ದೇಶದ ಬಹುತೇಕ ಮಾಧ್ಯಮಗಳು ಸಂಘಪರಿವಾರದ ಬುಲೆಟಿನ್‍ಗಳಾಗಿ ಕಾರ್ಯನಿರ್ವಹಿಸುತ್ತಿವೆ : ಹಿರಿಯ ಪತ್ರಕರ್ತ ಶಶಿಧರ್ ಭಟ್
ಬಂಟ್ವಾಳ, ಡಿ. 30: ಈ ದೇಶದ ಬಹುತೇಕ ಮಾಧ್ಯಮಗಳು ಸಂಘಪರಿವಾರದ ಬುಲೆಟಿನ್‍ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇತಿಹಾಸವನ್ನು ತಿರುಚುವ ಮೂಲಕ ಸುಳ್ಳನ್ನೇ ಸತ್ಯ ಎಂದು ಪ್ರತಿಬಿಂಬಿಸುವ ಕೆಲಸವನ್ನು ಮಾಡುತ್ತಿವೆ. ಬಿಜೆಪಿಯು ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿದ್ದು, ಈ ಕಾರ್ಯದಲ್ಲಿ ಕಾಂಗ್ರೆಸ್‍ನ ಪಾಲೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳ ಬೇಕಿದೆ ಎಂದು ಸುದ್ದಿ ಟಿವಿಯ ಮುಖ್ಯ ಸಂಪಾದಕ, ಹಿರಿಯ ಪತ್ರಕರ್ತ ಶಶಿಧರ್ ಭಟ್ ಬೆಂಗಳೂರು ಹೇಳಿದ್ದಾರೆ.
ಎನ್‍ಆರ್ ಸಿ, ಸಿಎಎ ಕಾಯ್ದೆ ವಿರೋಧಿಸಿ, ಮಂಗಳೂರಿನಲ್ಲಿ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ಸಮಾನ ಮನಸ್ಕ ಸಂಘಟನೆಗಳು, ಎನ್‍ಆರ್ ಸಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಸೋಮವಾರ ಸಂಜೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.
ಹಿಂದೂ ರಾಷ್ಟ್ರ ಸ್ಥಾಪನೆಯ ದೃಷ್ಟಿಯಿಂದ ಕೇಂದ್ರ ಸರಕಾರವು ಮುಸ್ಲಿಮರು ಸೇರಿದಂತೆ ಜಾತಿ ವ್ಯವಸ್ಥೆಯಲ್ಲಿ ಕೆಳಗಿರುವವರನ್ನು ನಾಶ ಮಾಡುವ ಉದ್ದೇಶದಿಂದ ಇಂತಹ ಕಾನೂನನ್ನು ಜಾರಿ ತರುತ್ತಿದ್ದು, ದೇಶದ ಬಹುತ್ವದ ನಾಶಕ್ಕೆ ಹೆಜ್ಜೆಯನ್ನಿಟ್ಟಿದೆ. ನಾವೇ ಆಯ್ಕೆ ಮಾಡಿ ಕಳುಹಿಸಿದವರು ಈಗ ನೀವು ಯಾರು ಎಂದು ಕೇಳಿ ಪೌರತ್ವ ಸಾಬೀತು ಪಡಿಸಲು ಹೇಳುತ್ತಿದ್ದಾರೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪೌರತ್ವ ಕ್ಕೂ ಧರ್ಮಕ್ಕೂ ಸಂಬಂಧ ಇಲ್ಲ ಎಂದು ಸಂವಿಧಾನ ಹೇಳುತ್ತಿದೆಯಾದರೂ, ಹಿಂದೂ ರಾಷ್ಟ್ರದ ಸ್ಥಾಪನೆಯ ಉದ್ದೇಶ ದಿಂದ ಕೇಂದ್ರ ಸರಕಾರ ದೇಶದ ಬಹುತ್ವದ ನಾಶಕ್ಕೆ ಹೆಜ್ಜೆಯನ್ನಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಇದರ ವಿರುದ್ಧ ಒಕ್ಕೊರಲ ಹೋರಾಟ ಅನಿವಾರ್ಯ ಎಂದ ಅವರು, ಬ್ರಿಟೀಷರ ಏಜೆಂಟರಂತೆ ಕೆಲಸ ಮಾಡಿದ್ದಕ್ಕೆ ಟಿಪ್ಪು ಕೆಲವರನ್ನು ಕೊಂದ, ಆದರೆ, ಹಿಂದೂಗಳನ್ನು ಕೊಂದ ಎಂಬ ಸುಳ್ಳನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಮುಸ್ಲಿಮರು ಸೇರಿದಂತೆ ಜಾತಿ ವ್ಯವಸ್ಥೆಯಲ್ಲಿ ಕೆಳಗಿರುವವರನ್ನು ನಾಶ ಮಾಡುವ ಉದ್ದೇಶದಿಂದ ಇಂತಹ ಕಾನೂನನ್ನು ಜಾರಿ ತರುತ್ತಿದೆ ಎಂದು ಹೇಳಿದರು.
