×
Ad

ಪೊಲೀಸ್ ಕ್ರಮದ ವಿರುದ್ಧ ಆಕ್ರೋಶ: ತಮಿಳುನಾಡಿನ ಹಲವೆಡೆ ಸಿಎಎ ವಿರೋಧಿಸಿ ರಂಗೋಲಿ ಬಿಡಿಸಿದ ಜನರು

Update: 2019-12-30 19:00 IST

ಚೆನ್ನೈ: ಪೌರತ್ವ ಕಾಯ್ದೆ ವಿರೋಧಿ ರಂಗೋಲಿಗಳನ್ನು ಬಿಡಿಸಿದವರನ್ನು ಪೊಲೀಸರು ವಶಕ್ಕೆ ಪಡೆದುದನ್ನು ವಿರೋಧಿಸಿ ತಮಿಳುನಾಡಿನಾದ್ಯಂತ ಜನರು ತಮ್ಮ ಮನೆಗಳ ಹೊರಗೆ ಸಿಎಎ ವಿರೋಧಿ ರಂಗೋಲಿಗಳನ್ನು ಬಿಡಿಸಿದ್ದಾರೆ.

ಸೋಮವಾರ ಟ್ವಿಟರ್‍ ನಲ್ಲಿ 'ಡಿಎಂಕೆ ಕೋಲಂ ಪ್ರೊಟೆಸ್ಟ್' ಹಾಗೂ `ಕೋಲಂ ಅಗೇನ್ಸ್ಟ್‍ಸಿಎಎ' ಟ್ರೆಂಡಿಂಗ್ ಆಗಿತ್ತಲ್ಲದೆ, ನೂರಾರು ಮಂದಿ ತಮ್ಮ ಮನೆಯ ಹೊರಗಡೆ ತಾವು ಬಿಡಿಸಿದ ರಂಗೋಲಿಗಳ ಚಿತ್ರಗಳನ್ನು ಪೋಸ್ಟ್ ಮಾಡಲಾರಂಭಿಸಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಚೆನ್ನೈನಲ್ಲಿರುವ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ನಿವಾಸದೆದರೂ ಸಿಎಎ ವಿರೋಧಿ ರಂಗೋಲಿ ಬಿಡಿಸಲಾಯಿತು.

ಪರಿಸರ ಹೋರಾಟಗಾರ ನಿತ್ಯಾನಂದ ಜಯರಾಮನ್ ಅವರು ಕೂಡ  ತಮ್ಮ ಚೆನ್ನೈ ನಿವಾಸದ ಹೊರಗೆ ಸಿಎಎ ವಿರೋಧಿಸಲು ಹಾಗೂ ಮರ್ಘಳಿ ಉತ್ಸವದ ಆಚರಣೆಗೆ ಕೋಲಂ ಬಿಡಿಸಿದರೆ, ಪೊಲೀಸರಿಂದ ಪ್ರತಿಭಟನೆ ವೇಳೆ ಬಂಧನಕ್ಕೊಳಗಾಗಿದ್ದ ಹೋರಾಟಗಾರ್ತಿ ಗಾಯತ್ರಿ ಕಂಢದೈ ಕೂಡ ತಮಿಳುನಾಡಿನಾದ್ಯಂತ ಪುರುಷರು ಕೋಲಂ ಬಿಡಿಸುತ್ತಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ರವಿವಾರ ಬೆಸೆಂಟ್ ನಗರದ ರಸ್ತೆಯಲ್ಲಿ ಸಿಎಎ ವಿರೋಧಿ ರಂಗೋಲಿ ಬಿಡಿಸಿದ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದರು. "ನೋ ಸಿಎಎ" (ವೇಂಡಂ ಸಿಎಎ) ಎಂದು ಬಿಳಿ ಹಾಗೂ ಕೆಂಪು ಬಣ್ಣದ ರಂಗೋಲಿ ಬಿಡಿಸಿದ್ದಕ್ಕೆ ಗಾಯತ್ರಿ, ಮದನ್, ಆರತಿ, ಕಲ್ಯಾಣಿ ಹಾಗೂ ಪ್ರಗತಿ ಎಂಬವರನ್ನು ಬಂಧಿಸಲಾಗಿತ್ತು. ಅವರ ಬಿಡುಗಡೆಗಾಗಿ ತೆರಳಿದ ಇಬ್ಬರು ವಕೀಲರುಗಳಾದ ಟಿ ಮೋಹನ್ ಹಾಗೂ ಯೋಗೇಶ್ವರನ್ ಎಂಬವರನ್ನೂ ಪೊಲೀಸರು ಬಂಧಿಸಿದ್ದರು.

ರಸ್ತೆಗಳಲ್ಲಿ ರಂಗೋಲಿ ಬಿಡಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂಬುದು ಪೊಲೀಸರ ವಾದವಾಗಿತ್ತು. ಸುಮಾರು 90 ನಿಮಿಷಗಳ ನಂತರ  ಬಂಧಿತರನ್ನು ಪೊಲೀಸರು ಬಿಡುಗಡೆಗೊಳಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News