ವಾಯುವ್ಯ ಸಿರಿಯಾದಲ್ಲಿ ತೀವ್ರ ಬಾಂಬ್ ದಾಳಿ: 2ಲಕ್ಷಕ್ಕೂ ಹೆಚ್ಚು ನಾಗರಿಕರ ಪಲಾಯನ
ಬೇರುತ್, ಡಿ.28: ವಾಯುವ್ಯ ಸಿರಿಯಾದಲ್ಲಿ ಬಂಡುಕೋರರ ಮೇಲೆ ರಶ್ಯದಿಂದ ತೀವ್ರ ಬಾಂಬ್ ದಾಳಿ ನಡೆದ ಹಿನ್ನೆಲೆಯಲ್ಲಿ ಶುಕ್ರವಾರ ಆ ಪ್ರಾಂತ್ಯದಿಂದ 2,35,000 ನಾಗರಿಕರು ನಗರಬಿಟ್ಟು ಸುರಕ್ಷಿತ ಪ್ರದೇಶಕ್ಕೆ ಪಲಾಯನ ಮಾಡಿರುವುದಾಗಿ ವರದಿಯಾಗಿದೆ.
ಡಿಸೆಂಬರ್ 12ರಿಂದ 25ರ ನಡುವೆ , 2,35000ಕ್ಕೂ ಹೆಚ್ಚು ಜನ ಲಾರಿಗಳಲ್ಲಿ ತಮ್ಮ ಬಟ್ಟೆಬರೆ, ಮನೆಬಳಕೆಯ ವಸ್ತುಗಳ ದಹಿತ ದಕ್ಷಿಣ ಇದ್ಲಿಬ್ ಪ್ರಾಂತ್ಯದಿಂದ ಸುರಕ್ಷಿತ ಪ್ರದೇಶದತ್ತ ಧಾವಿಸಿದ್ದಾರೆ. ಇದರಲ್ಲಿ ಶೇ.80ರಷ್ಟು ಮಹಿಳೆಯರು ಮತ್ತು ಮಕ್ಕಳು. ಇದೀಗ ಆ ಪಟ್ಟಣ ಬಹುತೇಕ ನಿರ್ಜನವಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ಸಮನ್ವಯ ಸಂಸ್ಥೆ ‘ಒಸಿಎಚ್‌ಎ’ ತಿಳಿಸಿದೆ.
ಸಿರಿಯಾದ ಇತರ ಭಾಗಗಳಲ್ಲಿ ಹಲವು ವರ್ಷಗಳಿಂದ ತೀವ್ರಗೊಂಡಿದ್ದ ಹಿಂಸಾಚಾರದ ಹಿನ್ನೆಲೆಯಲ್ಲಿ ಇದ್ಲಿಬ್ ಪ್ರದೇಶದಲ್ಲಿ ಸುಮಾರು 3 ಮಿಲಿಯ ಜನರಿಗೆ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡಲಾಗಿತ್ತು. ಸಿರಿಯಾದಲ್ಲಿ ಎಂಟು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಸಿರಿಯಾದ ಪ್ರಭುತ್ವಕ್ಕೆ ರಶ್ಯಾದ ಬೆಂಬಲವಿದ್ದರೆ ,ಎಚ್‌ಟಿಎಸ್ ಹಾಗೂ ಬಂಡುಕೋರರು ಸರಕಾರಕ್ಕೆ ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಡಿಸೆಂಬರ್ 15ರ ಬಳಿಕ ಸಂಘರ್ಷ ತೀವ್ರಗೊಂಡಿದ್ದು ಸುಮಾರು 80ರಷ್ಟು ನಾಗರಿಕರು ಬಲಿಯಾಗಿದ್ದಾರೆ ಎಂದು ಸಿರಿಯಾದ ಮಾನವಹಕ್ಕು ಸಂಘಟನೆ ವರದಿ ಮಾಡಿದೆ.