ಶೇ. 80ರಷ್ಟು ಮಾಧ್ಯಮಗಳು ಬ್ರಾಹ್ಮಣರ ಹಿಡಿತದಲ್ಲಿದ್ದು, ಇವರೆಲ್ಲರೂ ನಾಗಪುರದ ಚಡ್ಡಿಗಳು. ಸ್ವತಂತ್ರ ಮಾಧ್ಯಮಗಳ ಮೇಲೆ ಸರಕಾರ ಪರೋಕ್ಷ ದಾಳಿ ಮಾಡುವ ಮೂಲಕ ಸತ್ಯವನ್ನು ಮರೆಮಾಚುವ ಕಾರ್ಯ ನಡೆಯುತ್ತಿದ್ದು, ನ್ಯಾಯಾಂಗ, ಕಾರ್ಯಾಂಗ ದಲ್ಲಿ ನಂಬಿಕೆ ಇಲ್ಲದಂತಾಗಿದೆ. ಒಂದೇ ಧರ್ಮದ ಪರಿಕಲ್ಪನೆಯಲ್ಲಿ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಸಂಘಪರಿವಾರ ಮೊದಲು ಆಯ್ಕೆ ಮಾಡಿಕೊಂಡಿದ್ದು, ಇತಿಹಾಸದ ತಿರುಚುವಿಕೆ ಹಾಗೂ ಇತಿಹಾಸಗಳ ಕುರುಹುಗಳನ್ನು ನಾಶ ಮಾಡುವುದಾಗಿದ್ದು, ಬಾಬರೀ ಧ್ವಂಸ ಇದರ ಒಂದು ಭಾಗ. ಇತಿಹಾಸ ತಿರುಚುವಿಕೆ ಮೂಲಕ ಭೂತಕಾಲವನ್ನು ನಾಶಪಡಿಸಿ, ಇದೀಗ ಸುಳ್ಳನ್ನು ಬಿತ್ತರಿಸಿ ವರ್ತಮಾನದ ನಾಶವೂ ನಡೆಯುತ್ತಿದೆ ಎಂದು ಹೇಳಿದರು.
'ಟಿಪ್ಪು ಸುಲ್ತಾನ್ ಕೋಮುವಾದಿಯಲ್ಲ'
ಕೇವಲ ಈ ಮೂರು ಕಾನೂನುಗಳ ಬಗ್ಗೆ ಗಮನಹರಿಸದಿರಿ. ಆರೆಸ್ಸೆಸ್‍ನ ಅಜೆಂಡಾ ಆಲೋಚನೆ ಮಾಡದಷ್ಟು ಮೀರಿದೆ ಎಂದ ಅವರು, ಸಂವಿಧಾನದ ಮೂಲ ಆಶಯವನ್ನು ಬದಲಾವಣೆ ಜೊತೆಗೆ ಜಾತಿಯ ಕೆಳಗಡೆ ಇರುವವರ ನಾಶಪಡಿಸುವ ಯತ್ನ ಇದಾಗಿದ್ದು, ಇದರ ಹಿಂದೆ ಸಂಘಪರಿವಾರದ ದುಷ್ಟಮನಸಿನ ಅಜೆಂಡವಾಗಿದೆ ಎಂದ ಅವರು, ಟಿಪ್ಪು ಸುಲ್ತಾನ್ ಅಲ್ಪಸಂಖ್ಯಾತರ ಸಂಕೇತವಾಗಿದ್ದು, ಅಲ್ಪಸಂಖ್ಯಾತರ ಸಹಿತ ವಿವಿಧ ಸಮುದಾಯವನ್ನು ಗುರುತಿಸಿ ಅವರ ಸಂಕೇತವನ್ನು ನಾಶಪಡಿಸುವ ಯತ್ನ ಇದಾಗಿದೆ. ಇದಕ್ಕಾಗಿ ಟಿಪ್ಪುವಿನ ಮೇಲೆ ನಿರಂತರ ದಾಳಿ ಮಾಡಲಾಗುತ್ತಿದ್ದು, ಇತಿಹಾಸವನ್ನು ತಿರುಚಲಾಗುತ್ತಿದೆ. ಟಿಪ್ಪು ಸುಲ್ತಾನ್ ದೇವಸ್ಥಾನಗಳನ್ನು ನಂಬಿದ್ದು, ಕೋಮುವಾದಿಯಲ್ಲ. ಈ ಭಾಗದ ಬಹಳಷ್ಟು ದೇವಸ್ಥಾನಗಳನ್ನು ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.
