'ಬಡ ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಜಾರಿಗೆ ಪ್ರಯತ್ನ'
ಕುಂದಾಪುರ, ಡಿ.28: ಕೇಂದ್ರ ಸರಕಾರ ಜಾರಿಗೆ ತಂದಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮಾಜಕ್ಕೆ ಶೇ.10ರಷ್ಟು ಮೀಸಲಾತಿಯು ಬಿಹಾರ, ಗುಜರಾತ್, ಉತ್ತರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. ಅಲ್ಲಿ ಯಾವ ರೀತಿ ಅನುಷ್ಠಾನಗೊಳಿಸಲಾಗಿದೆ ಎಂದು ಸರಕಾರಿ ಆದೇಶವನ್ನು ತರಿಸಿ ಪರಿಶೀಲನೆ ನಡೆಸಿ, ರಾಜ್ಯದಲ್ಲೂ ಕೂಡ ಜಾರಿಗೆ ತರಲು ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಕುಂದಾಪುರ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರಕಾರಿ ಕಾಲೇಜಿನ ಮೈದಾನ ದಲ್ಲಿ ಆಯೋಜಿಸಲಾದ ಎರಡು ದಿನಗಳ 10ನೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣಪತ್ರ ನೀಡಬೇಕೆಂಬ ಬೇಡಿಕೆಯ ಬಗ್ಗೆ ಗಮನ ಕೊಡಲಾಗುವುದು. ಬೆಂಗಳೂರಿನಲ್ಲಿ ಬ್ರಾಹ್ಮಣ ಸಭಾಭವನ ನಿರ್ಮಿಸಲು ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿಯಾಗಿಲ್ಲದಿದ್ದರೂ ಮೊದಲ ಹಂತವಾಗಿ ಐದು ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಹಿಂದು ಸಮಾಜವನ್ನು ಜಾಗೃತಿಗೊಳಿಸಿದ ಕೀರ್ತಿ ಬ್ರಾಹ್ಮಣ ಸಮಾಜಕ್ಕೆ ಸಲ್ಲುತ್ತದೆ. ಈ ಸಮಾಜವು ಹಣ, ಸಂಪತ್ತು, ಆಸ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ಕಲೆ, ಶಿಕ್ಷಣ, ಸಾಹಿತ್ಯ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದುಡಿದು ದೇಶದ ಅಭಿವೃದ್ಧಿ ಅನನ್ಯ ಕೊಡುಗೆ ನೀಡಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಬ್ರಾಹ್ಮಣರಿಗೆ ಮೀಸಲಾತಿ ನೀಡುವ ಬಗ್ಗೆ ಅತಿ ಶೀಘ್ರದಲ್ಲಿ ಸಚಿವ ಸಂಪುಟ ದಲ್ಲಿ ತೀರ್ಮಾನ ತೆಗೆದುಕೊಂಡು ಅನುಷ್ಠಾನಕ್ಕೆ ತರಬೇಕು. ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಮುಂದಿನ ಬಜೆಟ್‌ನಲ್ಲಿ 100ಕೋಟಿ ರೂ. ಅನುದಾನ ಮೀಸ ಲಿರಿಸಬೇಕು ಎಂದು ಒತ್ತಾಯಿಸಿದರು.
ಸಂಸದೆ ಶೋಭಾ ಕರಂದ್ಲಾಜೆ, ಸಮ್ಮೇಳನದ ಗೌರವಾಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿದರು. ಸಮ್ಮೇಳನಾಧ್ಯಕ್ಷತೆಯನ್ನು ನೇರಂಬಳ್ಳಿ ರಾಘವೇಂದ್ರ ರಾವ್ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆಯನ್ನು ಮುಖ್ಯಮಂತ್ರಿ ಬಿಡುಗಡೆಗೊಳಿಸಿದರು.
ಸಮ್ಮೇಳನದ ಉಪಾಧ್ಯಕ್ಷರಾದ ಯು.ಮಹೇಶ್ ಕಾರಂತ್, ರಘುನಾಥ ಸೋಮಯಾಜಿ, ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಉಪಸ್ಥಿತರಿದ್ದರು. ಮಹಾಸಭಾದ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಸಂಚಾಲಕ ಕೃಷ್ಣಮೂರ್ತಿ ಮಂಜ ಸ್ವಾಗತಿಸಿದರು. ನಟಿ ಅರ್ಪಣಾ ಎನ್. ಕಾರ್ಯಕ್ರಮ ನಿರೂಪಿಸಿದರು.