ಏಕಾಂತದ ಬಾಗಿಲು ತಟ್ಟಿದವನು !

Update: 2019-12-30 11:11 GMT

ಫಾತಿಮಾ ರಲಿಯಾ

ಕಥೆ, ಕಾವ್ಯ, ಪ್ರಬಂಧಗಳ ಮೂಲಕ ಗಮನ ಸೆಳೆಯುತ್ತಿರುವ ಉದಯೋನ್ಮುಖ ಬರಹಗಾರ್ತಿ ಫಾತಿಮಾ ರಲಿಯ. ಈಗಾಗಲೇ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಹಲವು ಬರಹಗಳು ಪ್ರಕಟಗೊಂಡಿವೆ. ಹೂವಿನಂತಹ ನವಿರು ಭಾಷೆ ಇವರ ಹೆಗ್ಗಳಿಕೆಯಾಗಿದೆ.

ಪ್ರಭುತ್ವವೇನೋ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ, ಶಾಂತಿಯುತವಾಗಿದೆ ಎನ್ನುತ್ತಿದೆ. ಆದರೆ ನಿಜಕ್ಕೂ ಹಾಗಿದೆಯಾ? ಬಂದೂಕಿನ ನಳಿಗೆಯನ್ನು ಹೆಗಲ ಮೇಲೆ ಇರಿಸಿಕೊಂಡೇ ಕಾಶ್ಮೀರ ಉಸಿರಾಡುತ್ತಿದೆಯಾ? ಅಥವಾ ಸರಕಾರ ಹೇಳಿಕೊಳ್ಳುತ್ತಿರುವಂತೆ ಎಲ್ಲವೂ ‘ಸರಿ’ಯಾಗಿಯೇ ಇದೆಯಾ? ಗೊಂದಲಗಳನ್ನು, ಅನುಮಾನಗಳನ್ನು ಪರಿಹರಿಸಬೇಕಾಗಿರುವ ಮಾಧ್ಯಮ ಆಳುವ ವರ್ಗದ ಕೈಗೊಂಬೆಯಾಗಿರುವಾಗ ಇವನ್ನೆಲ್ಲಾ ಯಾರ ಬಳಿ ವಿಚಾರಿಸಬೇಕು?

ಬದುಕಿನ ಒಟ್ಟಂದದಲ್ಲಿ ಜೀವ ಝಲ್ಲೆನಿಸುವ ಕ್ಷಣಗಳು ಎಷ್ಟು ಬಾರಿ ಬಂದು ಹೋಗುತ್ತವೆ? ಶುದ್ಧ ಅಂತಃಕರಣದ ಹಸಿ ಹಸಿ ಹಾದಿಯಲ್ಲಿ ಎದುರಾಗುವ ಅಪೂರ್ಣ ಆದರೆ ಅಪ್ಪಟ ಮನುಷ್ಯರ, ಗುರುತು ಪರಿಚಯವಿಲ್ಲದ ಚಹರೆಯನ್ನು ಬದುಕಿನ ಓಘದಲ್ಲಿ ದಾಖಲಿಸುವ, ಮುಂದೆ ಯಾವತ್ತಾದರೂ ಒಂದು ದಿನ, ಒಂದು ವಿಶಿಷ್ಟ ಕ್ಷಣದಲ್ಲಿ ಅಥವಾ ‘ಅಂತಹ’ ವಿಶೇಷವೇ ಅಲ್ಲದ ಸಾಮಾನ್ಯ ಕ್ಷಣದಲ್ಲಿ ಕಣ್ಣ ಮುಂದೆ ತಂದಿಡುವ ವಿಹ್ವಲತೆಗಳನ್ನೆಲ್ಲಾ ಏನೆಂದು ಕರೆಯಬಹುದು? ಅಥವಾ ಕ್ಷಣ ಹೊತ್ತು ಮರುಗಿ ಮತ್ತದೇ ಸಹಜ ’ಸುಂದರ’ ಬದುಕಿಗೆ ಮರಳುವ ಮನಸ್ಸು ಈಗಷ್ಟೇ ಅತ್ಯಂತ ಮಾನವೀಯವಾದ ಘಳಿಗೆಯನ್ನು ಅನುಭವಿಸಿದ್ದನ್ನೂ ತಟ್ಟನೆ ಮರೆತು ಬಿಡುತ್ತದಲ್ಲಾ ಈ ವೈಪರೀತ್ಯಗಳನ್ನೆಲ್ಲಾ ಏನನ್ನಬೇಕು? ಅರ್ಥವೇ ಆಗುವುದಿಲ್ಲ.

