ಡಿ. 29ಕ್ಕೆ ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ಸ್ವಾಮೀಜಿಯ ಸ್ಥಳಾಂತರ: ಪೇಜಾವರ ಕಿರಿಯ ಯತಿ
ಉಡುಪಿ : ಪೇಜಾವರ ಸ್ವಾಮೀಜಿಗಳ ಆರೋಗ್ಯ ಕ್ಷೀಣವಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆದುದರಿಂದ ಅವರನ್ನು ನಾಳೆ ಉಡುಪಿಯ ಪೇಜಾವರ ಮಠಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಇಂದು ರಾತ್ರಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೇಜಾವರ ಸ್ವಾಮೀಜಿಯ ಅಂತಿಮ ಆಸೆ ಕೂಡ ಅದೇ ಆಗಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರನ್ನೊಳಗೊಂಡ ವೆಂಟಿಲೇಟರ್ ವ್ಯವಸ್ಥೆಯನ್ನು ಮಠದಲ್ಲೇ ಮಾಡಲಾಗುತ್ತದೆ ಎಂದರು.
ಆಸ್ಪತ್ರೆಯವರ ಕೆಲ ಕಾರ್ಯ ವಿಧಾನಗಳು ಬಾಕಿ ಇದ್ದು, ಆ ಕುರಿತು ತಯಾರಿ ನೋಡಿಕೊಂಡು ಮುಂದಿನ ಕ್ರಮ ಮಾಡಲಾಗು ವುದು. ಸದ್ಯಕ್ಕೆ ಪೇಜಾವರ ಮಠಕ್ಕೆ ಭಕ್ತರ ಭೇಟಿ ನೀಡುವುದು ಬೇಡ ಎಂದು ವಿನಂತಿಸಿಕೊಂಡ ಪೇಜಾವರ ಕಿರಿಯ ಯತಿ, ಎಲ್ಲರೂ ಇದ್ದಲ್ಲಿಂದಲೇ ಗುರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ಪೂರ್ಣ ಸಹಕಾರ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದರು.