿದೆ.
ಈ ನಡುವೆ ಪೇಜಾವರಶ್ರೀಗಳ ಭೇಟಿಗೆ ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭ ಕರಂದ್ಲಾಜೆ, ಉಮಾಭಾರತಿ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲದೇ ಬೆಳಗ್ಗೆ ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿ ಸುಬ್ರಹ್ಮಣ್ಯ, ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಹಾಸನ ಅರೆ ಮಾದನಹಳ್ಳಿ ಮಠದ ಶ್ರೀಶಿವಸುಜ್ಞಾನ ತೀರ್ಥ ಸ್ವಾಮೀಜಿ ಅವರು ಇಂದು ಆಸ್ಪತ್ರೆಗೆ ಭೇಟಿ ನೀಡಿ ಪೇಜಾವರಶ್ರೀಗಳ ಆರೋಗ್ಯದ ಕುರಿತು ವಿಚಾರಿಸಿದರು.
‘ಪೇಜಾವರಶ್ರೀಗಳು ಟ್ರೀಟ್‌ಮೆಂಟ್‌ನಲ್ಲಿದ್ದಾರೆ. ಅವರು ಹೀಗೆ ಮಲಗಿರೋದನ್ನು ನಾವು ಯಾವತ್ತೂ ನೋಡಿಲ್ಲ. ಅವರದ್ದು ಮಗುವಿನಂತಹ ಮುಗ್ದತೆ. ಶ್ರೀಗಳು ಬೇಗ ಗುಣಮುಖರಾಗಲಿ, ಇನ್ನಷ್ಟು ಧರ್ಮದ ಕೆಲಸ ಮಾಡುವಂತಾಗಲಿ’ ಎಂದ ತೇಜಸ್ವ ಸೂರ್ಯ, ವೈದ್ಯರೊಂದಿಗೆ ಮಾತನಾಡಿದ ಬಳಿಕ ಅವರು ಗುಣಮುಖರಾಗುವ ನಂಬಿಕೆ ನಮಗೆ ಮೂಡಿದೆ ಎಂದರು.
‘ಸ್ವಾಮೀಜಿ ಯಾವತ್ತೂ ಚಟುವಟಿಕೆಯಿಂದ ಇರುವವರು. ಯಾವತ್ತೂ ಹಾಸಿಗೆ ಹಿಡಿದವರಲ್ಲ. ಹೀಗಾಗಿ ಅವರು ಬೇಗ ಚೇತರಿಸುವಂತಾಗಲಿ. ಅವರು ಎಲ್ಲರಿಗೂ, ಎಲ್ಲಾ ಧರ್ಮೀಯರಿಗೂ ಬೇಕಾದವರು. ಮತ್ತೆ ಮೊದಲಿನಂತೆ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿ. ರಾಮಮಂದಿರ ನಿರ್ಮಾಣ ಕಾಲದಲ್ಲಿ ಮತ್ತೆ ಸಕ್ರೀಯರಾಗಲಿ’ ಎಂದು ರವಿ ಸುಬ್ರಹ್ಮಣ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
‘ಪೇಜಾವರಶ್ರೀ ಯಥಾಸ್ಥಿತಿಯಲ್ಲಿದ್ದಾರೆ. ಉಸಿರಾಟ ನಡೆಯುತ್ತಿರುವುದನ್ನು ನಾನು ಕಂಡೆ. ಎಂಆರ್‌ಐ ವರದಿಗಾಗಿ ಎಲ್ಲರೂ ಕಾಯುತಿದ್ದಾರೆ. ಶ್ರೀಗಳ ಪ್ರಜ್ಞಾವಸ್ಥೆಯಲ್ಲಿ ಚೇತರಿಕೆ ಕಾಣಬೇಕಾಗಿದೆ. ಭಗವಂತನ ಅನುಗ್ರಹದಿಂದ ಅವರು ಚೇತರಿಸಿಕೊಳ್ಳುವ ನಿರೀಕ್ಷೆ ಇದೆ.’ ಎಂದು ಪುತ್ತಿಗೆ ಶ್ರೀಗಳು ಹಾರೈಸಿದರು.