ಮೊನ್ನೆ ಮೊನ್ನೆಯಷ್ಟೇ ನಮ್ಮ ಸರಕಾರ, ವಿರೋಧಿ ರಾಜಕೀಯ ನಾಯಕರನ್ನು, ಸಾಮಾಜಿಕ ಹೋರಾಟ ಗಾರರನ್ನು ಬಂಧಿಸಿ, ಫೋನ್- ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ, ಒಂದಿಡೀ ರಾಜ್ಯವನ್ನು ಕತ್ತಲಲ್ಲಿರಿಸಿ ಸಂವಿಧಾನದ 370 ವಿಧಿಯನ್ನು ರದ್ದು ಮಾಡಿತಲ್ಲಾ ಆಗ ಅದರ ಆಜುಬಾಜಿನ ರಾಜಕೀಯಕ್ಕಿಂತಲೂ ಮೊದಲು ನನಗೆ ನೆನಪಾದದ್ದು ಎಂಟು-ಒಂಭತ್ತು ವರ್ಷಗಳ ಹಿಂದೆ ಅಚಾನಕ್ಕಾಗಿ ಭೇಟಿಯಾದ ಪುಟ್ಟ ಅಫೀಫಾಳ ಕುಟುಂಬ.

ಆ ಬೆಳಗು ಯಾರದೋ ಸಾವಿನ ಕರೆಯೊಂದಿಗೆ ಆರಂಭವಾಗಿತ್ತು. ಸಾಮಾನ್ಯವಾಗಿ ನನ್ನೊಬ್ಬಳನ್ನು ಮನೆಯಲ್ಲಿ ಬಿಟ್ಟು ಹೋಗದ ಅಪ್ಪ-ಅಮ್ಮ ಅವತ್ತು ಬೇರೆ ದಾರಿ ಕಾಣದೆ, ನೂರು ಬಾರಿ ಜೋಪಾನದ ಪಾಠ ಹೇಳಿ, ಅಪರಿಚಿತರಿಗೆ ಬಾಗಿಲು ತೆರೆಯಬಾರದೆಂದು ಹೇಳಿ ಹೋಗಿದ್ದರು, ನಾನು ವಿಧೇಯ ವಿದ್ಯಾರ್ಥಿನಿಯಂತೆ ನಿಷ್ಠೆಯಿಂದ ತಲೆಯಾಡಿಸಿದ್ದೆ. ಆದರೆ ನನಗೆ ಅಪರೂಪಕ್ಕೆ ಸಿಕ್ಕ ಸ್ವಾತಂತ್ರವನ್ನು ಪೂರ್ಣ ಅನುಭವಿಸುವ ಹುಕಿ ಅವರು ಗೇಟು ದಾಟುವ ಮುನ್ನವೇ ಹುಚ್ಚೆದ್ದು ಕುಣಿಯತೊಡಗಿತ್ತು.ಜೋರು ಟಿ.ವಿ. ಹಚ್ಚಿ, ಹಾಳಾಗಿ ಅಟ್ಟ ಸೇರಿದ್ದ ಹಳೆಯ ಟೇಪ್ ರೆಕಾರ್ಡರ್ ರಿಪೇರಿ ಮಾಡುತ್ತಾ ಕೂತಿದ್ದೆ. ಕೈ ಕಾಲಿಗೆ ತೊಡರುತ್ತಿದ್ದ ಸ್ಕ್ರೂ, ತುಕ್ಕು ಹಿಡಿದು ಅಲ್ಲಲ್ಲಿ ಹಿಕ್ಕೆ ಉದುರಿಸಿದಂತೆ ಕಾಣುತ್ತಿದ್ದ ಪಾರ್ಟ್ಸ್, ಹೇಗೆ ಜೋಡಿಸಿದರೂ ಕಣ್ಣು ತಪ್ಪಿಸಿ ಅಲ್ಲೇ ಎಲ್ಲೋ ಉಳಿದುಬಿಡುತ್ತಿದ್ದ ಅದುವರೆಗೂ ಕಂಡೇ ಇಲ್ಲದ ಬಿಡಿ ಭಾಗಗಳು ಎಲ್ಲಾ ಸೇರಿ ಆ ಸ್ವಾತಂತ್ರವೂ ಒಂದು ರೀತಿಯಲ್ಲಿ ರೇಜಿಗೆ ಹುಟ್ಟಿಸಿತ್ತು. ಯಾಕಾದರೂ ಮನೆಯಲ್ಲಿ ಒಬ್ಬಳೇ ಇರಲು ಒಪ್ಪಿಕೊಂಡೆನೋ ಅಂತೆಲ್ಲಾ ಅನ್ನಿಸಲಾರಂಭಿಸಿತ್ತು. ಇಷ್ಟಕ್ಕೇನಾ ಒಂದು ಪುಟ್ಟ ಏಕಾಂತಕ್ಕಾಗಿ ಅಷ್ಟೆಲ್ಲಾ ಹಂಬಲಿಸುತ್ತಿದ್ದುದು ಎಂದು ಅಚ್ಚರಿಯಾಗುತ್ತಿತ್ತು. ಬಿಚ್ಚಿಟ್ಟ ಟೇಪ್ ರೆಕಾರ್ಡನ್ನು ಹಾಗೆಯೇ ಒಂದು ಪ್ಲಾಸ್ಟಿಕ್ನೊಳಕ್ಕೆ ತಳ್ಳಿ ಮತ್ತೆ ಅಟ್ಟಕ್ಕೆ ಸೇರಿಸುವಷ್ಟರಲ್ಲಿ ಕರೆಗಂಟೆ ಸದ್ದಾಯಿತು.

