ಕಾಡ್ಗಿಚ್ಚಿಗೆ ಆಸ್ಟ್ರೇಲಿಯ ಕಂಗಾಲು: ವಿಹಾರಧಾಮ ತೊರೆಯಲು ಸಾವಿರಾರು ಪ್ರವಾಸಿಗರಿಗೆ ಸೂಚನೆ

Update: 2019-12-29 17:31 GMT

ಸಿಡ್ನಿ, ಡಿ.29: ಕಳೆದ ಒಂದು ತಿಂಗಳಿನಿಂದ ದಕ್ಷಿಣ ಆಸ್ಟ್ರೇಲಿಯದಲ್ಲಿ ಭುಗಿಲೆದ್ದಿರುವ ಕಾಡ್ಗಿಚ್ಚಿನ ಪ್ರಕೋಪವನ್ನು ತಹಬಂಧಿಗೆ ತರಲು ಆಸ್ಟ್ರೇಲಿಯನ್ ಅಧಿಕಾರಿಗಳು ಹರಸಾಹಸ ಪಡುತ್ತಿರುವಂತೆಯೇ, ದೇಶದ ಅತ್ಯಂತ ಜನಪ್ರಿಯ ಪ್ರವಾಸಿಧಾಮವಾದ ಈಸ್ಟ್ ಗಿಪ್ಸ್‌ಲ್ಯಾಂಡ್ ಕೂಡಾ ಕಾಡ್ಗಿಚ್ಚಿಗೆ ಸಿಲುಕಿಕೊಂಡಿದ್ದು, ಅಲ್ಲಿ ಬೀಡುಬಿಟ್ಟಿರುವ ಸಾವಿರಾರು ಪ್ರವಾಸಿಗರು ಸ್ಥಳವನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

ವಿಕ್ಟೋರಿಯಾ ರಾಜ್ಯದಲ್ಲಿರುವ ಈಸ್ಟ್‌ಗಿಪ್ಸ್‌ಲ್ಯಾಂಡ್‌ನಲ್ಲಿ ತಾಪಮಾನದಲ್ಲಿ ಭಾರೀ ಏರಿಕೆಯಾಗಿದ್ದು, ಕಾಡ್ಗಿಚ್ಚು ಎಲ್ಲೆಡೆ ಹರಡುವ ಭೀತಿಯಿದೆಯೆಂದು ಅಗ್ನಿಶಾಮಕದಳದ ಮುಖ್ಯಸ್ಥ ಕ್ರಿಸ್ ಹಾಡ್‌ಮ್ಯಾನ್ ತಿಳಿಸಿದ್ದಾರೆ.

ಈಸ್ಟ್ ಗಿಪ್ಸ್‌ಲ್ಯಾಂಡ್‌ನ 3 ಲಕ್ಷ ಹೆಕ್ಟೇರ್‌ಗೂ ಅಧಿಕ ವಿಸ್ತೀರ್ಣದ ಅರಣ್ಯ ಪ್ರದೇಶದ 1 ಲಕ್ಷ ಹೆಕ್ಟೇರ್‌ಗೂ ಅಧಿಕ ಭಾಗ ಕಾಡ್ಗಿಚ್ಚಿನಿಂದಾಗಿ ಹೊತ್ತಿ ಉರಿಯುತ್ತಿದೆ.

ನ್ಯೂಸೌತ್‌ವೇಲ್ಸ್, ದಕ್ಷಿಣ ಆಸ್ಟ್ರೇಲಿಯ, ವಿಕ್ಟೋರಿಯಾ ಹಾಗೂ ಕ್ವೀನ್ಸ್‌ಲ್ಯಾಂಡ್ ರಾಜ್ಯಗಳಲ್ಲಿ ಕಾಡ್ಗಿಚ್ಚು ಅವ್ಯಾಹತವಾಗಿ ಹರಡುತ್ತಿದ್ದು, ಅದನ್ನು ನಂದಿಸಲು ಅಗ್ನಿಶಾಮಕ ದಳ ನಡೆಸುತ್ತಿರುವ ಪ್ರಯತ್ನಗಳು ಇನ್ನೂ ಯಶಸ್ವಿಯಾಗಿಲ್ಲ.

ಕಾಡ್ಗಿಚ್ಚಿನಿಂದಾಗಿ 1ಸಾವಿರಕ್ಕೂ ಅಧಿಕ ಮನೆಗಳು ಅಗ್ನಿಗಾಹುತಿಯಾಗಿದ್ದು, ಅವುಗಳಲ್ಲಿ 800 ಮನೆಗಳು ನ್ಯೂಸೌತ್‌ವೇಲ್ಸ್ ರಾಜ್ಯದ್ದಾಗಿವೆ. ಕಾಡ್ಗಿಚ್ಚನ್ನು ನಂದಿಸುವ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ನಾಗರಿಕರು ಸ್ವಯಂಸೇವಕರಾಗಿ ಪಾಲ್ಗೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News