×
Ad

ಜ. 2ರಂದು ವಿವಿಧ ಪಕ್ಷ-ಸಂಘಟನೆಯಿಂದ ಸಾಮೂಹಿಕ ಧರಣಿ

Update: 2019-12-30 20:25 IST

ಮಂಗಳೂರು, ಡಿ.30: ಮಂಗಳೂರು ಗೋಲಿಬಾರ್-ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಜ.2ರಂದು ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲು ವಿವಿಧ ಪಕ್ಷಗಳು ಮತ್ತು ಸಂಘಟನೆಗಳು ನಿರ್ಧರಿಸಿದೆ.

ಇತ್ತೀಚೆಗೆ ನಗರದಲ್ಲಿ ಮಾಜಿ ಸಚಿವ, ಹಿರಿಯ ರಾಜಕಾರಣಿ ಅಮರನಾಥ ಶೆಟ್ಟಿಯ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಜಿಲ್ಲೆಯ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ ಪಕ್ಷಗಳ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಡಿಎಸ್ಸೆಸ್ (ಡಾ.ಕೃಷ್ಣಪ್ಪಸ್ಥಾಪಿತ), ಡಿಎಸ್ಸೆಸ್ (ಅಂಬೆಡ್ಕರ್ ವಾದ) ಸಂಘಟನೆಗಳ ಜಿಲ್ಲಾ ಪ್ರಮುಖರು ಗೋಲಿಬಾರ್ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿ ಧರಣಿ ನಡೆಸಲು ಮುಂದಾಗಿದ್ದಾರೆ.

ಸಿಎಎ, ಎನ್‌ಆರ್‌ಸಿ ವಿಷಯಗಳಿಗೆ ಸಂಬಂಧಿಸಿ ಜಾತ್ಯಾತೀತ, ಪಕ್ಷ, ಸಂಘಟನೆಗಳ ಜವಾಬ್ದಾರಿಯ ಕುರಿತು ಚರ್ಚಿಸಲಾಯಿತು. ಡಿ.19ರಂದು ನಡೆದ ಪೊಲೀಸ್ ದೌರ್ಜನ್ಯ, ಘರ್ಷಣೆ, ಗೋಲಿಬಾರ್ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯಲ್ಲಿ ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಸಿಪಿಎಂ ಮುಖಂಡರಾದ ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಮುನೀರ್ ಕಾಟಿಪಳ್ಳ, ಸಿಪಿಐ ಮುಖಂಡರಾದ ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಕರುಣಾಕರ್, ಜೆಡಿಎಸ್ ನಾಯಕರಾದ ಎಂಬಿ ಸದಾಶಿವ, ಅಕ್ಷಿತ್ ಸುವರ್ಣ, ಕಾಂಗ್ರೆಸ್ ಮುಖಂಡರಾದ ಪಿವಿ ಮೋಹನ್, ಸದಾಶಿವ ಉಳ್ಳಾಲ್, ಶಾಹುಲ್ ಹಮೀದ್, ರೈತ ಸಂಘದ ರವಿಕಿರಣ ಪುಣಚ, ಓಸ್ವಾಲ್ಟ್ ಪಿಂಟೊ, ದಲಿತ ಸಂಘರ್ಷ ಸಮಿತಿಯ ಎಂ. ದೇವದಾಸ್, ರಘು ಎಕ್ಕಾರು, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News