ಗವ್ವೆನ್ನುವ ಒಬ್ಬಂಟಿತನವನ್ನು ಕಳಚಿಕೊಳ್ಳುವ ಭರದಲ್ಲಿ ಅಪರಿಚಿತರಿಗೆ ಬಾಗಿಲು ತೆರೆಯಬಾರದು ಅನ್ನುವ ವಿವೇಕ ಮರೆತೇ ಹೋಗಿತ್ತು. ಮನುಷ್ಯ ಪಕ್ವವಾಗಲು, ಅವನೊಳಗಿನ ಯೋಚನೆಗಳು ಪ್ರಬುದ್ಧವಾಗಲು ಒಂಟಿತನವನ್ನು, ತನಗಾರೂ ಇಲ್ಲ ಅನ್ನುವ ಭಾವವನ್ನು ಬದುಕಿನಲ್ಲಿ ಒಮ್ಮೆಯಾದರೂ ಭರಿಸಬೇಕು ಅನ್ನುತ್ತಾರೆ. ಅಂಥದ್ದರಲ್ಲಿ ವಾಸ್ತವವಾಗಿ ಒಂಟಿತನವೇ ಅಲ್ಲದ ಒಂಟಿತನವನ್ನು ಕೆಲವೇ ಘಂಟೆಗಳ ಕಾಲವೂ ಭರಿಸಲಾಗದೆ ಸಹ ಮನುಷ್ಯನ ಸಾಹಚರ್ಯವನ್ನು ಮನಸ್ಸು ಬಯಸಿತ್ತು ಅಂದರೆ ಎಷ್ಟು ಚಾಂಚಲ್ಯವಿರಬೇಕು?

ಬದುಕು ಯಾವ ಹೊತ್ತು ಯಾವ ಅರಿವಿನ ಕದ ತೆರೆಯುತ್ತದೆ ಅನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅವತ್ತು ಬಾಗಿಲು ತೆರೆದವಳ ಮುಂದೆ ನಿಂತದ್ದು ಮೂರು-ನಾಲ್ಕು ವರ್ಷದ ಪುಟ್ಟ ಮಗು ಮತ್ತು ಅವಳಪ್ಪನಂತೆ ತೋರುತ್ತಿದ್ದ ವ್ಯಕ್ತಿ. ನೋಡಿದಾಕ್ಷಣ ಮುದ್ದು ಉಕ್ಕಿ ಬರುವಷ್ಟು ಚಂದದ ಮಗು ಅದು. ಪುಟ್ಟ ಕಿವಿಯಲ್ಲಿ ನೇತಾಡುತ್ತಿದ್ದ ಲೋಲಾಕನ್ನು ಭದ್ರವಾಗಿ ಹಿಡಿದುಕೊಂಡಿತ್ತು. ಸ್ವದಕಾಗೆ ಬಂದಿರಬೇಕು ಅಂದುಕೊಂಡು ದುಡ್ಡು ಕೊಡಲೆಂದು ಬಾಗಿಲಿಗೆ ಬೆನ್ನಿ ತಿರುಗಿಸುತ್ತಿದ್ದಂತೆ ಆ ವ್ಯಕ್ತಿ ಹಸಿವಾಗುತ್ತಿದೆ ಚಾವಲ್ ಸಿಗಬಹುದೇ ಎಂದು ಕೇಳಿದರು. ಉರ್ದು, ಹಿಂದಿ ಬಾರದ ನಾನು ಮತ್ತು ಕನ್ನಡ, ಇಂಗ್ಲಿಷ್ ಬಾರದ ಅವರು... ಆದರೆ ಹಸಿವೆಗೆಲ್ಲಿ ಭಾಷೆಯ ಹಂಗು?

