ಪಾಕಿಸ್ತಾನಿ ವ್ಯಕ್ತಿಗೆ ರಹಸ್ಯ ಮಾಹಿತಿ: ನೌಕಾಪಡೆಯ 12 ಸಿಬ್ಬಂದಿಯ ಬಂಧನ

Update: 2019-12-30 10:46 GMT

ಹೊಸದಿಲ್ಲಿ: ಪಾಕಿಸ್ತಾನಿ ವ್ಯಕ್ತಿಗೆ ರಹಸ್ಯ ಮಾಹಿತಿಗಳನ್ನು ನೀಡಿದ ಆರೋಪದ ಮೇಲೆ ನೌಕಾಪಡೆಯ ಹನ್ನೆರಡು ಮಂದಿ ನಾವಿಕರನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲಿಯೇ ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ಫೇಸ್‍ ಬುಕ್ ಬಳಕೆಯನ್ನು ನಿಷೇಧಿಸಲಾಗಿದೆ.

ನೌಕಾ ನೆಲೆಗಳು ಹಾಗೂ ಯುದ್ಧ ನೌಕೆಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಯನ್ನೂ ನಿಷೇಧಿಸಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಕೆಲ ನೌಕಾಪಡೆ ಸಿಬ್ಬಂದಿ ವೈರಿ ದೇಶದ ಗುಪ್ತಚರ ಏಜನ್ಸಿಗಳಿಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆಂದು ತಿಳಿದು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೌಕಾದಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಗೂಢಚರ್ಯೆ ಜಾಲವನ್ನು ಡಿಸೆಂಬರ್ 17ರಂದು ಬೇಧಿಸಲಾಗಿತ್ತು. 2017ರಲ್ಲಿ ನೇಮಕಗೊಂಡಿದ್ದ ಈ ಆರೋಪಿಗಳನ್ನು ಫೇಸ್‍ ಬುಕ್ ಮುಖಾಂತರ ಮೂರರಿಂದ ನಾಲ್ಕು ಮಹಿಳೆಯರು ಸಂಪರ್ಕ ಸಾಧಿಸಿ ಆನ್‍ಲೈನ್ ಸಂಬಂಧ ಬೆಳೆಸುವ ಆಮಿಷ ಒಡ್ಡಿದ್ದರು. ನಂತರ ಈ ಮಹಿಳೆಯರು ಇನ್ನೊಬ್ಬ ಉದ್ಯಮಿಯೆಂದು ಹೇಳಲಾದ ವ್ಯಕ್ತಿಯನ್ನು ಅವರಿಗೆ ಪರಿಚಯಿಸಿದ್ದರು. ಆದರೆ ಈತ ಪಾಕ್ ಗೂಢಚರನಾಗಿದ್ದು ನಾವಿಕರಿಂದ ನೌಕಾದಳದ ಹಡಗುಗಳು ಹಾಗೂ ಜಲಾಂತರ್ಗಾಮಿಗಳ ಕುರಿತು ಪ್ರಮುಖ ಮಾಹಿತಿ ಪಡೆಯಲಾರಂಭಿಸಿದ್ದ. ನಾವಿಕರು ಆ ಮಹಿಳೆಯರೊಂದಿಗೆ ನಡೆಸಿದ ಚಾಟ್ ಲೈಂಗಿಕ ವಿಚಾರಗಳಿಂದ ಕೂಡಿದ್ದರಿಂದ  ನಂತರ ಇದನ್ನೇ ಅಸ್ತ್ರವಾಗಿಸಿ ಅವರನ್ನು ಬ್ಲ್ಯಾಕ್ ಮೇಲ್‍ ನಡೆಸಲಾಗಿತ್ತು" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News