ಚರಿತ್ರೆ ಜೊತೆಗೆ ಸಾಮಾನ್ಯರ ಸೆಲ್ಫಿ

Update: 2020-01-07 06:11 GMT

       ಅಗ್ರಹಾರ ಕೃಷ್ಣಮೂರ್ತಿ 

ಕೇಂದ್ರ ಸಾಹಿತ್ಯ ಅಕಾಡಮಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಅಗ್ರಹಾರ ಕೃಷ್ಣಮೂರ್ತಿ ಅವರು ತಮ್ಮ ‘ನೀರು ಮತ್ತು ಪ್ರೀತಿ’ ಕಾದಂಬರಿಗಾಗಿ ದೊಡ್ಡ ಸಂಖ್ಯೆಯ ಓದುಗರ ಪ್ರೀತಿಯನ್ನು ತನ್ನದಾಗಿಸಿಕೊಂಡವರು. ಈ ಕಾದಂಬರಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿದೆ. ಕಾವ್ಯ, ಸಂಸ್ಕೃತಿ ಚಿಂತನೆಯ ಮೂಲಕ ಬೇರೆ ಬೇರೆ ಪ್ರಕಾರದ ಓದುಗ ವಲಯವನ್ನು ತಲುಪಿದವರು.

ಇಲ್ಲಿ ನೆಹರೂ, ಶಾಂತವೇರಿಯವರ ಹೆಸರು ತೆಗೆದು ಹಾಕಿದರೆ ಚರಿತ್ರೆ ಕಣ್ಮರೆಯಾಗುತ್ತದೆ. ಈ ಘಟನಾವಳಿಗಳು ನಡೆದ ಇಸವಿಗಳನ್ನು ಹುಡುಕಿ ತೆಗೆದು ದಾಖಲೆ ಮಾಡಿದರೆ ಸಾಮಾನ್ಯ ಮನುಷ್ಯರು ಚರಿತ್ರೆಗೆ ಸೇರುವ ಪ್ರಕ್ರಿಯೆ ನಡೆಯುತ್ತದೆ. ಇಲ್ಲದೆ ಇದ್ದರೆ ನನ್ನ ಬಂಧುವಿನ ಮೊಮ್ಮಗ ಮುಂದಿನ ವಾರ ಓರ್ವ ಅಂತರ್ ಧರ್ಮೀಯ ವಧುವಿನ ಕೈ ಹಿಡಿಯುತ್ತಿರುವ ಹೊತ್ತಿನಲ್ಲಿ ತನ್ನ ತಾತನ ಬಗ್ಗೆ ಎಂಥ ಚರಿತ್ರೆಯನ್ನು ಹೇಳಬೇಕು? ಸಾಮಾನ್ಯರು ಮರೆತು ಹೋಗುತ್ತಿರುವ ಚರಿತ್ರೆಗೆ ಸೇರುತ್ತಾರೆಂಬುವುದು ಚರಿತ್ರೆಯ ದುರಂತ.

ಸ್ವಾತಂತ್ರ್ಯ ಪೂರ್ವ :

ಅಣ್ಣ (ತಂದೆಯವರನ್ನು ನಾವು ಕರೆಯುತ್ತಿದ್ದುದು ಹಾಗೇ) ಅಮ್ಮ ಇಬ್ಬರೂ ಶಾಲಾಧ್ಯಕ್ಷರಾಗಿದ್ದರು. ಹಾಗಾಗಿ ಬೇರೆ ಬೇರೆ ಊರುಗಳಲ್ಲಿ ನಮ್ಮ ವಿದ್ಯಾಭ್ಯಾಸ ಸಾಗುತ್ತಿತ್ತು. ಬೇಸಿಗೆ, ದಸರಾ, ಕ್ರಿಸ್‌ಮಸ್ ರಜಾದಿನಗಳಲ್ಲಿ ಹೆಚ್ಚು ಕಡಿಮೆ ತಪ್ಪದೇ ನಮ್ಮ ಊರಿಗೆ ಹೋಗುತ್ತಿದ್ದೆ. ಹಾಗೆ ಒಮ್ಮೆ ಊರಿಗೆ ಹೋಗಿದ್ದಾಗ ಮನೆಗೆ ಹೋಗುವ ದಾರಿಯಲ್ಲಿ ನನ್ನ ಜೊತೆಗಿದ್ದವರ ಬಳಿ ನಮ್ಮ ಗ್ರಾಮ ನಿವಾಸಿಯೊಬ್ಬರು ‘ಇವರು ಯಾರ ಮಕ್ಕಳು’ ಎಂದು ಕೇಳಿದರು. ಉತ್ತರ ಕೇಳಿದೇಟಿಗೆ ‘ಓ ಮಾರಾಜ್ರನ್ನ ಅಡ್ಡ ಹಾಕಿದ್ರಲ್ಲ ಅವ್ರ ಮಕ್ಕಳ್ರಾ?’ ಎಂದು ಸ್ವಲ್ಪ ಆಶ್ಚರ್ಯದಿಂದ ನನ್ನನ್ನು ದಿಟ್ಟಿಸಿ ನೋಡಿದ್ದರು. ಬಾಲಕನಾಗಿದ್ದ ನನಗೆ ಅದು ಅಲ್ಲಿಗೇ ಮರೆತುಹೋಯಿತು.

