ನದಿಯೊಂದಿಗೆ ಮುಖಾಮುಖಿ

Update: 2019-12-30 10:38 GMT

          ಮಾಲತಿ ಪೈ. ಮೂಡುಬಿದಿರೆ

ಉಗಮದಿಂದ ಕೊನೆವರೆಗೆ

ನಿಸ್ವಾರ್ಥ ಹರಿವಿನ

ಸಂಸ್ಕೃತಿಯ ಯಾತ್ರೆ

ಪ್ರೀತಿಯ ಒರತೆ

ತರತಮವಿರದ ನಿನ್ನ

ನೀನೇ ಹಂಚಿ ಹಗುರಾಗುವ

ಕಲೆ --- ಅರಿಯಬೇಕಿದೆ.

ಜೀವಜಾಲದ ಬಗ್ಗೆ

ಅದೆಷ್ಟು ಮೋಹ ನಿನಗೆ?

ಏಕಮುಖ ಸಂಚಾರಿ

ಕ್ರಮಿಸಿದ ಹಾದಿಯನ್ನು

ತಿರುಗಿ ನೋಡದ ಶಾಂತ

ಏಕಾಂಗಿ ನಡೆ -- ಅನುಸರಿಸಬೇಕಿದೆ.

ಕಾರಿರುಳ ದಟ್ಟ ಅರಣ್ಯವಿರಲಿ

ಗಿರಿಶಿಖರಗಳ ಪ್ರಪಾತವೇ ಇರಲಿ

ಎತ್ತರ -- ತತ್ತರದಲ್ಲಿ

ಹೊರಳಿಳಿದು --- ಕಾಲನ

ಕುಲುಮೆಯಲ್ಲಿ ಬೇಯಲೇಬೇಕೆನ್ನುವ

ಪಾಠ -- ಕಲಿಯಬೇಕಿದೆ.

ಯಾರೋ ಬೊಗಸೆಗೆ ತ್ರಪ್ತಿ ಪಟ್ಟರೆ

ಇನ್ಯಾರದೋ ಇಂಗದ ದಾಹಕ್ಕೆ

ಸಾಕ್ಷಿ ನೀನೇ. ಮರುಕಪಡದ

ಸ್ಥಿತಪ್ರಜ್ಙೆ -- ತಿಳಿಯಬೇಕಿದೆ.

ಕೊನೆಗೊಮ್ಮೆ

ಸಾಗರಕ್ಕೆ ಮುಖಾಮುಖಿಯಾಗುವ

ನೋವು ನಿನ್ನ ಕಾಡಿರಬಹುದು

ಆದರೇನು?

ಅದ್ರಶ್ಯಳಾದರೂ ನೀನೇ

’ಸಾಗರ’ವಾಗುವ, ತೆರೆಯಾಗಿ

ಅಪ್ಪಳಿಸಿ ನಗುವ

ಕಲೆ -- ಅನುಕರಿಸಬೇಕಿದೆ.

ಹುಟ್ಟಿನ ಸೆರಗಿಗೆ

ಸಾವು ಅಂಟಿಕೊಂಡೇ

ಇರುತ್ತದೆನ್ನುವ ಪರಮ

ಸತ್ಯ -ಗ್ರಹಿಸಬೇಕಿದೆ.

Writer - ಮಾಲತಿ ಪೈ. ಮೂಡುಬಿದಿರೆ

contributor

Editor - ಮಾಲತಿ ಪೈ. ಮೂಡುಬಿದಿರೆ

contributor

Similar News