×
Ad

ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು : ರಮಾನಾಥ ರೈ

Update: 2019-12-29 23:33 IST

ಬಂಟ್ವಾಳ, ಡಿ. 29: ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರನ್ನು ನೆನಪು ಮಾಡಿಕೊಳ್ಳುವ ಕಾರ್ಯವಾಗಬೇಕು. ಭಾಷೆಗಳ ಬಳಕೆ ಕಡಿಮೆಯಾದಾಗ ನಶಿಸಿ ಹೋಗುವ ಸಾಧ್ಯತೆ ಇದ್ದು ಇಂತಹ ಸ್ಥಿತಿ ಕನ್ನಡಕ್ಕೆ ಬಾರದಿರಲಿ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.

ಅವರು ರವಿವಾರ ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ವೀಳ್ಯ ಪ್ರಧಾನ ಮಾಡಿ ಮಾತನಾಡಿದರು.

ಮಂಗಳೂರು ಶ್ರೀರಾಮಕೃಷ್ಣ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಹೊಸ ಅವಿಷ್ಕಾರಗಳು ಭಾಷೆಯ ಮೇಲೆ ಪರಿಣಾಮ ಬೀರುತ್ತಿದೆ. ಮೇಳದ ಸಂಖ್ಯೆ ಯಕ್ಷಗಾನದ ಬೆಳವಣಿಗೆಯ ಸೂಚಕವಲ್ಲ. ಯಕ್ಷಗಾನ ಪ್ರಸಂಗ ಕರ್ತರು ನಿಜವಾದ ಸಾಹಿತಿಯಾಗಿದ್ದು, ಅವರನ್ನು ಗುರುತಿಸುವ ಕಾರ್ಯವಾಗಬೇಕು. ಯುವ ಶಕ್ತಿ ತಾಳ್ಮೆಯಿಂದ ವರ್ತಿಸಿದರೆ ಶಾಂತಿಯುತ ಸಮಾಜ ನಿರ್ಮಿಸಬಹುದು ಎಂದು ಹೇಳಿದರು.

ಸಮ್ಮೇಳನಾಧ್ಯಕ್ಷೆ ಡಾ. ಧರಣೀದೇವಿ ಮಾಲಗತ್ತಿ ಮಾತನಾಡಿ ಕನ್ನಡ ಸಾಹಿತ್ಯ ಹಾಗೂ ನುಡಿಗೆ ಎಂದಿಗೂ ಅಳಿವು ಇಲ್ಲ. ಅದು ಶಾಶ್ವತವಾಗಿರುತ್ತದೆ. ರಾಜ್ಯದೆಲ್ಲಡೆ ನಿರಂತರ ಕನ್ನಡ ಸಮ್ಮೇಳನ ನಡೆಯುತ್ತಿರುತ್ತದೆ. ಸಾಹಿತ್ಯಕ್ಕೆ ಯಾವುದೇ ಕೊರತೆ ಇಲ್ಲ. ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ ಹೆಚ್ಚು ಹೆಚ್ಚು ಅಂಕ ಪಡೆಯಬೇಕು. ಎಲ್ಲಿಯೂ ಹೋದರೂ ಕನ್ನಡತನವನ್ನು ಉಳಿಸುವ ಕಾರ್ಯ ನಡೆಯಬೇಕು. ನುಡಿ ಉಳಿದಾಗ ನಾಡು ಉಳಿಯುತ್ತದೆ ಎಂದು ಹೇಳಿದರು.

ವಾಮದಪದವು ಶ್ರೀಧರ ಪೈ ಅವರನ್ನೊಳಗೊಂಡ ಕನ್ನಡ ಸಾಹಿತ್ಯಾಭಿಮಾನಿಗಳು ವೀಳ್ಯ ಸ್ವೀಕರಿಸಿದರು. ಕನ್ನಡ ಭಾಷೆಯಲ್ಲಿ ಎಸೆಸೆಲ್ಸಿಯಲ್ಲಿ ಪೂರ್ಣ ಅಂಕ ಗಳಿಸಿದ ಅಖಿಲ ಪಿ.ಕೆ. ಅವರನ್ನು ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ತಾಲೂಕು‌ ಪಂಚಾಯತ್ ಸದಸ್ಯೆ ಮಂಜುಳಾ ಕುಶಲ ಪೆರಾಜೆ, ಮಾಣಿ ಗ್ರಾಪಂ ಅಧ್ಯಕ್ಷೆ ಮಮತಾ ಎಸ್. ಶೆಟ್ಟಿ, ಬಿ. ಜಗನ್ನಾಥ ಚೌಟ ಬದಿಗುಡ್ಡೆ, ದಾರುಲ್ ಇರ್ಷಾದ್ ಎಜುಕೇಶನ್ ಸೆಂಟರ್ ಸ್ಥಾಪಕ ಹಾಜಿ ಎಂ. ಅಬ್ದುಲ್  ಹಮೀದ್, ಸ್ವಾಗತ ಸಮಿತಿ ಅಧ್ಯಕ್ಷ ಜೆ.ಪ್ರಹ್ಲಾದ್ ಶೆಟ್ಟಿ,  ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಕೊಂಬಿಲ‌ನಾರಾಯಣ ಶೆಟ್ಟಿ, ಸ್ವಾಗತ ಸಮಿತಿ  ಸಂಚಾಲಕ ಗಂಗಾಧರ ಆಳ್ವ, ಬಾಲಕೃಷ್ಣ ಆಳ್ವ, ಜತೆ ಕಾರ್ಯದರ್ಶಿ ‌ವಿಜಯ ಲಕ್ಷ್ಮೀ‌ ವಿ. ಶೆಟ್ಟಿ,  ಬಾಲವಿಕಾಸ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ‌  ಗ್ರೇಸ್ ಪಿ ಸಲ್ದಾನ, ತಾಲೂಕು ಕಸಾಪ ಅಧ್ಯಕ್ಷ ಮೋಹನ್ ರಾವ್ ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಸಿ. ಸ್ವಾಗತಿಸಿದರು. ತಾಲೂಕು ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ ವಂದಿಸಿದರು. ಮಹೇಶ್ ಕುಮಾರ್ ವಿ. ಕರ್ಕೇರಾ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News