×
Ad

ಕುವೆಂಪು ಅವರ ಚಿಂತನೆ ಮೈಗೂಡಿಸಿಕೊಂಡು ಜೀವನ‌ ಸಾಗಿಸೋಣ: ಚಲುವರಾಯಸ್ವಾಮಿ‌

Update: 2019-12-29 23:26 IST

ಮಂಡ್ಯ, ಡಿ.29: ರಾಷ್ಟ್ರಕವಿ, ರಸ ಋಷಿ ಕುವೆಂಪು ಅವರ ಚಿಂತನೆಯನ್ನು ಮೈಗೂಡಿಸಿಕೊಂಡು ಜೀವನ‌ ಸಾಗಿಸೋಣ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ‌ ಕರೆ ನೀಡಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್ನಲ್ಲಿ ಕರುನಾಡ ಸೇವಕರು-ಕನ್ನಡಪರ ಸಂಘಟನೆಗಳ ಒಕ್ಕೂಟ ಏರ್ಪಡಿಸಿದ್ದ ವಿಶ್ವಮಾನವ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ಕುವೆಂಪು ಕನ್ನಡ ಹಬ್ಬ ಮತ್ತು ಜಾನಪದ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಹಲವಾರು ಸಂಘಟನೆ ಅಸ್ತಿತ್ವದಲ್ಲಿದೆ. ಆದರೆ ಜನಪರವಾಗಿರುವ, ಕಾಳಜಿ ಹೊಂದಿರುವ  ಸಂಘಟನೆಗೆ ಸಾರ್ವಜನಿಕ ಬೆಂಬಲ ಸದಾ ಇರುತ್ತದೆ ಎಂದರು.

ರಾಜೀವ್ ಗಾಂಧಿ ಆರೋಗ್ಯ ವಿವಿಯ ಸಿಂಡಿಕೇಟ್ ಸದಸ್ಯ ಹೆಚ್.ಎನ್.ರವೀಂದ್ರ  ಮಾತನಾಡಿ, ಕುವೆಂಪು ತತ್ವಗಳನ್ನು ಬಳಸಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂದು ವಿಷಾದಿಸಿದರು.

ಮಂತ್ರಮಾಂಗಲ್ಯ ಅಳವಡಿಸಿಕೊಳ್ಳಬೇಕು. ಗುಡಿ, ಚಚ್೯, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಮನುಜಮತ ವಿಶ್ವಪಥ, ವಿಶ್ವಮಾನವ ಸಂದೇಶ ಪಾಲಿಸಬೇಕು ಎಂದು ಕರೆ ನೀಡಿದರು. ಕುವೆಂಪು ವಿಶ್ವಮಾನವ ಸಂದೇಶ ಸಾರಿದರೂ ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸಲ್ಲ ಎಂದು ಕಿವಿಮಾತು ಹೇಳಿದರು.

ಸಮಾಜಕ್ಕೆ‌ ಮಹತ್ತರ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಜಾತಿ, ಧರ್ಮದ ಹಿನ್ನಲೆಯಲ್ಲಿ ಸೀಮಿತಗೊಳಿಸಬಾರದು. ಈ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಮಾತನಾಡಿ, ಶೇ.100ರಷ್ಟು ಕನ್ನಡ ಬಳಕೆ ಮಾಡುವ ಮಂಡ್ಯ ಜಿಲ್ಲೆಯ ಜೊತೆ ಕುವೆಂಪು ಅವರು ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಕರುನಾಡ ಸೇವಕರು ರಾಜ್ಯಾಧ್ಯಕ್ಷ ಲೋಕೇಶ್ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಸದಸ್ಯ ನಾಗೇಶ್, ಜನಪರ ಹೋರಾಟಗಾರರಾದ ಎಂ.ಬಿ.ನಾಗಣ್ಣಗೌಡ, ಸಂಪತ್ ಗೌಡ ಮೊದಲಾದವರು ಹಾಜರಿದ್ದರು.

ಇದಕ್ಕೂ ಮುನ್ನಾ ನಗರದ ಕಾಳಿಕಾಂಭ ದೇವಾಲಯದ ಬಳಿಯಿಂದ ಪೇಟೆಬೀದಿ, ಆರ್.ಪಿ ರಸ್ತೆ,  ವಿವಿ ರಸ್ತೆ ಮೂಲಕ ಮೆರವಣಿಗೆ ಕಾರ್ಯಕ್ರಮ ವೇದಿಕೆ ತಲುಪಿತು. 500 ಅಡಿ ಉದ್ದದ ಕನ್ನಡ ಬಾವುಟ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳು ‌ಗಮನ ಸೆಳೆದರು. ಕುವೆಂಪು ಅವರ ಭಾವಚಿತ್ರವನ್ನು‌ ಬೆಳ್ಳಿರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಆರ್.ಎ.ಪಿ.ಸಿ.ಎಂ.ಎಸ್ ಮುಂಭಾಗದಲ್ಲಿರುವ ಕುವೆಂಪು ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. 

ವೇದಿಕೆಯಲ್ಲಿ‌ ಶಾಲಾ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತ್ಯ, ಹಾಸ್ಯ ಕಲಾವಿದ ಬೆಮೆಲ್ ಕಂಪಲಪ್ಪ ಅವರ ಹಾಸ್ಯ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News