ಇರಿ, ತರುತ್ತೇನೆಂದು ಒಳ ಹೋಗುವಷ್ಟರಲ್ಲಿ ಆ ಪುಟ್ಟ ಹುಡುಗಿ ಅಪರಿಚಿತರ ಮನೆಯೆಂಬ ಯಾವ ಭಿಡೆಯೂ ಇಲ್ಲದೆ ನನ್ನ ಹಿಂದೆಯೇ ಅಡುಗೆ ಮನೆಯವರೆಗೆ ಬಂದಿದ್ದಳು. ಹೊರಗೆ ಪ್ರಾಂಗಣದಲ್ಲಿ ಕೂತಿದ್ದ ಅವಳಪ್ಪ ಅಫೀಫಾ ಬಾ ಇಲ್ಲಿ ಎಂದು ಕರೆಯುತ್ತಲೇ ಇದ್ದ. ಅವನ ಕರೆಗೂ ತನಗೂ ಸಂಬಂಧವೇ ಇಲ್ಲವೆಂಬಂತೆ ಆಕೆ ಅನ್ನದ ಬಟ್ಟಲನ್ನು ಎತ್ತಿಕೊಂಡೇ ಪ್ರಾಗಂಣಕ್ಕೆ ಬಂದಳು. ಎಲ್ಲಿಯ ದಕ್ಷಿಣ ಕನ್ನಡದ ಕುಚ್ಚಲಕ್ಕಿಯ ಅನ್ನ, ಎಲ್ಲಿಯ ಉತ್ತರ ಭಾರತ? ಆ ಹೊತ್ತಿಗೆ ಹಸಿವು ತನ್ನದೇ ಭಾಷೆಯನ್ನು ಸೃಷ್ಟಿಸಿತ್ತು. ಅದೂ ಇದೂ ಮಾತಾಡುತ್ತಾ ನನ್ನ ಹರುಕು ಮುರುಕು ಹಿಂದಿಯಲ್ಲಿ ಅವಳ ಅಮ್ಮನ ಕುರಿತು ಕೇಳಿದೆ. ಅಷ್ಟಕ್ಕೇ ಕಣ್ಣು ತುಂಬಿಕೊಂಡ ಅವನು, ಅಫೀಫಾ ಹುಟ್ಟುತ್ತಿದ್ದಂತೆ ಅವಳಮ್ಮನನ್ನು ಕಳೆದುಕೊಂಡೆ ಎಂದು ಕಣ್ಣೀರೊರೆಸಿದ. ಒಮ್ಮೆ ಪಿಚ್ಚೆನಿಸಿತು, ಮುಂದೆ ಕೇಳಬೇಕೆನಿಸಲಿಲ್ಲ ಅಥವಾ ಕೇಳಲಾಗಲಿಲ್ಲ.