ನಾವು ಕುಣಿಗಲ್‌ನಲ್ಲಿದ್ದಾಗ ಒಮ್ಮೆ ಜಯಚಾಮರಾಜ ಒಡೆಯರು ಯಡೆಯೂರಿಗೆ ಸಿದ್ಧಲಿಂಗೇಶ್ವರ ಸ್ವಾಮಿಯ ದರ್ಶನಕ್ಕೆ ಬರುತ್ತಾರೆಂಬುದು ಸುದ್ದಿಯಾಯಿತು. ಸ್ವಾತಂತ್ರಾ ನಂತರ ರಾಜಶಾಹಿ ಪತನಗೊಂಡಿದ್ದರೂ ಮೈಸೂರು ದೊರೆ ಚಾಮರಾಜ ಒಡೆಯರ ಬಗ್ಗೆ ಜನರಲ್ಲಿ ಅಭಿಮಾನ ಪ್ರೀತಿ ಅಪಾರವಾಗಿತ್ತು. ಮಹಾರಾಜರನ್ನು ನೋಡುವ ಸಲುವಾಗಿ ಗೆಳೆಯರು ಸೈಕಲ್ಲಿನಲ್ಲಿ ಯಡೆಯೂರಿಗೆ ಹೋಗಿಬರುವ ಪ್ಲಾನ್ ಮಾಡಿದ್ದರು. ನಾನೂ ‘ಅಣ್ಣ’ನ ಬಳಿ ಕೇಳಿದೆ. ಅವರೇನೂ ಉತ್ಸಾಹ ತೋರಲಿಲ್ಲ. ಆದರೆ ಮಾತಿನ ನಡುವೆ, ‘ಅವರು ನನ್ನ ಹೆಗಲಮೇಲೆ ಕೈ ಹಾಕಿದ್ದಾರೆ’, ಅಂದರು ಸ್ವಲ್ಪ ಜಂಭದಲ್ಲೇ! ನಾನು ಯಡೆಯೂರಿಗೆ ಹೋಗಲಿಲ್ಲ ಬಿಡಿ. ಅಣ್ಣ ಹೇಳಿದ ಮಾತಿಗೆ ನನ್ನಲ್ಲಿ ಯಾವ ಕುತೂಹಲವೂ ಹುಟ್ಟುವ ವಯಸ್ಸು ನನ್ನದಾಗಿರಲಿಲ್ಲ. ಆ ಸಂಗತಿಯೂ ಮರೆತುಹೋಯಿತು.

‘ಅಣ್ಣ’ನ ಹಿರಿಯ ಸೋದರ ನನ್ನ ದೊಡ್ಡಪ್ಪನವರಿಗೆ ನನ್ನ ಬಗ್ಗೆ ಅಪಾರವಾದ ಪ್ರೀತಿ, ಊರಲ್ಲೇ ಇರುತ್ತಿದ್ದ ಅವರು ನಾನು ಯಾವಾಗ ಊರಿಗೆ ಹೋದರೂ ನನ್ನನ್ನು ಸದಾ ಹೊಲ, ಗದ್ದೆ, ತೋಟಗಳಿಗೆ, ಕೊರಟಗೆರೆಯ ಮಾರ್ಕೆಟ್ಟಿಗೆ, ಬೇರೆ ಊರುಗಳಲ್ಲಿದ್ದ ನೆಂಟರಿಷ್ಟರ ಮನೆ ಗಳಿಗೆ ಕರೆದೊಯ್ಯುತ್ತಿದ್ದರು. ನನಗಿಂತ ಎಷ್ಟೋ ವರ್ಷ ಹಿರಿಯರಾಗಿದ್ದ ಅವರು ನನ್ನನ್ನು ಚಿಕ್ಕ ಹುಡುಗನೆಂದು ಅದಿಷ್ಟೂ ಅಸಡ್ಡೆ ಮಾಡದೆ ಸಮವಯಸ್ಕನ ರೀತಿಯಲ್ಲೇ ನಡೆಸಿಕೊಳ್ಳುತ್ತಿದ್ದುದು ನನ್ನಲ್ಲಿ ಈಗಲೂ ಧನ್ಯಭಾವವನ್ನೂ ಅಚ್ಚರಿಯನ್ನೂ ಉಂಟು ಮಾಡುತ್ತದೆ. ಮುಂದೆ ನಾನು ಕಾಲೇಜು ಮೆಟ್ಟಲು ಹತ್ತಿದ ನಂತರವೂ ಅವರ ಜೊತೆಗಿನ ಒಡನಾಟ, ಆಗಾಗ ಭೇಟಿಯಾಗುವುದು ಮುಂದುವರಿದಿತ್ತು. ಚಾಮರಾಜ ಒಡೆಯರು ವಜ್ರದ ಹರಳನ್ನು ಅರೆದುಕೊಂಡು ಕುಡಿದು ಆತ್ಮಹತ್ಯೆ ಮಾಡಿ ಕೊಂಡರೆಂಬ ಸುದ್ದಿ 1974ರಲ್ಲಿ ಒಂದು ಮಧ್ಯಾಹ್ನ ಗಾಳಿಯಲ್ಲಿ ಹರಿದು ಬಂದಾಗ ನಾನು ಗೆಳೆಯರ ಜೊತೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಲೈಬ್ರೆರಿಯ ಬಳಿ ಓಡಾಡುತ್ತಿದ್ದೆ. ಆಸ್ಪತ್ರೆಯಲ್ಲಿ ಮಲಗಿದ್ದ ಮಹಾರಾಜರಿಗೆ ವಜ್ರದ ಹರಳನ್ನು ಅರೆಯಲು ಬೇಕಾದ ವಸ್ತುಗಳು ಹೇಗೆ ಸಿಕ್ಕವು, ಆಸ್ಪತ್ರೆಯ ಸಿಬ್ಬಂದಿ ಏನು ಮಾಡುತ್ತಿದ್ದರು ಇತ್ಯಾದಿ ಆಲೋಚನೆಗಳು ಆಗ ನನ್ನ ತಲೆಗೆ ಬಂದದ್ದುಂಟು. ಅದೊಂದು ಆ ಕಾಲದ ವಾಟ್ಸ್ ಆ್ಯಪ್ ವೈರಲ್! ನಿಜವೋ ಸುಳ್ಳೋ ತಿಳಿಯದ ಸೋಶಿಯಲ್ ಮೀಡಿಯಾ ಸುದ್ದಿ!

ದೊಡ್ಡಪ್ಪನವರನ್ನೂ ನಾವೆಲ್ಲ ದೊಡ್ಡಯ್ಯ ಎನ್ನುತ್ತಿದ್ದೆವು. ಒಮ್ಮೆ ನಮ್ಮ ಕೃಷಿ ಆಧಾರಿತ ಕುಟುಂಬದ ಬಡತನ, ತಮ್ಮ ಇಬ್ಬರು ತಮ್ಮಂದಿರ ವಿದ್ಯಾಭ್ಯಾಸ. ಮೂವರು ತಂಗಿಯರ ವಿವಾಹದ ಜವಾಬ್ದಾರಿ ಇತ್ಯಾದಿ ಮಾತಿನ ನಡುವೆ ಅವರು ದೊಡ್ಡದಾಗಿ ಬಾಯಿತೆರೆದು ನಗುತ್ತಾ, ‘ನಿಮ್ಮಪ್ಪ ಒಂದು ಸಾರಿ ಮಹಾರಾಜರನ್ನೇ ಅಡ್ಡ ಹಾಕಿಬಿಟ್ಟಿದ್ದ ಕಣೋ’, ಅಂದರು! ಆ ಕ್ಷಣ ಮಹಾರಾಜರು ನನ್ನ ಕೈಗೆ ಸಿಕ್ಕಿಬಿದ್ದರು!! ಈ ಹಿಂದೆ ಮಹಾರಾಜರ ಪ್ರಸ್ತಾಪವಾದ ಎರಡೂ ಸಂದರ್ಭಗಳಲ್ಲಿ ನಾನಿನ್ನೂ ಬಾಲಕನಾಗಿದ್ದೆ. ಈಗ ಡಿಗ್ರಿ ಮುಗಿಸಿದ್ದ ತರುಣ. ನನ್ನ ಕಿವಿ ನೆಟ್ಟಗಾದವು. ದೊಡ್ಡಯ್ಯ ವಿವರಿಸಿದ್ದರು.

