ಸೊಮಾಲಿಯ: ಕಾರು ಬಾಂಬ್ ಸ್ಪೋಟಕ್ಕೆ 76 ಮಂದಿ ಬಲಿ
ಮೊಗದಿಶು, ಡಿ.28: ಶನಿವಾರ ಸೊಮಾಲಿಯಾದ ರಾಜಧಾನಿ ಮೊಗದಿಶುವಿನಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟದಿಂದ ಕನಿಷ್ಟ 76 ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ಹಾಗೂ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅತ್ಯಂತ ವಿನಾಶಾಕಾರಿ ಸ್ಫೋಟ ಇದಾಗಿದ್ದು 76 ನಾಗರಿಕರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಸತ್ತವರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಪೊಲೀಸ್ ಅಧಿಕಾರಿ ಇಬ್ರಾಹಿಂ ಮುಹಮ್ಮದ್ ಹೇಳಿದ್ದಾರೆ. 73 ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ಮದೀನಾ ಆಸ್ಪತ್ರೆಯ ನಿರ್ದೇಶಕ ಡಾ ಮುಹಮ್ಮದ್ ಯೂಸುಫ್ ಹೇಳಿದ್ದಾರೆ.
ಸ್ಫೋಟ ಸಂಭವಿಸಿದ್ದ ಪ್ರದೇಶದಲ್ಲಿ ತೆರಿಗೆ ಕಚೇರಿ ಹಾಗೂ ಭದ್ರತಾ ಚೆಕ್‌ಪೋಸ್ಟ್ ಇರುವ ಕಾರಣ ಈ ಪ್ರದೇಶದಲ್ಲಿ ಸದಾ ಜನಗಂಗುಳಿ ಇರುತ್ತದೆ. ಸ್ಪೋಟ ಸಂಭವಿಸಿದಾಗ ಬಹುತೇಕ ವಿದ್ಯಾರ್ಥಿಗಳೇ ಇದ್ದ ಬಸ್ಸೊಂದು ಆ ಪ್ರದೇಶದಲ್ಲಿ ಸಂಚರಿಸುತ್ತಿತ್ತು. ಬಲಿಯಾದವರಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಇಬ್ಬರು ಟರ್ಕಿ ನಾಗರಿಕರೂ ಸೇರಿದ್ದಾರೆ.
ಸ್ಫೋಟದ ತೀವ್ರತೆಯಿಂದ ಮನುಷ್ಯರ ದೇಹ ಛಿದ್ರವಾಗಿದ್ದು ಮೃತಪಟ್ಟವರಲ್ಲಿ ಹೆಚ್ಚಿವರ ಗುರುತು ಪತ್ತೆಹಚ್ಚಲೂ ಕಷ್ಟವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಅಲ್‌ಖೈದಾದ ಸಹಸಂಸ್ಥೆ ಅಲ್-ಶಬಾಬ್ ಉಗ್ರಸಂಘಟನೆ ಸೊಮಾಲಿಯಲ್ಲಿ ಆಗಿಂದಾಗ್ಗೆ ಬಾಂಬ್ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದೆ. ಈ ಉಗ್ರ ಸಂಘಟನೆಯನ್ನು ಸೊಮಾಲಿ ರಾಜಧಾನಿಯಿಂದ 2011ರಲ್ಲಿ ಹೊರಗಟ್ಟಲಾಗಿದ್ದರೂ ಈಗಲೂ ಸಂಘಟನೆಯ ಉಗ್ರರು ದೇಶದ ಹಲವು ಪ್ರದೇಶಗಳ ಮೇಲೆ ನಿಯಂತ್ರಣ ಹೊಂದಿದ್ದಾರೆ. ಎರಡು ವಾರದ ಹಿಂದೆ ಮೊಗದಿಶುವಿನ ಹೋಟೆಲ್ ಮೇಲೆ ಅಲ್ ಶಬಾಬ್ ಉಗ್ರರು ಬಾಂಬ್‌ದಾಳಿ ನಡೆಸಿದ್ದಾಗ 5 ಮಂದಿ ಮೃತರಾಗಿದ್ದರು.