ಆದರೆ ಅವನೇ ಮುಂದುವರಿಸಿದ. ಅಫೀಫಾ ಹುಟ್ಟುವ ಹೊತ್ತಿಗೆ ಅವನೂರಲ್ಲಿ ಹೆಣ್ಣು ಮಕ್ಕಳು ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗುವ ಕ್ರಮ ಇರಲಿಲ್ಲವಂತೆ. ಹೆರಿಗೆಗೆ ಅಂತಲ್ಲ, ಯಾವ ಕಾರಣಕ್ಕೂ ಹೆಣ್ಣುಮಕ್ಕಳು ಮನೆಯಿಂದ ಹೊರಗಿಳಿಯುವುದೇ ಅಪರಾಧ ಎಂಬಂತೆ ನೋಡುತ್ತಿದ್ದರಂತೆ. ಹೆರಿಗೆ ನೋವು ಪ್ರಾರಂಭವಾಗುತ್ತಿದ್ದಂತೆ ಎರಡು ಕಿ.ಮೀ. ದೂರದಲ್ಲಿದ್ದ ಸೂಲಗಿತ್ತಿಯನ್ನು ಕರೆತರಲು ಇವನೇ ಹೋಗಿದ್ದ. ಆದರೆ ಅವಳನ್ನು ಹುಡುಕಿ ಕರೆತರುವಷ್ಟರಲ್ಲಿ ಅವಳು ನೋವು ತಾಳಲಾರದೆ ಕಿರುಚಾಡುತ್ತಿದ್ದಳು. ಸೂಲಗಿತ್ತಿ ಒಳಹೋಗುತ್ತಿದ್ದಂತೆ ಮುಚ್ಚಿದ ಬಾಗಿಲಿನ ಹಿಂದಿನಿಂದ ಕೇಳುತ್ತಿದ್ದ ಕಿರುಚಾಟವೂ ನಿಂತಿತು. ಹೊರಗಡೆ ಅವನು ಶತಪಥ ತಿರುಗುತ್ತಿದ್ದರೆ ಒಳಗೇನಾಗುತ್ತಿತ್ತು ಅನ್ನುವ ಆತಂಕದಲ್ಲಿ ಇಡೀ ಪ್ರಪಂಚವೇ ಒಂದು ಸುತ್ತು ಹಾಕಿ ಬಂದಿದ್ದರೂ ಅವನಿಗೆ ತಿಳಿಯುತ್ತಿರಲಿಲ್ಲವಂತೆ. ಎಲ್ಲ ನೋವಿಗೂ ಶಾಶ್ವತ ವಿದಾಯವೇನೋ ಎಂಬಂತೆ ಪುಟ್ಟದಾಗಿ ಮಗು ಅಳುವ ಧ್ವನಿ ಕೇಳಿಸಿತು, ಕತ್ತಲ ಕೋಣೆಯ ಹಿಂದೆ ಬೆಳಕಿನ ಬಾಗಿಲೊಂದು ತೆರೆದಂತೆ ಆತ ಒಳ ನುಗ್ಗಿದ. ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟ ಮಗು ಅಳುತ್ತಿದ್ದರೆ, ಮಗುವಿನ ಹಿಂದೆಯೇ ಅಮ್ಮನ ಗರ್ಭಕೋಶವೂ ಉದರದಿಂದ ಹೊರಬಂದು ನೇತಾಡುತ್ತಿತ್ತು. ಇಂತಹಾ ಪರಿಸ್ಥಿತಿಯನ್ನು ಬದುಕಿನಲ್ಲಿ ಎಂದೂ ಅನುಭವಿಸದಿದ್ದ ಸೂಲಗಿತ್ತಿ ಧಿಗ್ಮೂಡಳಾಗಿ ನಿಂತಿದ್ದರೆ, ಅತ್ತ ಮಗುವನ್ನು ಸಮಾಧಾನಿಸಬೇಕೇ ತಾಯಿಯನ್ನು ನೋಡಿಕೊಳ್ಳಬೇಕೇ ಅರ್ಥವಾಗದ ಅವನು ಮೂರ್ಛೆ ತಪ್ಪಿ ಬಿದ್ದ. ಎಷ್ಟು ಹೊತ್ತು ಆಕೆ ಜೀವ ಕೈಯಲ್ಲಿ ಹಿಡಿದು ನರಳುತ್ತಿದ್ದಳೋ ಗೊತ್ತಿಲ್ಲ ಇವನು ಕಣ್ಣು ತೆರೆಯುವ ಹೊತ್ತಿಗೆ ಅವಳು ಶಾಶ್ವತವಾಗಿ ಕಣ್ಣುಮುಚ್ಚಿಬಿಟ್ಟಿದ್ದಳಂತೆ. ಇಷ್ಟು ಬೆಳೆದ ಮೇಲೂ ಅಮ್ಮನಿಲ್ಲದ ಬದುಕನ್ನು ಕಲ್ಪಿಸಿಕೊಳ್ಳೋಕೆ ನನಗೆ ಕಷ್ಟವಾಗುತ್ತಿರುವಾಗ ಹುಟ್ಟಿದಾಕ್ಷಣ ಅಮ್ಮನನ್ನು ಕಳೆದುಕೊಂಡ ಆ ಬಾಲೆಯ ಸಂಕಟ ಎಷ್ಟಿರ ಬಹುದು ಎನ್ನುವ ಕಲ್ಪನೆಯೇ ನನ್ನನ್ನು ಆ ಕ್ಷಣಕ್ಕೆ ಅಧೀರಳಾಗಿಸಿತ್ತು.

ಗೊತ್ತಿಲ್ಲದ ಭಾಷೆಯಲ್ಲಿ ಇಷ್ಟೆಲ್ಲಾ ಮಾತು ಕಥೆಯಾಗುವ ಹೊತ್ತಿಗೆ ಅನ್ನದ ತಟ್ಟೆ ಖಾಲಿಯಾಗಿತ್ತು. ಮತ್ತಷ್ಟು ಅನ್ನ ಬಡಿಸುವ ಮುನ್ನ ‘ನಿಮ್ಮೂರು ಯಾವುದು’ ಎಂದು ಕೇಳಿದೆ. ತಲೆಯೆತ್ತದ ಅವನು ತಟ್ಟನೆ ‘ಕಾಶ್ಮೀರ’ ಅಂದ. ಒಮ್ಮೆ ಎದೆ ಧಸಕ್ಕಂದಂತಾಯಿತು. ನಮ್ಮ ಸೈನಿಕರ ಮೇಲೆ ಕಲ್ಲು ತೂರುವ, ವಿನಾಕಾರಣ ನಮ್ಮವರ ರಕ್ತ ಹರಿಸುವ, ಈ ದೇಶದೊಳಗಿದ್ದುಕೊಂಡೇ ಇಲ್ಲಿಗೆ ದ್ರೋಹ ಬಗೆಯುವ ಕಾಶ್ಮೀರಿಗಳ ಚಿತ್ರಣ ಮೆದುಳೊಳಗೆ ತಣ್ಣಗೆ ಕದಲಿದಂತಾಯಿತು. ಬಡಿಸುತ್ತಿದ್ದ ಕೈ ಸ್ತಬ್ಧವಾಯಿತು. ‘ನೀವು ಯಾರ ಪರ?’ ನನಗೇ ಗೊತ್ತಿಲ್ಲದ ಹಾಗೆ ಧ್ವನಿ ಕಠೋರವಾಯಿತು.