‘ಅಣ್ಣ’ ಜಟ್ಟಿ ಅಗ್ರಹಾರದಿಂದ ಕೊರಟಗೆರೆಗೆ ಪ್ರತಿ ದಿನ ಐದಾರು ಕಿಲೋಮೀಟರ್ ನಡೆದೇ ಹೋಗಿ ತಮ್ಮ ಹೈಸ್ಕೂಲ್ ಕಲಿಯುತ್ತಿದ್ದರು. ನಮ್ಮೂರು ತುಮಕೂರಿನಿಂದ ಮಧುಗಿರಿಗೆ ಹೋಗುವ ರಸ್ತೆಯಲ್ಲಿದೆ. ಚಾಮರಾಜ ಒಡೆಯರು ನಮ್ಮ ಊರಿನ ಮೇಲೆ ಮಧುಗಿರಿಗೆ ಹೋಗುತ್ತಾರೆಂಬ ಸುದ್ದಿ ತಿಳಿದು ‘ಅಣ್ಣ’ ಊರಿಗೆ ಹತ್ತಿರವಿದ್ದ ಸೇತುವೆಯ ಬಳಿ ಕಾದಿದ್ದಾರೆ. ಸ್ವಾತಂತ್ರಪೂರ್ವದ ಆ ದಿನಗಳಲ್ಲಿ ಮಹಾರಾಜರೆಂದರೆ ನಿಜವಾಗಿಯೂ ಮಹಾರಾಜರು! ‘ಅಣ್ಣ’ ಸೇತುವೆಯ ಮಧ್ಯೆ ನಿಂತು ಕಾರನ್ನು ತಡೆದಿದ್ದಾರೆ. ಸೇತುವೆ ಭಾಗದ ರಸ್ತೆ ಕಿರಿದಾಗಿದ್ದು ಕಾರು ನಿಲ್ಲಲೇಬೇಕು. ನಿಂತಿದೆ. ತಕ್ಷಣ ಅಣ್ಣ ತಾವು ಬರೆದಿಟ್ಟುಕೊಂಡಿದ್ದ ಒಂದು ಕಾಗದವನ್ನು ಕಿಟಕಿಯ ಬಳಿ ತಲೆ ಹಾಕಿ ಮಹಾರಾಜರಿಗೆ ಕೊಟ್ಟಿದ್ದಾರೆ. ಮಹಾರಾಜರು ತಮ್ಮ ಕೈಯನ್ನು ಹೊರಗೆ ಹಾಕಿ ಅಣ್ಣನ ಭುಜವನ್ನು ತಡವಿದ್ದಾರೆ. ಅಷ್ಟರಲ್ಲಿ ಹಿಂದೆಯೇ ಬರುತ್ತಿದ್ದ ಉಸ್ತುವಾರಿ ಕಾರು ನಿಂತಿದೆ. ಆ ಕಾರಿನಿಂದ ಒಬ್ಬಿಬ್ಬರು ಡವಾಲಿಗಳು ಇಳಿದು ಇವರತ್ತ ಬಂದಿದ್ದಾರೆ. ಅಣ್ಣ ಸೇತುವೆಯ ಬಳಿಯ ಕಣಿವೆಯಲ್ಲಿ ಇಳಿದು ಓಡಿ ಭಟರಿಂದ ತಪ್ಪಿಸಿಕೊಂಡಿದ್ದಾರೆ! ಆ ದಿನವಿಡೀ ಅಣ್ಣ ಅಲ್ಲಿನ ಗುಡ್ಡದಲ್ಲಿಯೇ ಕುಳಿತು ಕತ್ತಲಾದ ಮೇಲೆ ಮನೆಗೆ ಬಂದರಂತೆ. ಯಾರಿಗೂ ಏನೂ ಹೇಳದೆ ಸುಮ್ಮನಿದ್ದು ಬಿಟ್ಟರಂತೆ. ಮನೆಯಲ್ಲೂ ಊರಲ್ಲೂ ಯಾರಿಗೂ ಏನೂ ಗೊತ್ತಿಲ್ಲ.

ಆನಂತರ ಒಂದು ದಿನ ‘ಅಣ್ಣ’ ಶಾಲೆ ಯಿಂದ ಮನೆಗೆ ಬಂದವರು ನಮ್ಮ ದೊಡ್ಡಯ್ಯನವರ ಬಳಿ ‘ಮನೆಯಲ್ಲಿ ಯಾರಾದರೂ ದೊಡ್ಡವರನ್ನು ಕರೆದುಕೊಂಡು ನಾಳೆ ಸ್ಕೂಲಿಗೆ ಬರಬೇಕು ಅಂದಿದ್ದಾರೆ ಹೆಡ್ಮಾಸ್ಟರು’, ಅಂದಿದ್ದಾರೆ. ಯಾಕಂತೆ ಎನ್ನುವ ಪ್ರಶ್ನೆಗೆ ಗಾಬರಿ ಹೆದರಿಕೆಯಲ್ಲೇ ಇದ್ದ ಅಣ್ಣನಿಂದ ಗೊತ್ತಿಲ್ಲವೆಂಬ ಉತ್ತರ.

