×
Ad

ಎನ್‌ಆರ್‌ಸಿ ವಿರುದ್ಧ ಧ್ವನಿ ಎತ್ತದಿದ್ದರೆ ದೇಶದ ಅಸ್ತಿತ್ವಕ್ಕೆ ಧಕ್ಕೆ : ಡಿಸಿಸಿ ವಕ್ತಾರ ಎ.ಸಿ.ವಿನಯರಾಜ್

Update: 2019-12-30 20:36 IST

ಮಂಗಳೂರು, ಡಿ.30: ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಜಾರಿಗೊಳಿಸಲು ಮುಂದಾಗಿರುವ ಎನ್‌ಆರ್‌ಸಿ ವಿರುದ್ಧ ಧ್ವನಿ ಎತ್ತದಿದ್ದರೆ, ಜನಜಾಗೃತಿ ಮೂಡಿಸದಿದ್ದರೆ ದೇಶದ ಅಸ್ತಿತ್ವಕ್ಕೆ ಧಕ್ಕೆಯಾದೀತು ಎಂದು ಡಿಸಿಸಿ ವಕ್ತಾರ ಹಾಗೂ ಕಾರ್ಪೊರೇಟರ್ ಎ.ಸಿ.ವಿನಯರಾಜ್ ಹೇಳಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಆರ್ಟಿಕಲ್ 14ರಂತೆ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು. ಆರ್ಟಿಕಲ್-15ರಂತೆ ಜಾತಿ-ಧರ್ಮ, ಜನ್ಮ ಸ್ಥಳ, ಲಿಂಗ-ಜನಾಂಗೀಯ ಎಂಬ ಭೇದ ಭಾವ ಕೂಡದೆಂದು ಸಂವಿಧಾನ ಹೇಳುತ್ತದೆ. ಹಾಗಾಗಿ ಕೇಂದ್ರ ಸರಕಾರದ ‘ಸಿಎಎ’ಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಅಲ್ಲದೆ ದೇಶದ ಗಡಿಭಾಗದ ಶ್ರೀಲಂಕಾ, ನೇಪಾಳ, ಟಿಬೆಟ್, ಬೂತಾನ್ ದೇಶಗಳಿಂದ ಭಾರತಕ್ಕೆ ಬಂದು ನಿರಾಶ್ರಿತ ಕೇಂದ್ರಗಳಲ್ಲಿ ವಾಸವಿರುವ ಎಲ್ಲಾ ಧರ್ಮದ ಜನರು ಸಿಎಎಯಿಂದ ವಂಚಿಸಲ್ಪಟ್ಟಿದ್ದಾರೆ. ಇಂತಹ ತಾರತಮ್ಯವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದರು.

ಈ ತಿದ್ದುಪಡಿಯ ಹಿಂದೆ ದೊಡ್ಡ ಷಡ್ಯಂತ್ರವಿದೆ. ಮುಸ್ಲಿಮರ ಹೆಸರನ್ನು ಈ ಕಾಯ್ದೆಯಲ್ಲಿ ಹೆಸರಿಸದೆ ಅವರನ್ನು ಹೊರಗಿಡುವುದರ ಮೂಲಕ ಬಿಜೆಪಿ ಓಟು ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಅಸ್ಸಾಂ ರಾಜ್ಯದಲ್ಲಿ ಎನ್‌ಆರ್‌ಸಿಯಿಂದ ಹೊರಗುಳಿದ 19 ಲಕ್ಷ ಜನರಲ್ಲಿ 13 ಲಕ್ಷಕ್ಕಿಂತಲೂ ಹೆಚ್ಚು ಹಿಂದೂ ಧರ್ಮೀಯರು ಹೊರಗೆ ಉಳಿದಿದ್ದು ಅವರನ್ನು ಎನ್‌ಆರ್‌ಸಿಗೆ ಸೇರಿಸುವ ಉದ್ದೇಶ ದಿಂದ ಈ ತಿದ್ದುಪಡಿ ಮಾಡಲಾಗಿದೆ ಎಂದು ವಿನಯರಾಜ್ ಆರೋಪಿಸಿದರು.