ಅದುವರೆಗೂ ತಟ್ಟೆಯನ್ನಷ್ಟೇ ದಿಟ್ಟಿಸುತ್ತಿದ್ದ ಆತ ತಲೆಯೆತ್ತಿ, ನಾವು ಸದಾ ಭಾರತದ ಪರವೇ ಇದ್ದವರು. ಈಗಲೂ ಈ ಮಣ್ಣಿನ ಪರವೇ ಇದ್ದೇವೆ. ಪಾಕಿಸ್ತಾನ ಹೆಸರಿಗಷ್ಟೇ ಇಸ್ಲಾಮಿಕ್ ರಾಷ್ಟ್ರ. ಅಲ್ಲಿ ನಡೆಯುತ್ತಿ ರುವುದೆಲ್ಲಾ ಅನಾಚಾರ. ಸ್ವತಂತ್ರ ಕಾಶ್ಮೀರದ ಕಥೆಯೂ ಅಷ್ಟೇ. ಸ್ವಾಯತ್ತತೆ ಸಿಗುವರೆಗಷ್ಟೇ ಸ್ವಾತಂತ್ರದ ಕೂಗಿರುತ್ತದೆ. ಆಮೇಲೆ ಅಲ್ಲಿ ನಡೆಯುವುದೂ ಶುದ್ಧ ಅನ್ಯಾಯವೇ, ಅವನು ಹೇಳಿದ್ದಷ್ಟೇನಾ ಅಥವಾ ನನಗೆ ಅರ್ಥವಾದದ್ದು ಅಷ್ಟೇನಾ? ಗೊತ್ತಿಲ್ಲ. ತಟ್ಟೆಯಲ್ಲಿ ಸ್ತಬ್ಧವಾಗಿದ್ದ ಕೈ ಅನಾಯಾಚಿತವಾಗಿ ಅನ್ನ ಬಡಿಸುತ್ತಿದ್ದರೆ ಆ ಮಹಾನುಭಾವ ಸಾಕು ಎಂಬಂತೆ ಮುಖ ನೋಡಿದರು. ಮತ್ತಷ್ಟು ಉಣ್ಣಲು ಹೇಳಲು ಧೈರ್ಯ ಸಾಲದೆ ನಾನು ಸುಮ್ಮನೆ ತಲೆತಗ್ಗಿಸಿದೆ.

ರಾಜಕೀಯ ಕಾರಣಗಳಿಗಾಗಿ, ಯಾರದೋ ಅಧಿಕಾರದ ಲಾಲಸೆಗಾಗಿ ದೇಶ ವಿಭಜನೆಯಾದಾಗ ಭಾವನೆಗಳನ್ನು, ಸಂಬಂಧಗಳನ್ನು, ಬದುಕನ್ನು ಅದೆಷ್ಟೋ ಕೋಟಿ ಜನ ಕಳೆದುಕೊಂಡರು. ಮದುವೆಯಾಗಿ ಹತ್ತೋ ಇಪ್ಪತ್ತೋ ನೂರೋ ಕಿ.ಮೀ. ದೂರ ಹೋಗಬೇಕಾಗಿ ಬಂದಾಗಲೇ ಅಲ್ಲಿಗೆ ಹೋಗಲೂ ಆಗದೆ, ಇದ್ದಲ್ಲೇ ಇರಲೇ ಆಗದೆ ತಡಬಡಾಯಿಸುತ್ತೇವೆ ನಾವು. ಹಾಗಿರುವಾಗ ಎಲ್ಲರನ್ನೂ, ಎಲ್ಲವನ್ನೂ ಕೊನೆಗೆ ತನ್ನದು ಅನ್ನುವ ಗುರುತನ್ನೂ ಬಿಟ್ಟು ಒಂದು ಅಪರಿಚಿತತೆ, ಪರಕೀಯತೆಯನ್ನಷ್ಟೇ ಮೈಗೂಡಿಸಿಕೊಂಡು ಬದುಕುವ ಅಸಹಾಯಕತೆ ಇದೆಯಲ್ಲಾ ಅದು ನಮ್ಮ ಅರಿವಿನ ಅಲ್ಪ ಮಟ್ಟಕ್ಕೆ ಅರ್ಥವಾಗುವಂಥದ್ದಲ್ಲ. ತನ್ನೊಳಗಿನ ಅಂತಃಸತ್ವವನ್ನು ಮರೆತು ಅಥವಾ ಅನಿವಾರ್ಯವಾಗಿ ಮರೆತಂತೆ ನಟಿಸಿ ಬದುಕುವುದು ಸುಲಭವಲ್ಲವೇ ಅಲ್ಲ. ಬಿಟ್ಟು ಬಂದ ನೆಲಕ್ಕಾಗಿ, ಆ ನೆಲದೊಂದಿಗಿನ ನಂಟಿಗಾಗಿ, ಬದುಕಿಗಾಗಿ ಜೀವನಪೂರ್ತಿ ಒಂದು ಹಪಹಪಿ, ಅತೃಪ್ತಿ ಉಳಿದೇ ಉಳಿಯುತ್ತದೆ.