ತನಗೆ ಯಾವ ಶಿಕ್ಷೆ ಕಾದಿದೆಯೋ, ಸ್ಕೂಲಿನಿಂದಲೇ ತೆಗೆಯುತ್ತಾರೋ ಎಂಬ ಚಿಂತೆಯಲ್ಲಿದ್ದ ‘ಅಣ್ಣ’ನನ್ನು ಅವರಣ್ಣ ನಮ್ಮ ದೊಡ್ಡಯ್ಯ ಕರೆದುಕೊಂಡು ಶಾಲೆಗೆ ಹೋಗಿದ್ದಾರೆ. ಅಲ್ಲಿ ಹೆಡ್‌ಮಾಸ್ಟರು ತಮ್ಮ ತುಂಬಾ ಧೈರ್ಯವಂತ. ಮಹಾರಾಜರಿಗೇ ಪತ್ರ ಬರೆದು ಬಿಟ್ಟಿದ್ದಾನೆ ಅಂದರಂತೆ. ‘ನೋಡಿ ಅರಮನೆಯಿಂದ ಇವನ ಹೆಸರಿಗೆ ದುಡ್ಡು ಬಂದಿದೆ. ಇಷ್ಟೊಂದು ಹಣವನ್ನು ಹುಡುಗನ ಕೈಯಲ್ಲಿ ಯಾಕೆ ಕೊಟ್ಟು ಕಳುಹಿಸಬೇಕೂಂತ ನಿಮ್ಮನ್ನ ಬರಹೇಳಿದೆ’ ಎಂದು ಹಣವನ್ನು ಕೊಟ್ಟರಂತೆ. ಶಾಲೆ ಮುಗಿಯುವವರೆಗೆ ಹೊರಗೇ ಕಾದಿದ್ದು ತಮ್ಮ ಬಂದ ಮೇಲೆ ವಿಚಾರಣೆ ಮಾಡಿದ್ದಾರೆ. ಪರೀಕ್ಷೆ ಫೀಸ್ ಕಟ್ಟಿಲ್ಲ ಇನ್ನು, ನಿಮ್ಮ ಹತ್ರವೂ ಇಲ್ಲ. ಕಟ್ಟದೇ ಇದ್ದರೆ ಪರೀಕ್ಷೆಗೂ ಕೂರಿಸಲ್ಲ ಅಂದು. ಈ ವಿಷಯ ಮಹಾರಾಜರಿಗೆ ಬರೆದುಕೊಟ್ಟ್ಟೆ ಎಂದು ತಮ್ಮ ಸೇತುವೆ ಬಳಿಯ ಸಾಹಸವನ್ನು ನಿರೂಪಿಸಿದ್ದಾರೆ. ದೊಡ್ಡಯ್ಯನವರಿಗೆ ಕೈಯಲ್ಲಿದ್ದ ಹಣ, ಮುಂದಿದ್ದ ತಮ್ಮ ಎಲ್ಲೋ ಇದ್ದ ಮಹಾರಾಜರು ಎಲ್ಲ ಅಯೋಮಯವಾಗಿ ಕಂಡಿದ್ದಿರಬೇಕು. ಅಂದೇ ಪರೀಕ್ಷೆ ಶುಲ್ಕ ತುಂಬಿ, ತಮ್ಮನಿಗೂ, ಆಗ ತಾನೇ ಪುಟ್ಟ ಮಗುವಾಗಿದ್ದ ತಮ್ಮ ಮಗನಿಗೂ ಹೊಸ ಬಟ್ಟೆ ಹೊಲಿಸಿಕೊಂಡು, ಮನೆಗೆ ಬೇಕಾದ ಕೆಲವು ಸಣ್ಣಪುಟ್ಟ ಸಾಮಾನುಗಳನ್ನು ಕೊಂಡು ಮನೆಗೆ ಬಂದಾಗ ಅವರ ಕೈಯಲ್ಲಿ ಇನ್ನೂ ಕೆಲವು ರೂಪಾಯಿಗಳು ಉಳಿದಿದ್ದುವಂತೆ!!

ಮಹಾರಾಜ ಜಯಚಾಮರಾಜ ಒಡೆಯರ್ ಅಣ್ಣ ಕೊಟ್ಟ ಆ ಪತ್ರವನ್ನು ತಮ್ಮ ಕಾರಿನಲ್ಲೇ ಓದಿರುವ ಸಂಭವವಿರುತ್ತದೆ. ಅದನ್ನು ತಮ್ಮ ಸಹಾಯಕರಿಗೆ ಕೊಟ್ಟರೋ, ತಮ್ಮ ಕಿಸೆಯಲ್ಲೇ ಇಟ್ಟುಕೊಂಡರೋ ಅಂತೂ ಮೈಸೂರಿಗೆ ಹೋದ ತಕ್ಷಣ ‘ಅಣ್ಣ’ ತಾವು ಯಾವ ಶಾಲೆಯಲ್ಲಿ ಕಲಿಯುತ್ತಿದ್ದರೋ ಅದನ್ನು ಪತ್ರದಲ್ಲಿ ತಿಳಿಸಿದ್ದರು. ಅಲ್ಲಿಗೆ ಹಣ ಕಳಿಸುವ ಏರ್ಪಾಟು ಮಾಡಿದ್ದಾರೆ. ರಾಜಮಹಾ ರಾಜರು ಎಷ್ಟೋ ಸಂದರ್ಭಗಳಲ್ಲಿ ಹೀಗೆ ನಡೆದುಕೊಳ್ಳುವುದುಂಟು. ಅವರಿಗೆ ಅದು ಘನವಾದ ಸಂಗತಿಯಲ್ಲ. ಸಾಮಾನ್ಯ ಮನುಷ್ಯನೊಬ್ಬನಿಗೆ, ಅವನ ಕುಟುಂಬಕ್ಕೆ, ಅವನ ಊರಿಗೆ ಅದೊಂದು ಐತಿಹಾಸಿಕ ಸಂಗತಿ. ಅಂಥವು ಚರಿತ್ರೆ ಹುಟ್ಟುವ ಕ್ಷಣಗಳು.