'ದೇಶ ಯಾರಪ್ಪನ ಸೊತ್ತು ಅಲ್ಲ'
ದೇಶ ಸಂಘಪರಿವಾರ, ಯಾರಪ್ಪನ ಸೊತ್ತು ಅಲ್ಲ. ಸೈದ್ಧಾಂತಿಕವಾಗಿ ನಾವು ನಮ್ಮ ವೈರಿಯನ್ನು ಗುರುತಿಸಿಕೊಂಡು ಅವರ ಶಕ್ತಿಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ, ಮಾನವೀಯತೆಯ, ಸಂವಿಧಾನದ ವೈರಿಗಳು. ಬಹು ಸಂಸ್ಕೃತಿ ಗಳನ್ನು ಗುರುತಿಸಿ ನಾಶಪಡಿಸುವುದೇ ಇಂತಹ ಸರ್ವಾಧಿಕಾರಿಗಳ ಉದ್ದೇಶ. ಮೋದಿ, ಅಮಿತ್ ಶಾ ಇದಕ್ಕಾಗಿ ಒಂದೊಂದೇ ಕಾರ್ಯ ಸೂಚಿಯನ್ನು ಸಿದ್ಧಪಡಿಸಿದೆ. ಈ ಕಾರ್ಯಸೂಚಿಯು ನಾಗಪುರದಿಂದ ಆರಂಭವಾಗಿ ದೇಶವ್ಯಾಪಿಸಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೇಂದ್ರ ಸರಕಾರ, ಪ್ರಧಾನಿ ಅವರನ್ನು ಟೀಕಿಸಿದರೆ, ದೇಶದ ಆರ್ಥಿಕ ವ್ಯವಸ್ಥೆಯ ಕುರಿತು ಮಾತನಾಡಿದರೆ ಅಂತವರಿಗೆ ದೇಶದ್ರೋಹ ಪಟ್ಟ ನೀಡಲಾಗುತ್ತಿದೆ. ನಾವು ಎಂದಿಗೂ ತಾಳ್ಮೆ ಕಳೆದುಕೊಳ್ಳದೆ ಹೋರಾಟ ನಡೆಸಿದರೆ ಖಂಡಿತವಾಗಿಯೂ ಜಯ ನಮ್ಮದಾಗುತ್ತದೆ ಎಂದರು.
ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಮಾತನಾಡಿ, ಇದು ಸಂವಿಧಾನ ಉಳಿಸುವ ಹೋರಾಟವಾಗಿದ್ದು, ಹಿಂದೂ ಎಂಬ ಅಭಿಮಾನದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಶಾಂತಿ ಸಂಯಮದ ನಡವಳಿಕೆ ಇದ್ದಾಗ ಮಾತ್ರ ಪ್ರತಿಭಟನೆಗೆ ಶಕ್ತಿ ಬರುತ್ತದೆ, ಹೀಗಾಗಿ ಶಾಂತಿ ಕಾಪಾಡಿ ಎಂದವರು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಮುಹಮ್ಮದ್ ಶಾಫಿ ಅವರು ಪ್ರಸ್ತಾವನೆಗೈದು ಮಾತನಾಡಿ, ಸಂಘಪರಿವಾರದ ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಉದಾಹರಣೆ ಇದೆಯಾ ಎಂದು ಪ್ರಶ್ನಿಸಿದರಲ್ಲದೆ, ನಮ್ಮ ಹಿನ್ನೆಲೆಯ ಯಾವುದೇ ಪುರಾವೆಗಳನ್ನು ನಮ್ಮ ಬಳಿ ಕೇಳಬಾರದು, ನಾವು ಕೊಡುವುದೂ ಇಲ್ಲ. ಭಾರತ ಇದು ನಮ್ಮ ದೇಶ. ಇಲ್ಲೇ ಹುಟ್ಟಿದ್ದೇವೆ, ಇಲ್ಲೇ ಸಾಯುತ್ತೇವೆ. ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು, ಸಂಘಪರಿವಾರದವರನ್ನು ದೇಶದಿಂದ ಹೊರಗೆ ಕಳುಹಿಸುತ್ತೇವೆ ಎಂದು ಆವೇಶದಿಂದ ನುಡಿದರು.