ಆದರೆ ಕಾಶ್ಮೀರಿಗಳಷ್ಟು ಅನಾಥ ಭಾವವನ್ನು, ಅಭದ್ರತೆಯನ್ನು ಯಾರೂ ಅನುಭವಿಸಿರಲಿಕ್ಕಿಲ್ಲ. ಸ್ವಾತಂತ್ರೋತ್ತರ ಭಾರತದಲ್ಲಿ ಹಲವು ವ್ಯರ್ಥ ಅನುಮಾನಗಳಿಗೆ, ಶಂಕೆಗಳಿಗೆ, ತಮ್ಮವರಲ್ಲ ಅನ್ನುವ ಭಾವಗಳಿಗೆ ಬಲಿಯಾದದವರು ಅವರು. ಭಾರತೀಯರ ದೃಷ್ಟಿಯಲ್ಲಿ ಪಾಕಿಸ್ತಾನದ ಏಜೆಂಟರಾಗಿಯೂ, ಪಾಕಿಸ್ತಾನೀಯರ ದೃಷ್ಟಿಯಲ್ಲಿ ಭಾರತೀಯರಾಗಿಯೂ ಬದುಕಿನ ಕಟು ವಿಡಂಬನೆಗೆ, ಕ್ರೌರ್ಯಕ್ಕೆ, ಹಿಂಸೆಗೆ, ರಕ್ತಪಿಪಾಸುತನಕ್ಕೆ ಪಾತ್ರರಾಗಿ ಅಲ್ಲಿಗೂ ಸಲ್ಲದೆ, ಇಲ್ಲಿಗೂ ಪೂರ್ತಿ ಸಲ್ಲದ ವಿಚಿತ್ರ ಹೆಣಗಾಟದ ಬದುಕದು. ಅಲ್ಲಿ ಹುಟ್ಟುವ ಪ್ರತಿ ಮಗುವೂ ಅನಾಥತೆಯನ್ನು, ಅನುಮಾನದ ಬೀಜವನ್ನು, ಅಸಹಾಯಕತೆಯನ್ನು, ಅಸ್ಥಿರತೆಯನ್ನು ತನ್ನ ಬೆನ್ನಿಗೆ ಕಟ್ಟಿಕೊಂಡೇ ಹುಟ್ಟುತ್ತದೆ. ವಿವರಿಸಲು ಬಾರದ, ಆದರೆ ಚುರುಕು ಮುಟ್ಟಿಸುವ ಮಧ್ಯಾಹ್ನದ ಕಡುಬಿಸಿಲಿನಂತಹ ಬವಣೆಯದು. ಕಾಶ್ಮೀರಿ ಮಗುವಿನ ಬದುಕಿನ ಹೋರಾಟ, ಚೈತನ್ಯದ ಅರ್ಧದಷ್ಟು ಬೆನ್ನಿಗಂಟಿದ ಬೀಜವನ್ನು ಕಳಚುವುದರಲ್ಲೇ ಕಳೆದು ಹೋಗುತ್ತದೆ.