ಇದುವರೆಗಿನ ಬರಹದಲ್ಲಿ ಮಹಾರಾಜರ ಹೆಸರನ್ನು ತೆಗೆದುಬಿಟ್ಟರೆ ಚರಿತ್ರೆಯ ಬಣ್ಣ ಮರೆಯಾಗುತ್ತೆ! ಆದರೆ ಚರಿತ್ರೆಗೆ ಬೇಕಾದ್ದು ಇಸವಿಗಳ ದಾಖಲೆ! ಇಸವಿ ಗಳ ಹಾಜರಿಯಿದ್ದರೆ ಅದು ರಾಜಮಹಾರಾಜರ ಚರಿತ್ರೆಯಾಗಿ ಬಿಡುತ್ತದೆ! ಇಸವಿಗಳ ಗೈರುಹಾಜರಿ ಸಾಮಾನ್ಯರ, ವೌಖಿಕ, ಜಾನಪದ, ಸಬಾಲ್ಟ್ರನ್ ಇತ್ಯಾದಿ ಆಗಿಬಿಡುತ್ತದೆ. ಅನೇಕ ಬಾರಿ ಈ ಘಟನೆಯನ್ನು ಬರೆಯಬೇಕೆಂದು ಯೋಚಿಸಿದ್ದರೂ ನಾನು ಬರೆದಿರಲಿಲ್ಲ. ಈಗ 2019ರ ಇಸವಿಯನ್ನು ಜಯಚಾಮರಾಜ ಒಡೆಯರ ಜನ್ಮಶತಾಬ್ಧಿಯನ್ನಾಗಿ ಆಚರಿಸುವ ಹೊತ್ತಿಗೆ ಮತ್ತೆ ನೆನಪಾಯಿತು. ಇದು ಸ್ವಾತಂತ್ರ ಪೂರ್ವದ ರಾಜಮಹಾರಾಜರುಗಳ ಕಾಲದ ಒಂದು ಸಣ್ಣ ಘಟನೆ. ರಾಜನೊಬ್ಬ ಉದಾರಿಯೂ, ಉದಾತ್ತನೂ ಆಗಿ ನಡೆದುಕೊಂಡಿರುವ ಘಟನೆಯೊಂದನ್ನು ಹೇಳಿ ನಾನು ರಾಜಶಾಹಿಯ ಪರವಾಗಿ ವಾದಿಸುತ್ತಿಲ್ಲ. ಸ್ವಾತಂತ್ರಾ ನಂತರ ಭಾರತದ ಪ್ರಜಾತಂತ್ರ ಗಣರಾಜ್ಯದೊಳಕ್ಕೆ ವಿಲೀನಗೊಳ್ಳಲು ತಮ್ಮ ರಾಜಶಾಹಿಯನ್ನು ತ್ಯಜಿಸಿ ಒಪ್ಪಿಗೆ ಸೂಚಿಸಿದವರಲ್ಲಿ ಜಯಚಾಮರಾಜ ಒಡೆಯರು ಮೊದಲಿಗರು ಎಂಬ ಹೆಗ್ಗಳಿಕೆಯೂ ಚರಿತ್ರೆಯ ಅಂಗವಾಗಿಯೇ ಇರುವುದನ್ನು ನಾವು ಮರೆಯಬಾರದು.

ಸ್ವಾತಂತ್ರ್ಯೋತರ

ಬೆಂಗಳೂರಿನಲ್ಲಿ ನನ್ನ ಕಚೇರಿಗೆ 1992-93ರ ಸುಮಾರಲ್ಲಿ ಓರ್ವ ಹಿರಿಯರು ಬಂದರು. ಅವರು ನನ್ನ ಬಂಧುಗಳಾಗಿದ್ದರು. ಅವರನ್ನು ನಾನು ಆಗಾಗ ನಮ್ಮ ಕೌಟುಂಬಿಕ ಸಮಾರಂಭಗಳಲ್ಲಿ ಕಂಡಿದ್ದೆ. ಅಲ್ಲದೆ 1979-80ರ ಕಾಲದಲ್ಲಿ ನಾನು ಪ್ರಜಾವಾಣಿ ಪತ್ರಿಕೆಯಲ್ಲಿ ಪುಸ್ತಕ ವಿಮರ್ಶೆ ಬರೆಯುತ್ತಿದ್ದ ದಿನಗಳಲ್ಲಿ, ನನ್ನ ಲೇಖನಗಳನ್ನು ಪತ್ರಿಕೆ ಕಚೇರಿಗೆ ತಲುಪಿಸಲು ಹೋಗುತ್ತಿದ್ದ ಈ ನಮ್ಮ ಬಂಧುಗಳು ಅಲ್ಲಿ ಕಾವಲು ನೌಕರರಾಗಿದ್ದುದನ್ನು ಕಂಡಿದ್ದೆ.

ಸ್ವಲ್ಪ ಅವರ ವರ್ಣನೆ ನೀಡುವುದು ಅಗತ್ಯವೆನಿಸುತ್ತಿದೆ. ಅವರ ತಲೆಯ ಮೇಲೆ ಸದಾ ಒಂದು ಗಾಂಧಿ ಟೊಪ್ಪಿಗೆ, ಹಣೆಯಲ್ಲಿ ಒಂದೆಳೆಯ ಕೆಂಪುನಾಮ, ಖಾದಿ ಮೇಲಂಗಿ, ಕಚ್ಚೆಪಂಚೆ ಅಥವಾ ಖಾದಿ ಷರಾಯಿ, ಯಾವಾಗಲೂ ಸೈಕಲಿನಲ್ಲಿ ಸವಾರಿ, ಕಚ್ಚೆಪಂಚೆ ಅಥವಾ ಷರಾಯಿಯ ತುದಿ ಸೈಕಲ್ ಚೈನಿಗೆ ಸಿಕ್ಕಿಕೊಳ್ಳದಂತೆ ತಡೆಯಲು ಕಾಲಿಗೊಂದು ರಿಂಗ್, ಸೈಕಲ್ಲಿನ ಹ್ಯಾಂಡಲ್ ಮೇಲೆ ಭಾರತದ ತ್ರಿವರ್ಣ ಧ್ವಜ ಅದು ಖಾದಿ ಬಟ್ಟೆಯದ್ದು, ಅವರ ಕಾಲದಲ್ಲಿ ಪ್ಲಾಸ್ಟಿಕ್ ಧ್ವಜಗಳಿರಲಿಲ್ಲ. ಗೌರವರ್ಣದ ಅವರದು ಸದಾ ಹಸನ್ಮುಖ. ಅವರು ಧರಿಸುತ್ತಿದ್ದ ಖಾದಿ ಮೇಲಂಗಿಯ ಹೊಲಿಗೆಯ ವಿನ್ಯಾಸವೂ ವಿಭಿನ್ನವಾಗಿರುತ್ತಿತ್ತು. ಎದೆಯ ನಡುವಿನ ಗುಂಡಿಗಳ ಪಟ್ಟಿ ಮೇಲೇರಿದಂತೆ ಕತ್ತಿನ ಪಟ್ಟಿಯ ಬಳಿ ಬಲಕ್ಕೆ ಹೊರಳಿ ಇಡೀ ಬಲಭುಜದ ಮೇಲೆ ಗುಂಡಿಗಳ ಸಾಲು ಕಾಣುತ್ತಿತ್ತು. ಸಂಗೀತ ಕಲಾವಿದರ ದಿರಿಸನ್ನು ಹೋಲುವಂಥದ್ದು ಅದು.

