ಪೇಜಾವರ ಶ್ರೀ- ಸಾಂಸ್ಕೃತಿಕ ರಂಗದ ನಂಟು ಅವಿನಾಭಾವ: ವಿಜಯ ಕುಮಾರ್ ಕೊಡಿಯಾಲ್‌ಬೈಲ್

Update: 2019-12-30 07:30 GMT

ಮಂಗಳೂರು, ಡಿ.30: ಪೇಜಾವರ ಶ್ರೀಗಳು ಸಾಂಸ್ಕೃತಿಕ ರಂಗದ ಜತೆಗೂ ಅವಿನಾಭಾವ ನಂಟು ಹೊಂದಿದ್ದರು ಎಂದು ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಸ್ಮರಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಇಂದು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪೇಜವಾರ ಶ್ರೀಗಳ ಸ್ಮರಣಾರ್ಥ ಆಯೋಜಿಸಲಾದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಅವರ ಜತೆ ತಮ್ಮ ಒಡನಾಟವನ್ನು ನೆನಪಿಸಿಕೊಂಡ ವಿಜಯ ಕುಮಾರ್, ಸಂತನಾಗಿದ್ದರೂ ವಿದೇಶಿ ಕಂಪನಿಗಳು ನಾಡಿಗೆ ಬರುವಾಗ ಅದರ ವಿರುದ್ಧ ಹೋರಾಟ ನಡೆಸಿದ ಅವರು ಕ್ರಾಂತಿಕಾರಿ ಹೆಜ್ಜೆಯ ಮೂಲಕ ಇತರ ಸ್ವಾಮೀಜಿಗಳಿಗೆ ಮಾದರಿಯಾಗಿದ್ದವರು. ಕೋಮು ಸಾಮರಸ್ಯದ ಜತೆಗೆ ಅಸ್ಪೃಶ್ಯತೆ ವಿರುದ್ಧದ ಅವರ ಪ್ರಯತ್ನಗಳು ಅವಿಸ್ಮರಣೀಯ ಎಂದರು.

ಹಿರಿಯ ಪತ್ರಕರ್ತ ಹರೀಶ್ ರೈ ಮಾತನಾಡಿ, ಸಂತರಾಗಿದ್ದ ಪೇಜಾವರ ಶ್ರೀ ಕೇವಲ ಮಠಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಸಮಾಜಮುಖಿ ಕಾರ್ಯಗಳ ಮೂಲಕ ಗಮನ ಸೆಳೆದವರು. ಅಸ್ಪಶ್ಯತೆ ನಿವಾರಣೆ ಬಗೆಗಿನ ಅವರ ಪ್ರಯತ್ನ ಹಾಗೂ ಸಾಮಾಜಿಕ ಕಳಕಳಿಯನ್ನು ಮುಂದುವರಿಸುವುದೇ ಅವರಿಗೆ ಸಮಾಜ ಸಲ್ಲಿುವ ಶ್ರದ್ಧಾಂಜಲಿ ಎಂದು ಹೇಳಿದರು.

ಪತ್ರಕರ್ತ ಪುಷ್ಪರಾಜ್ ಬಿ.ಎನ್. ಪ್ರತಿಕ್ರಿಯಿಸಿ, ಸ್ವಾಮೀಜಿಯಾಗಿದ್ದರೂ ಅವರಲ್ಲಿ ಜನಸಾಮಾನ್ಯನ ಮುಗ್ಧತೆ, ಉನ್ನತ ಮಟ್ಟದ ವಿಚಾರಧಾರೆ, ತನ್ನ ವಿರುದ್ಧವಾದ ಅಭಿಪ್ರಾಯ ಹೊಂದಿದವರನ್ನೂ ವಿರೋಧಿಸದೆ ಅವರನ್ನು ಗೌರವಿಸುವ ಮನೋಭಾವದಿಂದಲೇ ಅವರು ಸರ್ವಜನರ ಆದರಕ್ಕೆ ಪಾತ್ರರಾಗಿದ್ದವರು ಎಂದು ನುಡಿದರು. ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸು ಮೂಲಕ ಗೌರವ ಸಲ್ಲಿಸಲಾಯಿತು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News