ಅಷ್ಟು ಹೋರಾಟದ ನಂತರವಾದರೂ, ಎಲ್ಲ ಕ್ಲೀಷೆಗಳನ್ನು ದಾಟಿದ ಬಳಿಕ ಆದರೂ ಅವರ ಬದುಕಲ್ಲಿ ನೆಮ್ಮದಿ, ಶಾಂತಿ, ಸೌಹಾರ್ದ ನೆಲೆಯೂರುತ್ತದಾ ಅಂದುಕೊಂಡರೆ ಅದೂ ಇಲ್ಲ. ಅಫೀಫಾಳಂತಹ ಸಾವಿರ ಸಾವಿರ ಮಕ್ಕಳ ಬದುಕು ಅಲ್ಲಿ ಸುಮ್ಮನೆ ಕಮರಿ ಹೋಗುತ್ತಿವೆ. ನಾವಿಲ್ಲಿ ನಮ್ಮ ಫೇಸ್‌ಬುಕ್ ಗೋಡೆಗಳಲ್ಲಿ ಭಾವಸೆಲೆಯಿಲ್ಲದ ಜೊಳ್ಳು ಶಬ್ದಗಳ ಸಂತಾಪ ಸಲ್ಲಿಸುತ್ತೇವೆ. ಈಗನಿಸುತ್ತದೆ, ನಮ್ಮ ಮನೆಗಳು, ರಸ್ತೆಗಳು ವಿಶಾಲವಾದಷ್ಟು ಹೃದಯವೂ ವಿಶಾಲವಾಗಿದ್ದರೆ, ಬೆಲೆ ಹೆಚ್ಚಾದಂತೆ ಮೌಲ್ಯಗಳೂ ಹೆಚ್ಚಿದ್ದರೆ, ಚಂದ್ರನ ಬಗ್ಗೆ ಕುತೂಹಲ ಇರುವಷ್ಟೇ ಕಾಳಜಿ ನೆರೆಮನೆಯವನ ಅಶಕ್ತತೆಯ ಬಗ್ಗೆಯೂ ಇದ್ದಿದ್ದರೆ, ನಮ್ಮ ಅಹಂಕಾರವನ್ನು ಖಂಡತುಂಡ ಮಾಡುವ ಸಾಧನವೊಂದಿದ್ದರೆ, ನಮ್ಮೆಳಗೆ ಅಂತರ್ಗತವಾಗಿರುವ ಅಲ್ಲೇ ಸದ್ದಿಲ್ಲದೆ ಹರಿಯುತ್ತಿರುವ ಹಮ್ಮಿನ ವ್ಯಸನವನ್ನು ಮುರಿದು ಹಾಕಿದ್ದಿದ್ದರೆ, ನಮ್ಮಾತ್ಮವನ್ನು ಮಲಿನಗೊಳ್ಳಲು ಬಿಡದೇ ಇದ್ದಿದ್ದರೆ ಬಹುಶಃ ಅನ್ನ ಮುಂದಿಟ್ಟುಕೊಂಡು ’ನೀವು ಯಾರ ಪರ’ ಎಂದು ನಾನು ನಿಷ್ಕರುಣೆಯಿಂದ ಕೇಳುತ್ತಿರಲಿಲ್ಲವೇನೋ?

ಪ್ರಭುತ್ವವೇನೋ ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ, ಶಾಂತಿಯುತವಾಗಿದೆ ಎನ್ನುತ್ತಿದೆ. ಆದರೆ ನಿಜಕ್ಕೂ ಹಾಗಿದೆಯಾ? ಬಂದೂಕಿನ ನಳಿಗೆಯನ್ನು ಹೆಗಲ ಮೇಲೆ ಇರಿಸಿಕೊಂಡೇ ಕಾಶ್ಮೀರ ಉಸಿರಾಡುತ್ತಿದೆಯಾ? ಅಥವಾ ಸರಕಾರ ಹೇಳಿಕೊಳ್ಳುತ್ತಿರುವಂತೆ ಎಲ್ಲವೂ ’ಸರಿ’ಯಾಗಿಯೇ ಇದೆಯಾ? ಗೊಂದಲಗಳನ್ನು, ಅನುಮಾನಗಳನ್ನು ಪರಿಹರಿಸಬೇಕಾಗಿರುವ ಮಾಧ್ಯಮ ಆಳುವ ವರ್ಗದ ಕೈಗೊಂಬೆಯಾಗಿರುವಾಗ ಇವನ್ನೆಲ್ಲಾ ಯಾರ ಬಳಿ ವಿಚಾರಿಸಬೇಕು? ಅವತ್ತು ಪುಟ್ಟ ಪುಟ್ಟ ಹೆಜ್ಜೆಯಿಟ್ಟು ಮನೆ ತುಂಬಾ ಓಡಾಡಿದ ಅಫೀಫಾ ಈಗ ಬದುಕಿದ್ದರೆ ಹದಿನಾಲ್ಕೋ ಹದಿನೈದೋ ವರ್ಷದ ಹುಡುಗಿಯಾಗಿರುತ್ತಾಳೆ. ಮುಗ್ಧತನ ಇಷ್ಟಿಷ್ಟೇ ಕಳಚಿ ಈಗಾಗಲೇ ಅಲ್ಲಿನ ಕಟುವಾಸ್ತವಕ್ಕೆ ಮುಖಾಮುಖಿಯಾಗಿರುತ್ತಾಳೆ. ಆಕೆ ಮತ್ತು ಆಕೆಯಂತಹ ಸಾವಿರಾರು ಕಾಶ್ಮೀರಿ ಮಕ್ಕಳ ಬದುಕು ಸುರಕ್ಷಿತವಾಗಿರಲಿ, ಭಾರತದ, ಪ್ರಪಂಚದ ಉಳಿದ ಭಾಗದ ಮಗುವಿಗಿರುವ ತಾನಿರುವ ನೆಲದಲ್ಲಿ ತಾನು ಸದಾ ಸೆಕ್ಯೂರ್ ಆಗಿಯೇ ಇರುತ್ತೇನೆ ಅನ್ನುವ ಭಾವ ದಕ್ಕಲಿ, ಅಷ್ಟೇ.

Writer - ಫಾತಿಮಾ ರಲಿಯಾ

contributor

Editor - ಫಾತಿಮಾ ರಲಿಯಾ

contributor

Similar News