ಆ ದಿನ ಕಚೇರಿಗೆ ಬಂದಾಗ ಅವರು ತಮ್ಮ ಜೊತೆ ಒಂದು ಕಡತವನ್ನು ತಂದಿದ್ದರು. ಕುಶಲೋಪರಿಯ ನಂತರ ತಮ್ಮ ಕಡತವನ್ನು ಬಿಚ್ಚಿ ಅದರಲ್ಲಿದ್ದ ನೂರೆಂಟು ಅರ್ಜಿಯ ಪ್ರತಿಗಳನ್ನು, ದಿನಪತ್ರಿಕೆಗಳ ವರದಿಗಳನ್ನು ಕತ್ತರಿಸಿ ಅಂಟಿಸಿದ್ದ ಹಾಳೆಗಳನ್ನು ತನಗೆ ತೋರಿಸಿದ್ದರು. ಅಂದು ನಾನು ಆ ವರದಿಗಳ ದಿನಾಂಕ ಇಸವಿಗಳನ್ನು ಗುರುತು ಮಾಡಿಕೊಳ್ಳಬೇಕಿತ್ತು. ಹಾಗೆ ಮಾಡಿಕೊಳ್ಳದೇ ಹೋದದ್ದಕ್ಕೆ ನನ್ನ ಬಗ್ಗೆ ಸ್ವಲ್ಪ ಅಸಮಾಧಾನವಾಗುತ್ತಿದೆ.

ನಮ್ಮ ದೇಶಕ್ಕೆ ಸ್ವಾತಂತ್ರ ಬಂದ ಹೊಸತಿನಲ್ಲಿ ಎಲ್ಲೆಡೆ ಉತ್ಸಾಹ ಚೈತನ್ಯ ತುಂಬಿತ್ತು. ಎಲ್ಲ ಕ್ಷೇತ್ರದ ಎಲ್ಲ ನೌಕರರೂ ಇನ್ನು ಮುಂದೆ ತಮ್ಮ ಉದ್ಧಾರ ಅತಿವೇಗದಲ್ಲಿ ಆಗುತ್ತದೆ ಎಂದು ಭಾವಿಸಿದ್ದ ದಿನಗಳು ಅವು. ಬಹುಶಃ ಐವತ್ತರ ದಶಕದ ಕೊನೆಯಲ್ಲಿ ಅಥವಾ ಸ್ವಾತಂತ್ರಾ ನಂತರ ಮೊದಲ ಬಾರಿಗೆ ಪ್ರಧಾನಿ ನೆಹರೂ ಬೆಂಗಳೂರಿಗೆ ಬರುವ ಕಾರ್ಯಕ್ರಮ ಗೊತ್ತಾಗಿತ್ತು. ಎಚ್‌ಎಎಲ್ ವಿಮಾನ ನಿಲ್ದಾಣದಿಂದ ನೆಹರೂ ಮಹಾತ್ಮಾಗಾಂಧಿ ಮಾರ್ಗವಾಗಿ ತೆರೆದ ಜೀಪಿನಲ್ಲಿ ಬರುತ್ತಾರೆಂಬ ಸುದ್ದಿ ಸಂಬಂಧಿಸಿದವರಿಗೆ ತಿಳಿದಿತ್ತು. ಅದರಲ್ಲೂ ಮುಖ್ಯವಾಗಿ ಪೊಲೀಸ್ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿತ್ತು. ಕೆಲವು ಪೊಲೀಸ್ ಅಧಿಕಾರಿಗಳ ತಲೆಯಲ್ಲಿ ಒಂದು ದಿವ್ಯವಾದ ಆಲೋಚನೆ ಹುಟ್ಟಿಕೊಂಡಿರಬೇಕು. ಆಗಿನ ಕಾಲಕ್ಕೆ ಪೊಲೀಸ್ ಇಲಾಖೆಯ ನೌಕರರಿಗೆ ತುಂಬಾ ಕಡಿಮೆ ಸಂಬಳ ದೊರೆಯುತ್ತಿತ್ತಂತೆ. ಹೆಚ್ಚು ಕಡಿಮೆ ಬ್ರಿಟಿಷ್ ಆಡಳಿತದ ಕಾಲದ್ದೇ ಸಂಬಳ ಸಾರಿಗೆ ಪದ್ಧತಿ. ಜೊತೆಗೆ ಸ್ವಾತಂತ್ರ ಪಡೆದ ಭಾರತ ಸರಕಾರವಿನ್ನು ವೇತನ ಪರಿಷ್ಕಾರಗಳನ್ನು ಮಾಡಿರಲಿಲ್ಲ. ಅಂತೂ ಈ ಕೆಲವು ಅಧಿಕಾರಿಗಳು ಪ್ರಧಾನಿ ಬೆಂಗಳೂರಿಗೆ ಬರುತ್ತಿರುವ ಅವಕಾಶದ ಸದುಪಯೋಗ ಪಡೆಯುವ ಸಲುವಾಗಿ ಅವರಿಗೊಂದು ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಬೇಕೆಂದು ತೀರ್ಮಾನಿಸಿತು. ಇದೊಂದು ಅನೌಪಚಾರಿಕ ಗೌಪ್ಯ ಯೋಜನೆ. ಇಲಾಖೆಯ ಸಿಬ್ಬಂದಿಯ ಕಷ್ಟ ಕಾರ್ಪಣ್ಯಗಳು, ಕಡಿಮೆ ವೇತನ, ಇತ್ಯಾದಿ ಸುಖದುಃಖಗಳ ಮನವಿ ಪತ್ರದಲ್ಲಿ ಇದನ್ನೆಲ್ಲ ನಿರೂಪಿಸಿ ಸಿದ್ಧಗೊಳಿಸಿಯೇಬಿಟ್ಟರು. ಇದನ್ನು ಪ್ರಧಾನಿಯವರಿಗೆ ಯಾರು ಹೇಗೆ ಕೊಡುವುದು? ಮಹಾತ್ಮಾ ಗಾಂಧಿ ರಸ್ತೆಯಲ್ಲೇ ಬಂದೋಬಸ್ತ್ ಉಸ್ತುವಾರಿ ನಿರ್ವಹಿಸುವ ಸಿಬ್ಬಂದಿಯೊಬ್ಬರು ಅದನ್ನು ಪ್ರಧಾನಿಗೆ ಕೊಡುವಂತೆ ಯೋಜನೆ ಹಾಕಿದರು.