31.12.2014ಕ್ಕೆ ಸಂಬಂಧಪಟ್ಟಂತೆ ದೇಶದ ಒಳಗೆ ಪಾಕಿಸ್ತಾನ, ಅಪಘಾನಿಸ್ತಾನ, ಬಾಂಗ್ಲಾದೇಶದಿಂದ ಧಾರ್ಮಿಕ ಕಿರುಕಳಕ್ಕೆ ಒಳಪಟ್ಟು ವಲಸೆ ಬಂದವರ ಅಂಕಿ ಅಂಶಗಳ ದಾಖಲೆಯನ್ನು ಕೇಂದ್ರ ಸರಕಾರದ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ ವಿನಯರಾಜ್, ಎನ್‌ಆರ್‌ಸಿ ಯೋಜನೆಗೆ 50 ಸಾವಿರ ಕೋ.ರೂ. ಖರ್ಚಾಗಬಹುದು ಎಂಬ ಅಂದಾಜು ವೆಚ್ಚವು ಅಸ್ಸಾಂನಲ್ಲಿ ಮಾಡಿದ ವೆಚ್ಚದಿಂದ ತಿಳಿದುಬರುತ್ತದೆ. ಇದು ಈ ದೇಶಕ್ಕೆ ದೊಡ್ಡ ಹೊರೆಯಾಗಲಿದೆ. ಅಲ್ಲದೆ 130 ಕೋ.ರೂ. ಸರದಿ ಸಾಲಿನಲ್ಲಿ ನಿಂತು ತಮ್ಮದೇ ದೇಶದ ಪ್ರಜೆ ಎಂದು ಪುರಾವೆ ಸಹಿತ ರುಜುವಾತು ಮಾಡಬೇಕಾಗಿ ಬಂದಿರುವುದು ವಿಷಾದನೀಯ ಎಂದು ತಿಳಿಸಿದ್ದಾರೆ.

ಎನ್‌ಆರ್‌ಸಿ ನೋಂದಾಯಿಸಲು ಪೂರಕ ದಾಖಲೆಗಳನ್ನು ಹಾಜರುಪಡಿಸಲು ವಿಫಲವಾದಲ್ಲಿ ಅಂತಹವರನ್ನು ಅವರು ಫಾರಿನರ್ಸ್ ಟ್ರಿಬ್ಯುನಲ್/ ನ್ಯಾಯಾಲಯದಿಂದ ಅವರ ಹೆಸರನ್ನು ನೋಂದಾಯಿಸಿದ ಆದೇಶ ತರುವವರೆಗೆ ಬಂಧನ ಕೇಂದ್ರದಲ್ಲಿರಿಸಲಾ ಗುತ್ತದೆ ಎಂದ ವಿನಯರಾಜ್, ಬಿಜೆಪಿಯ ಸಂಸದರು, ನಾಯಕರು, ಸಂಘ ಪರಿವಾರದ ವರಿಷ್ಠರು ಮುಸ್ಲಿಂ ವಿರೋಧಿ ಹೇಳಿಕೆ ಗಳನ್ನು ನೀಡುತ್ತಿದ್ದಾರೆ. ಇದರಿಂದ ಅಧಿಕಾರಿ ವರ್ಗ ಪ್ರಚೋದಿತರಾಗಿ ಎನ್‌ಆರ್‌ಸಿ ಜಾರಿಗೊಳಿಸುವ ಸಂದರ್ಭ ಮುಸ್ಲಿಮರಿಗೆ ತೊಂದರೆಯಾಗುವ ಅಪಾಯವಿದೆ. ಅಲ್ಲದೆ ಮುಸ್ಲಿಮರು ಈ ಬಗ್ಗೆ ಭಯಭೀತರಾಗಿದ್ದು, ಇದನ್ನು ಹೋಗಲಾಡಿಸುವ ಜವಾಬ್ದಾರಿ ಕೇಂದ್ರ ಸರಕಾರದ್ದಾಗಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ಮತ್ತು ಗೃಹ ಸಚಿವರು ಈ ವಿಷಯಕ್ಕೆ ಸಂಬಂಧಿಸಿ ತದ್ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ದೇಶದ ಜನತೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಎನ್‌ಆರ್‌ಸಿಯಿಂದ ಮುಸ್ಲಿಮರಿಗೆ ಮಾತ್ರವಲ್ಲ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ, ಅಲೆಮಾರಿ ಜನಾಂಗ, ಪ್ರಕೃತಿ ವಿಕೋಪದಿಂದ ದಾಖಲೆಗಳನ್ನು ಕಳೆದುಕೊಂಡವರು ತೀವ್ರ ತೊಂದರೆಯನ್ನು ಅನುಭ ವಿಸಲಿದ್ದಾರೆ. ಹಾಗಾಗಿ ಇದರ ಬಗ್ಗೆ ಎಲ್ಲರೂ ಹೋರಾಟ ಮಾಡಬೇಕಿದೆ ಎಂದು ವಿನಯರಾಜ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ವಿಶ್ವಾಸ್ ಕುಮಾರ್ ದಾಸ್, ಸಂತೋಷ್ ಕುಮಾರ್, ನಝೀರ್ ಬಜಾಲ್, ಅಪ್ಪಿ, ನೀರಜ್‌ಪಾಲ್, ನಮಿತಾ ಡಿ. ರಾವ್, ಶಾಂತಲಾ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News