ಅಶ್ರಫ್ ಫೈಝಿ ಕೊಡಗು ಅವರು ಉದ್ಘಾಟನಾ ಮಾತುಗಳನ್ನಾಡಿ, ಇದು ಕೇವಲ ಒಂದು ಜನಾಂಗದ ವಿರುದ್ಧದ ಕಾಯ್ದೆ ಅಲ್ಲ. ಸಂವಿಧಾನ ವಿರೋಧಿ ಕಾಯ್ದೆಯಾಗಿದೆ ಎಂದರು. ಯಾಕೂಬ್ ಸಹದಿ ಮಾತನಾಡಿ, ಈ ಪ್ರತಿಭಟನೆ ಮುಸಲ್ಮಾನರ ಪ್ರತಿಭಟನೆಯಲ್ಲ. ಈ ದೇಶದ ಸಂವಿಧಾನದ ರಕ್ಷಕರು ಸಂವಿಧಾನ ಭಕ್ಷಕರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ. ಇದೊಂದು ಶಕ್ತಿ ಪ್ರದರ್ಶನವಲ್ಲ. ಶೀಘ್ರವಾಗಿ ಹಿಂಪಡೆಯುವಂತೆ ಶಾಂತಿ, ಸಮಾಧಾನ ಉಳಿಯಬೇಕು. ಎಲ್ಲ ಜನಾಂಗದ ಒಟ್ಟು ಸೇರಿಸುವ ಕಾನೂನು ಬರಲಿ ಎಂದು ಹೇಳಿದರು.
ಅಸಯ್ಯದ್ ಯಹ್ಯಾ ತಂಙಳ್ ಅವರು ದುವಾ ನೆರವೇರಿಸಿದರು. ಪ್ರಮುಖರಾದ ಅನೀಸ್ ಕೌಸರಿ, ಮುಹಮ್ಮದ್ ಕುಂಞಿ, ಹನೀಫ್ ಕಾಟಿಪಳ್ಳ, ಖಲೀಲ್ ತಲಪಾಡಿ, ಅಥಾವುಲ್ಲಾ ಜೋಕಟ್ಟೆ, ಹನೀಫ್ ಖಾನ್, ಪಿ.ಎ.ರಹೀಂ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಾತನಾಡಿ, ಕೇಂದ್ರ ಸರಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ ವಿರುದ್ಧ ವಾಗ್ದಾಳಿ ನಡೆಸಿದರು. ಮಂಗಳೂರು ಗೋಲಿಬಾರ್ ಘಟನೆ ಉಲ್ಲೇಖಿಸಿ ಪೊಲೀಸರ ವಿರುದ್ಧವೂ ಕಿಡಿಕಾರಿದರು.
ಈ ಸಂದರ್ಭದಲ್ಲಿ ಝಾಫರ್ ಸ್ವಾದಿಕ್ ಫೈಝಿ, ರಿಯಾಝ್ ಫರಂಗಿಪೇಟೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮುನೀಶ್ ಅಲಿ, ಹಾರೂನ್ ರಶೀದ್, ಇಕ್ಬಾಲ್ ಗೂಡಿನಬಳಿ, ಉಮರ್ ಫಾರೂಕ್, ಶಾಹುಲ್ ಹಮೀದ್, ನಾಸಿರ್ ಸಜಿಪ, ಅಬೂಬಕರ್, ರಮ್ಲಾನ್ ಮಾರಿಪಳ್ಳ, ಜಿಪಂ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮೊದಲಾದವರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕೆ.ಎಚ್.ಅಬೂಬಕ್ಕರ್ ವಂದಿಸಿದರು. ಅಕ್ಬರ್ ಆಲಿ ಪೊನ್ನೋಡಿ ಕಾರ್ಯಕ್ರಮ ನಿರೂಪಿಸಿದರು.