ಅಂದಿನ ದಿನಗಳಲ್ಲಿ ಈ ನಮ್ಮ ಬಂಧು ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿದ್ದರು. ಧೈರ್ಯವಂತ ತರುಣ. ಮನವಿ ಕೊಡುವುದಕ್ಕೆ ಯಾರಾದರೊಬ್ಬರನ್ನು ಹುಡುಕ ಬೇಕಲ್ಲ. ಅಧಿಕಾರಿಗಳು ಈ ನಮ್ಮ ತರುಣ ಬಂಧುವನ್ನು ಆಯ್ಕೆ ಮಾಡಿದರು. ಪ್ರಧಾನಿ ಎಂ.ಜಿ. ರೋಡಿನಲ್ಲಿ ಅತ್ತಿತ್ತ ನೆರೆದ ಜನರೆಡೆಗೆ ಕೈಬೀಸುತ್ತಾ ನಿಧಾನವಾಗಿ ಚಲಿಸುವ ಜೀಪಿನಲ್ಲಿರುತ್ತಾರೆ. ಸಮಯ ನೋಡಿ ಮನವಿಯನ್ನು ಅವರಿಗೆ ಕೊಡುವುದು ಎಂದು ತಾಕೀತು ಮಾಡಿ ಹಿಂದಿನ ದಿನವೇ ಮನವಿ ಪತ್ರವನ್ನು ಅವರಿಗೆ ಕೊಟ್ಟರು.

ಪ್ರಧಾನಿ ನೆಹರೂ ಬೆಂಗಳೂರಿಗೆ ಬಂದರು. ಆಗಿನ ಕಾಲದಲ್ಲಿ ಪೊಲೀಸರಿಗೆ ದೊಗಳೆ ಚಡ್ಡಿಯ ಯೂನಿಫಾರಂ. ನಮ್ಮ ಬಂಧು ಹಿಂದಿನ ದಿನವೇ ಒಗೆದು ಗಂಜಿ ಹಾಕಿ ಇಸ್ತ್ರೀ ಮಾಡಿಸಿ ರೆಡಿಯಾಗಿರಿಸಿಕೊಂಡಿದ್ದ ಯೂನಿಫಾರಂ ಧರಿಸಿದರು. ಎಂ.ಜಿ.ರೋಡಿನಲ್ಲೇ ಅವರನ್ನು ಬಂದೋ ಬಸ್ತಿಗೆ ನಿಯೋಜಿಸಲಾಗಿತ್ತು. ಜಯಕಾರಗಳ ನಡುವೆ ಕೈ ಬೀಸುತ್ತಾ ನಿಂತಿದ್ದ ನೆಹರೂ ಅವರ ವಾಹನ ಬಂತು. ನಮ್ಮ ಬಂಧು ಸಮಯ ನೋಡಿ ಜೀಪಿನ ಹತ್ತಿರಕ್ಕೆ ಸಾಗಿ ಬಂದು ಸಲ್ಯೂಟ್ ಹೊಡೆದು ತಮ್ಮ ಯೂನಿಫಾರಂ ಚಡ್ಡಿ ಜೇಬಿಗೆ ಮನವಿ ಪತ್ರಕ್ಕಾಗಿ ಕೈ ಹಾಕಿದರು. ಎಷ್ಟು ತಡಕಾಡಿದರೂ ಮನವಿಪತ್ರ ಅವರ ಕೈಗೆ ಸಿಗಲಿಲ್ಲ. ಆ ಕ್ಷಣ ಅವರಿಗೆ ಹೊಳೆಯಿತು. ಅವರು ಮಡಿಮಾಡಿ ಗಂಜಿ ಹಾಕಿಸಿ ರೆಡಿ ಮಾಡಿಟ್ಟುಕೊಂಡಿದ್ದ ಚೆಡ್ಡಿ ಧರಿಸಿದ ಮೇಲೆ ಹಳೆಯ ಚಡ್ಡಿಯಿಂದ ಮನವಿ ಪತ್ರವನ್ನು ವರ್ಗಾಯಿಸಿರಲಿಲ್ಲ! ಮರೆತುಬಿಟ್ಟಿದ್ದರು. ಕಾಲ ಮಿಂಚಿತ್ತು. ಸುತ್ತಲೂ ನಿಂತ ಉನ್ನತ ಪೊಲೀಸ್ ಅಧಿಕಾರಿಗಳು ನಮ್ಮ ಬಂಧುವನ್ನು ಬಂಧಿಸಿದರು. ಪ್ರಧಾನಿ ಬಂದರು, ಹೋದರು!

ಕಳವಳಕ್ಕೀಡಾದ ರಾಜ್ಯ ಸರಕಾರ, ಪ್ರಧಾನಿ ಮಂತ್ರಾಲಯ ಉನ್ನತ ತನಿಖೆಗೆ ಆದೇಶಿಸಿದರು. ಇಲಾಖಾ ತನಿಖೆಯಾಯಿತು. ತನಿಖೆಯ ಹಂತದಲ್ಲಿ ಅಧಿಕಾರಿಗಳು ನಮ್ಮ ಬಂಧುವಿನ ಮನೆಗೆ ಹೋಗಿ ಹಳೆ ಚಡ್ಡಿ ತಪಾಸಣೆ ಮಾಡಿ ಮನವಿಪತ್ರವನ್ನು ಜಪ್ತಿ ಮಾಡಿ ತನಿಖಾ ಕಡತಗಳಿಗೆ ಸೇರಿಸಿದರು. ಅಂತಿಮವಾಗಿ ನಮ್ಮ ಬಂಧುವನ್ನು ಕೆಲಸದಿಂದ ಡಿಸ್‌ಮಿಸ್ ಮಾಡಿದರು. ಮನವಿಪತ್ರದ ಮೂಲ ಕರ್ತೃಗಳು ಜಾಣ ಕಿವುಡರು, ಜಾಣ ಮೂಗರೂ, ಜಾಣ ಕುರುಡರೂ ಆದರು. ಸ್ವಾತಂತ್ರ ಬಂದ ಹೊಸತರಲ್ಲಿ ನಡೆದ ಈ ಅನ್ಯಾಯವನ್ನು ಎಲ್ಲ ಹಂತಗಳಲ್ಲಿ ಪ್ರಶ್ನಿಸಿ ತಮ್ಮ ಅಮಾಯಕತೆಯನ್ನೂ, ಮನುಜಸಹಜ ಮರೆವಿನ ಸ್ಥಿತಿಯನ್ನೂ ಎಲ್ಲ ತನಿಖಾ ಅಧಿಕಾರಿಗಳ ಬಳಿ ನಿವೇದಿಸಿಕೊಂಡು ಸೋತು ಸೊರಗಿ ಸುಣ್ಣವಾದರು.

