×
Ad

ಭಾರತದ ಇಂದಿನ ಸ್ಥಿತಿ ಭಯಾನಕ: ಶಿಹಾಬ್ ತಂಙಳ್

Update: 2019-12-29 22:56 IST

ಕೊಲ್ಲಂ: ಜಾತ್ಯತೀತ ಭಾರತದ ಇಂದಿನ ಪರಿಸ್ಥಿತಿಯು ಭಯಾನಕವಾಗಿದೆ. ಧರ್ಮ ಹೆಸರಿನಲ್ಲಿ ಭಿನ್ನತೆ ಸೃಷ್ಟಿಸಿ ದೇಶದ ಪ್ರಜೆಗಳನ್ನು ಧರ್ಮಾಧಾರಿತವಾಗಿ ವಿಂಗಡಿಸುವ ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನ ವಿರೋಧಿ ಹಾಗೂ ಭಾರತದ ಪರಂಪರೆ ವಿರುದ್ಧವೂ ಆಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಉಪಾಧ್ಯಕ್ಷ ಪಾಣಕ್ಕಾಡ್ ಸೈಯದ್ ಹೈದರಲಿ ಶಿಹಾಬ್ ತಂಙಳ್ ಹೇಳಿದ್ದಾರೆ.

ಕೊಲ್ಲಂ ಜಿಲ್ಲೆಯ ಆಶ್ರಮ ಮೈದಾನದಲ್ಲಿ ನಡೆದ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಂನ 60ನೇ ವಾರ್ಷಿಕ ಮಹಾ ಸಮೇಳನವನ್ನು ಉದ್ಘಾಟಿಸುತ್ತಾ ಅವರು ಮಾತನಾಡುತ್ತಿದ್ದರು.

ಭಾರತವು ಸರ್ವ ಧರ್ಮಿಯರನ್ನೊಳಗೊಂಡ ದೇಶವಾಗಿದ್ದು, ಹೊಸ ಕಾನೂನುಗಳನ್ನು ಜಾರಿಗೊಳಿಸಿ ಒಂದು ಧರ್ಮಿಯರನ್ನು ಮಾತ್ರ ಭಾರತದಿಂದ ಹೊರಗಿಡುವ ಕೇಂದ್ರ ಸರಕಾರದ ಪ್ರಯತ್ನವು ವಿಫಲವಾಗಲಿದೆ. ಆದ್ದರಿಂದ ದೇಶದ ಅಖಂಡತೆ ಹಾಗೂ ಪರಂಪರೆಯ ಉಳಿವಿಗಾಗಿ ಪೌರತ್ವ ತಿದ್ದುಪಡಿ ಕಾನೂನನ್ನು ಹಿಂಪಡೆಯಬೇಕೆಂದು ಅವರು ಕರೆ ನೀಡಿದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಅಧ್ಯಕ್ಷೀಯ ಭಾಷಣ ಮಾಡುತ್ತಾ, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಲು ಕೇವಲ ಪ್ರತಿಭಟನೆಗಳಿಗೆ ಮಾತ್ರ ಸೀಮಿತಗೊಳಿಸದೆ, ವಿವಿಧ ಧಾರ್ಮಿಕ ಮುಖಂಡರನ್ನೊಳಗೊಂಡ ಜಾತ್ಯಾತೀತ ತತ್ವದ ಮೇಲೆ ನಂಬಿಕೆಯಿರಿಸುವ ರಾಜಕೀಯ ಪಕ್ಷಗಳ ನಿಯೋಗವು ಪ್ರಧಾನಿಯ ಬಳಿ ತೆರಳಿ ಒತ್ತಡ ಹೇರುವಂತೆ ಮನವಿ ಮಾಡಿದರು.

ಕೇರಳ ಸರಕಾರದ ವಿರೋಧ ಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮಾತನಾಡಿ, ದೇಶದ ಪರಂಪರೆಗೆ ಭಂಗ ತರುವಂತಹ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಕೇಂದ್ರ ಸರಕಾರವು ಕೈ ಹಾಕಿದಾಗ ರಾಜಕೀಯವನ್ನು ಮರೆತು ಆಡಳಿತ ಹಾಗೂ ಪ್ರತಿಪಕ್ಷಗಳು ಒಗ್ಗಟ್ಟಾಗಿ ಹೋರಾಟಕ್ಕಿಳಿದಿದ್ದೇವೆ. ಈ ಕಾನೂನನ್ನು ಹಿಂಪಡೆಯುವವರೆಗೆ ಇದೇ ರೀತಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಸಮಸ್ತ ಪ್ರ. ಕಾರ್ಯದರ್ಶಿ ಶೈಖುಲ್ ಜಾಮಿಅಃ ಆಲಿಕುಟ್ಟಿ ಮುಸ್ಲಿಯಾರ್, ಶೈಖ್ ಫುಹಾದ್ ಮಹ್ಮೂದ್ ಅಲ್ ಖೈಯಾದ್, ಸಂಸದರಾದ ಕುಂಞಾಲಿಕುಟ್ಟಿ, ಎಂ.ಕೆ. ಪ್ರೇಮಚಂದ್ರನ್, ಸಮಸ್ತ ಕಾರ್ಯದರ್ಶಿ ಕೊಯ್ಯೋಡ್ ಉಮರ್ ಮುಸ್ಲಿಯಾರ್, ಉಪಾಧ್ಯಕ್ಷ ಎಂಟಿ ಅಬ್ದುಲ್ಲ ಮುಸ್ಲಿಯಾರ್, ಪಾಣಕ್ಕಾಡ್ ಸಯ್ಯದ್ ಸ್ವಾದಿಕ್ ಅಲಿ ಶಿಹಾಬ್ ತಂಙಳ್, ಕೋಝಿಕ್ಕೋಡ್ ಖಾಝಿ ಮುಹಮ್ಮದ್ ಜಮಲುಲ್ಲೈಲಿ ತಂಙಳ್, ಅಬ್ದುಲ್ ನಾಸಿರ್ ಶಿಹಾಬ್ ತಂಙಳ್, ಅಬ್ದುಲ್ ಸಮದ್ ಪೂಕೋಟೂರು, ಹಮೀದ್ ಫೈಝಿ ಅಂಬಲಕ್ಕಡವ್ ಓಣಂಪಲ್ಲಿ ಮುಹಮ್ಮದ್ ಫೈಝಿ ಮುಂತಾದವರು ಮಾತನಾಡಿದರು.

ಎಸ್‌ಕೆಎಸ್ಸೆಸ್ಸೆಫ್ ಕೇರಳ ರಾಜ್ಯಾಧ್ಯಕ್ಷ ಹಮೀದಲಿ ಶಿಹಾಬ್ ತಂಙಳ್, ಮುನವ್ವರ್ ಅಲಿ ಶಿಹಾಬ್ ತಂಙಳ್, ಅಬ್ಬಾಸಲಿ ಶಿಹಾಬ್ ತಂಙಳ್, ಪಿಕೆಪಿ ಅಬ್ದುಸ್ಸಲಾಂ ಮುಸ್ಲಿಯಾರ್ ಹಾಗೂ ಸಮಸ್ತದ ಮುಶಾವರ ಸದಸ್ಯರು, ಪೋಷಕ ಸಂಘಟನೆಯ ಪದಾಧಿಕಾರಿ ಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News