ಮನವಿ
ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಿಗಿಬಂದೋಬಸ್ತ್ ಒದಗಿಸಲಾಗಿತ್ತು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾ ಸಭೆಗೆ ಸ್ಥಳೀಯ ವಿವಿಧ ಸಂಘಟನೆಗಳಾದ ಎಸ್ಕೆಎಸ್ಸೆಸ್ಸೆಫ್, ಎಸ್ಸೆಸ್ಸೆಫ್, ಜಮಾತೆ ಇಸ್ಲಾಮಿ ಹಿಂದ್, ಸಲಫೀ ಮೂವ್ ಮೆಂಟ್, ಆಲ್ ಇಮಾಂ ಕೌನ್ಸಿಲ್, ಕರ್ನಾಟಕ ಮುಸ್ಲಿಂ ಜಮಾಅತ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಬ್ಯಾರಿ ಫೌಂಡೇಶನ್ ಬಂಟ್ವಾಳ, ಮುಸ್ಲಿಂ ಸಮಾಜ ಬಂಟ್ವಾಳ, ಸಿಎಫ್ ಐ, ಬಂಟ್ವಾಳ ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್, ಎಸ್ಡಿಟಿಯು ಬಂಟ್ವಾಳ, ಮುಸ್ಲಿಂ ಸ್ಟೂಡೆಂಟ್ ಫಡೆರೇಶನ್, ಬಂಟ್ವಾಳ ತಾಲೂಕು ಸರ್ವ ಜಮಾತ್ ಕಮಿಟಿ ಹಾಗೂ ಕಾಂಗ್ರೆಸ್, ಎಸ್ಡಿಪಿಐ, ಜೆಡಿಎಸ್, ಮುಸ್ಲಿಂ ಲೀಗ್ ಸಹಿತ ವಿವಿಧ ಸಂಘಟನೆಗಳು ಬೆಂಬಲ ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರ ದಂಡು ಜನಸಾಗರವಾಗಿ ಬಿ.ಸಿ.ರೋಡ್‍ಗೆ ಹರಿದುಬಂತು. ಪ್ರತಿಭಟನಕಾರರು ಕೇಂದ್ರ, ರಾಜ್ಯ ಸರಕಾರಗಳ ಜನವಿರೋಧಿ, ಅಸಂವಿಧಾನಿಕ ನೀತಿಯ ವಿರುದ್ಧ ಘೋಷಣೆ ಕೂಗಿದರು.
ಮೋಶಾ... ಮನಸ್ಥಿತಿ
ಮೋ....ಶಾ ಎಂದರೆ ಮೋದಿ, ಅಮಿತ್ ಶಾ ಮನಸ್ಥಿತಿಯೂ ಮೋಸದ ಮನಸ್ಥಿತಿಯೂ ಆಗಿದೆ ಎಂದು ಬಣ್ಣಿಸಿದ ಅವರು. ಈ ದೇಶದ ಉಳಿಯುವುದಾದರೆ ಅದು ಹಿಂದು, ಮುಸ್ಲಿಮರ ಸೌಹಾರ್ದದಿಂದ ಮಾತ್ರ ಎಂದ ಗಾಂಧಿಯ ವಿರುದ್ಧ ಗೋಡ್ಸೆಯ ಮನಸ್ಥಿತಿಯು ಇದೀಗ ಪ್ರಾಬಲ್ಯಕ್ಕೆ ಬಂದಿದೆ. ಹಿಂಸಾ ರಾಜಕಾರಣದ ಮೋಶಾರ ಆಧಾರ ಸ್ತಂಭ. ಸೈನಿಕರ ಮನಸ್ಥಿತಿಯಲ್ಲಿಯೂ ಕೇಂದ್ರ ಸರಕಾರ ರಕ್ತದ ರಾಜಕಾರಣವನ್ನು ಹಪಹಪಿಸುತ್ತಿದೆ. ಸಾಮಾಜಿಕ ವಿಷಯದ ಬಗ್ಗೆ ಸೈನಿಕರು ಮಾತನಾಡುತ್ತಿರುವುದು ಇತಿಹಾಸದಲ್ಲೇ ಮೊದಲು. ದೇಶದ ಸೈನ್ಯಕ್ಕೆ ಹಿಂಸೆಯನ್ನು ಪ್ರತಿಪಾದಿಸುತ್ತಿದ್ದು, ಇದು ದೇಶಕ್ಕೆ ಅಪಾಯ. ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವೇ ನೇರ ಉದಾಹರಣೆ ಎಂದು ಶಶಿಧರ್ ಭಟ್ ಹೇಳಿದರು.