ಅವರು ನನ್ನ ಕಚೇರಿಗೆ ಬರುವ ವೇಳೆಗೆ ದಶಕಗಳೇ ಕಳೆದಿದ್ದವು. ಅವರ ಮನಸ್ಸಿನಲ್ಲಿ ಒಂದು ಆಶಾಕಿರಣವಿತ್ತು. ನಮ್ಮವನೇ ಹುಡುಗ ಯಾವುದೋ ಅಧಿಕಾರದಲ್ಲಿದ್ದಾನೆ. ಏನಾದರೂ ಪ್ರಯತ್ನಪಟ್ಟು ಕೊನೆಯಪಕ್ಷ ಪಿಂಚಣಿಯ ನ್ನಾದರೂ ಬರುವಂತೆ ಮಾಡುತ್ತಾನೆ ಎಂಬುದು ಅವರ ಮನದಾಳದ ನಿರೀಕ್ಷೆಯಾಗಿತ್ತು. ನಾನು ಅವರಿಗೆ ನನ್ನ ನಿಟ್ಟುಸಿರನ್ನು ಮಾತ್ರ ನೀಡಲು ಸಾಧ್ಯವಾಯಿತು.

ಈ ಎಪಿಸೋಡಿನಲ್ಲಿ ಒಂದು ಸೌಂದರ್ಯವಿದೆ! ಅದು ಪ್ರಜಾಪ್ರಭುತ್ವದಲ್ಲಿ ನಡೆಯಬಹುದಾದ ಅಚ್ಚರಿ. ನಮ್ಮ ಬಂಧುವಿಗೆ ನ್ಯಾಯವೊದಗಿಸುವ ಪ್ರಯತ್ನವೊಂದನ್ನು ಮಾಡಿದವರು ಯಾರಿರಬಹುದು? ಒಂದು ಊಹೆ ಮಾಡಿ!

ಸನ್ಮಾನ್ಯ ದಿವಂಗತ ಶಾಂತವೇರಿ ಗೋಪಾಲಗೌಡರು! ಅಪ್ಪಟ ಲೋಹಿಯವಾದಿ ಶಾಂತವೇರಿಯವರು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿದ್ದ ನಮ್ಮ ಬಂಧು ನೆಹರೂ ಪ್ರಸಂಗದಲ್ಲಿ ಅನ್ಯಾಯಕ್ಕೊಳಗಾದದ್ದರ ಬಗ್ಗೆ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಪ್ರತಿಭಟಿಸಿದರು. ಆಗ ಅವರು ವಿಧಾಯಕರಾಗಿದ್ದರು. ವಿಧಾನಸಭೆಯ ಶಾಸನ ಸಭೆಯಲ್ಲಿ ಈ ವಿಚಾರವನ್ನೆತ್ತಿಕೊಂಡು ಚರ್ಚೆ ಪ್ರತಿಭಟನೆ ಮಾಡಿದರು. ಸರಕಾರವೂ ಕುರುಡಾಗಿತ್ತು.

ಶಾಂತವೇರಿಯವರ ಈ ಪ್ರಯತ್ನದಿಂದಲೇ ಇರ ಬೇಕು, ಬಹುಶಃ ನಮ್ಮ ಬಂಧುವಿಗೆ ಅದೇ ಎಂ.ಜಿ. ರೋಡಿನಲ್ಲಿರುವ ಪ್ರಜಾವಾಣಿ ಕಚೇರಿಯಲ್ಲಿ ನೌಕರಿ ದೊರೆ ಯುವಂತಾಯಿತು. ಅವರು ನನ್ನ ಕಚೇರಿಗೆ ಬಂದಿದ್ದಾಗ ಗೋಪಾಲ ಗೌಡರು ಸದನದಲ್ಲಿ ಗುಡುಗಿದ್ದ ಮತ್ತು ಇತರ ಸುದ್ದಿ ಪತ್ರಿಕೆಯ ತುಣುಕುಗಳನ್ನು ನನಗೆ ತೋರಿಸಿದ್ದರು. ಶಾಂತವೇರಿಯವರ ಹೆಸರು ಪ್ರಸ್ತಾಪಿಸುವಾಗಲೆಲ್ಲ ಅವರು ಹೆಮ್ಮೆಪಡುತ್ತಿದ್ದರು. ಅವರ ಕಣ್ಣಲ್ಲಿ ಒಂದು ಹೊಳಪು ಕಾಣುತ್ತಿದ್ದುದು ಒಂದು ಪ್ರತೀಕವಾಗಿ ನನಗೆ ಈಗಲೂ ಗೋಚರವಾಗುತ್ತದೆ. ಶಾಂತವೇರಿಯವರ ಬಗ್ಗೆ ಸಂಶೋಧನೆ ಮಾಡುವವರು ವಿಧಾನಸಭೆಯ ಕಡತಗಳಲ್ಲಿ ಇಂತಹ ದಾಖಲೆಗಳನ್ನು ಹುಡುಕಿ ಬೆಳಕಿಗೆ ತರಬೇಕು.

ಇಲ್ಲಿ ನೆಹರೂ, ಶಾಂತವೇರಿಯವರ ಹೆಸರು ತೆಗೆದು ಹಾಕಿದರೆ ಚರಿತ್ರೆ ಕಣ್ಮರೆಯಾಗುತ್ತದೆ. ಈ ಘಟನಾವಳಿಗಳು ನಡೆದ ಇಸವಿಗಳನ್ನು ಹುಡುಕಿ ತೆಗೆದು ದಾಖಲೆ ಮಾಡಿದರೆ ಸಾಮಾನ್�

Writer - ಅಗ್ರಹಾರ ಕೃಷ್ಣಮೂರ್ತಿ

contributor

Editor - ಅಗ್ರಹಾರ ಕೃಷ್ಣಮೂರ್ತಿ

contributor

Similar News