×
Ad

ವಿಕಲಚೇತನ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು: ಆರೋಪ

Update: 2019-12-30 19:00 IST

ಮಂಗಳೂರು, ಡಿ. 30: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿ.19ರಂದು ಪ್ರತಿಭಟನೆ ನಡೆಯುತ್ತಿದ್ದ ವೇಳೆ ಮನೆಗೆ ತೆರಳುತ್ತಿದ್ದ ವಿಕಲಚೇತನನ ಮೇಲೆ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬೆಂಗ್ರೆ ನಿವಾಸಿ ಝಾಕಿರ್ ಹುಸೈನ್ (48) ವಿಕಲಚೇತನ ಗಾಯಾಳು. ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಬೆಂಗ್ರೆಯಲ್ಲಿ ಬೋಟುಗಳಲ್ಲಿ ಟಿಕೆಟ್ ಕೊಡುವ ಕೆಲಸ ಮಾಡಿಕೊಂಡಿದ್ದರು.

ಘಟನೆ ವಿವರ: ‘ಸಹೋದರಿ ಅನಾರೋಗ್ಯಕ್ಕೀಡಾದ ಕಾರಣ ಮಾತನಾಡಿಸಲೆಂದು ಇನೋಳಿಗೆ ತೆರಳಿದ್ದೆ. ಅಲ್ಲಿಂದ ಮಧ್ಯಾಹ್ನದ ವೇಳೆ ಮಂಗಳೂರಿಗೆ ವಾಪಸಾದೆ. ನಗರದ ಸ್ಟೇಟ್‌ಬ್ಯಾಂಕ್‌ನಲ್ಲಿ ಬಸ್‌ನಿಂದ ಇಳಿದು ಬೆಂಗ್ರೆಯತ್ತ ತೆರಳಲು ರಿಕ್ಷಾ ಕಾಯುತ್ತಿದ್ದೆ. ಈ ವೇಳೆ ಸುಮಾರು ನಾಲ್ಕು ಮಂದಿ ಪೊಲೀಸರು ಲಾಠಿಯಿಂದ ಹಿಗ್ಗಾಮುಗ್ಗಾ ಹೊಡೆದರು’ ಎಂದು ಝಾಕಿರ್ ಹುಸೈನ್ ತಿಳಿಸಿದ್ದಾರೆ.

‘ನಾನೊಬ್ಬ ವಿಕಲಚೇತನ ಎಂದು ಹೇಳಿದರೂ ಹೊಡೆಯುವುದನ್ನು ಮುಂದುವರಿಸಿದ್ದರು. ಊನಗೊಂಡ ಬಲಗಾಲಿಗೆ ಜೋಡಿಸಿದ್ದ ಪ್ಲಾಸ್ಟಿಕ್ ಕಾಲನ್ನು ತೆಗೆದು ತೋರಿಸಿದರೂ ನಿಂದಿಸಿದ್ದಾರೆ. ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ಬೆನ್ನು, ಭುಜ, ಎರಡು ತೊಡೆಗಳ ಮೇಲೂ ಬಲವಾಗಿ ಲಾಠಿ ಬೀಸಿದ್ದಾರೆ. ಪೊಲೀಸರ ಹೊಡೆತಕ್ಕೆ ಬಲ ಮೊಣಕಾಲಿನ ಬಳಿ ನರವೊಂದು ಕಟ್ ಆಗಿದೆ. ಅಲ್ಲದೆ, ಮೊಣಕಾಲಿನ (ಕಾಲಿನ ಮಂಡಿ) ಮೂಳೆ ಬಹುತೇಕ ಪುಡಿಯಾಗಿದೆ. ಜತೆಗೆ ಕನ್ನಡಕ ಒಡೆದುಹೋಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಘಟನೆ ಬಗ್ಗೆ ಪುತ್ರನಿಗೆ ಫೋನ್ ಮೂಲಕ ತಿಳಿಸಿದೆ. ಪೊಲೀಸರಿಂದ ಥಳಿತಕ್ಕೊಳಗಾದ ನನ್ನನ್ನು ವೆನ್ಲಾಕ್ ಆಸ್ಪತ್ರೆಗೆ ಪುತ್ರ ದಾಖಲಿಸಿದ. ಅಲ್ಲಿ ಕೇವಲ ಪ್ರಾಥಮಿಕ ಚಿಕಿತ್ಸೆ ನೀಡಿ ನೋವು ನಿವಾರಕ ಇಂಜೆಕ್ಷನ್ ನೀಡಿದರು. ಅರ್ಧ ಗಂಟೆಯಲ್ಲೇ ಹೊರಕಳುಹಿಸಿದರು. ಬಳಿಕ ಬೆಂಗ್ರೆಯ ಮನೆಗೆ ತೆರಳಿದೆವು. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆದರೆ, ರವಿವಾರ ದಿಢೀರನೆ ತೀವ್ರ ತರವಾದ ಕಾಲುನೋವು ಕಂಡುಬಂದಿತು. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ನರ ಕಟ್ ಆಗಿದ್ದು, ಮೂಳೆಗೆ ಹಾನಿಯಾದುದರಿಂದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದು, ಮಂಗಳವಾರ ಮಧ್ಯಾಹ್ನ ಶಸ್ತ್ರಚಿಕಿತ್ಸೆ ನಡೆಯಲಿದೆ’ ಎಂದು ಹೇಳಿದರು.

‘ ನೈಜಾಂಶ ತಿಳಿಸಿದರೂ ಓರ್ವ ವಿಕಲಚೇತನ ವ್ಯಕ್ತಿಗೆ ಲಾಠಿಯಿಂದ ಹಲ್ಲೆ ನಡೆಸಿ, ನಿಂದಿಸಿದ ಪೊಲೀಸರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ಶಸ್ತ್ರಚಿಕಿತ್ಸೆಗೆ ಸಾವಿರಾರು ರೂ. ಅಗತ್ಯವಿದೆ. ಕುಟುಂಬ ಆರ್ಥಿಕವಾಗಿ ಸಬಲವಾ ಗಿಲ್ಲ. ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ನಗರದ ಸ್ಟೇಟ್‌ಬ್ಯಾಂಕ್‌ನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ತಂದೆ ನರಳುತ್ತಿದ್ದರು. ಅವರನ್ನು ಕೆಲವರ ಸಹಾಯದಿಂದ ಆಟೊರಿಕ್ಷಾದಲ್ಲಿ ಕೂರಿಸಿಕೊಂಡು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿಂದ ಮನೆಗೆ ಕರೆದುಕೊಂಡು ಹೋದೆವು. ರವಿವಾರ ನೋವು ಹೆಚ್ಚಳವಾಯಿತು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದೇವೆ. ವೈದ್ಯರು ಮಂಗಳವಾರ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಕುಟುಂಬಕ್ಕೆ ಹಣಕಾಸಿನ ಸಮಸ್ಯೆ ಇದೆ. ಪರಿಹಾರದ ತುರ್ತು ಅಗತ್ಯವಿದೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು.

-ಇಬ್ರಾಹೀಂ ಅನ್ಸರ್, ಗಾಯಾಳು ಝಾಕಿರ್ ಹುಸೈನ್ ಪುತ್ರ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News